ಸಾರಾಂಶ
ಕಾರವಾರ: ಸಂಡೂರಿನಲ್ಲಿ ವಿಧಾನಸಭಾ ಉಪಚುನಾವಣೆ ಪ್ರಯುಕ್ತ ಪಕ್ಷದ ಪರ ಬಿರುಸಿನ ಪ್ರಚಾರ ನಡೆಸುತ್ತಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ, ಪಕ್ಷದ ನೇತಾರ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜತೆ ರೋಡ್ ಶೋದಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಸಂಡೂರಿನ ಎಚ್.ಕೆ. ಹಳ್ಳಿಯಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ರೋಡ್ ಶೋದಲ್ಲಿ ರೂಪಾಲಿ ಎಸ್. ನಾಯ್ಕ ಭಾಗವಹಿಸಿದ್ದರು. ಪ್ರಮುಖರಾದ ಜನಾರ್ದನ ರೆಡ್ಡಿ, ಅಭ್ಯರ್ಥಿ ಬಂಗಾರು ಹನುಮಂತು ಮತ್ತಿತರರು ಇದ್ದರು. ಇದಕ್ಕೂ ಮುನ್ನ ಸಂಡೂರಿನಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ಬಗ್ಗೆ ರೂಪಾಲಿ ಎಸ್. ನಾಯ್ಕ ಚರ್ಚೆ ನಡೆಸಿದರು.ಸಂಡೂರಿನ ಗ್ರಾಮೀಣ ಭಾಗವಾದ ಯಶವಂತ ನಗರ, ಮತ್ತಿತರ ಕಡೆ ರೂಪಾಲಿ ಎಸ್. ನಾಯ್ಕ ಮಹಿಳಾ ತಂಡದ ನೇತೃತ್ವ ವಹಿಸಿ ಅಬ್ಬರದ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಗ್ಗದ ಆಮಿಷಗಳನ್ನು ಒಡ್ಡಿ ಅಧಿಕಾರಕ್ಕೇರಿದೆ. ಅಧಿಕಾರಕ್ಕೆ ಬರುತ್ತಿದ್ದಂತೆ ಅಭಿವೃದ್ಧಿ, ಜನಸೇವೆಗೆ ಮೀಸಲಾದ ಹಣವನ್ನು ಕೊಳ್ಳೆ ಹೊಡೆಯುತ್ತಿದೆ. ಭ್ರಷ್ಟಾಚಾರ ಮಿತಿ ಮೀರಿದೆ. ಆಡಳಿತ ಯಂತ್ರ ಕುಸಿದು ಬಿದ್ದಿದೆ. ಅಭಿವೃದ್ಧಿ ಶೂನ್ಯವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಅಭಿವೃದ್ಧಿ, ಜನಕಲ್ಯಾಣ, ಸಂಡೂರಿನ ಪ್ರಗತಿಗೆ ಬಿಜೆಪಿ ಬದ್ಧವಾಗಿದೆ. ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿರುವ ಕಾಂಗ್ರೆಸ್ ಅನ್ನು ಈ ಚುನಾವಣೆಯಲ್ಲಿ ತಿರಸ್ಕರಿಸಿ, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕೆಂದು ಮತದಾರರಲ್ಲಿ ರೂಪಾಲಿ ಎಸ್. ನಾಯ್ಕ ಮನವಿ ಮಾಡಿದರು.ಮಹಿಳಾ ಮೋರ್ಚಾ ಅಧ್ಯಕ್ಷೆ ದೀಪಾ ಘೋಡ್ಕೆ, ಗ್ರಾಪಂ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಬಿ.ಜಿ. ಮಂಜುಳಾ, ಮಹಿಳಾ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಕುಮಟಾದಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ
ಕಾರವಾರ: ಕುಮಟಾದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಲ್ಕು ದಿನಗಳ ಕಾರ್ಯಕ್ರಮ ಆರಂಭವಾಗಿದೆ.ಸಂಘದ ರಾಷ್ಟ್ರೀಯ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ನೇತೃತ್ವದಲ್ಲಿ ಪ್ರಾಂತ, ಕ್ಷೇತ್ರ ಕಾರ್ಯಕರ್ತರ ಜತೆ ಸಂವಾದ, ನ. 10ರಂದು ಬೌದ್ಧಿಕ ವರ್ಗ, ನ. 11ರಂದು ಎಲ್ಲ ಪ್ರಾಂತ ಪ್ರಚಾರಕರೊಂದಿಗೆ ಸಭೆ ನಡೆಯಲಿದೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಂತರಿಕ ಕಾರ್ಯಕ್ರಮವಾಗಿದ್ದು, ಸಂಘದ ಸದಸ್ಯರು, ಪ್ರಚಾರಕರು ಮಾತ್ರ ಭಾಗವಹಿಸಲಿದ್ದಾರೆ. ರಾಜ್ಯದ ವಿವಿಧೆಡೆಯಿಂದಲ್ಲದೆ, ಹೊರ ರಾಜ್ಯಗಳಿಂದಲೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.