ಸಾರಾಂಶ
ಕಾರವಾರ: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನವಾದ ಸೆ. 17ರಿಂದ ಮಹಾತ್ಮ ಗಾಂಧಿ ಜನ್ಮದಿನವಾದ ಅ. 2ರವರೆಗೆ ನಡೆಯುವ ಸೇವಾ ಪಾಕ್ಷಿಕ ಅಭಿಯಾನವನ್ನು ಸಂಪೂರ್ಣ ಯಶಸ್ವಿಗೊಳಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಸೇವಾ ಪಾಕ್ಷಿಕದ ರಾಜ್ಯ ಸಹಸಂಚಾಲಕರು, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ವಿನಂತಿಸಿದರು.
ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡದಿಂದ ಶಿರಸಿಯ ಪಂಡಿತ್ ದಿನ್ ದಯಾಳ್ ಭವನದಲ್ಲಿ ಆಯೋಜಿಸಿದ್ದ ಸೇವಾ ಪಾಕ್ಷಿಕ ಅಭಿಯಾನ ಜಿಲ್ಲಾ ಕಾರ್ಯಗಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಈ ಅವಧಿಯಲ್ಲಿ ದೇಶಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೂಚನೆ ನೀಡಿದ್ದಾರೆ.ಅದರಂತೆ ನಮ್ಮ ಜಿಲ್ಲೆಯ ಎಲ್ಲ ತಾಲೂಕು, ಮಂಡಲಗಳಲ್ಲಿ ಸಮಾಜದ ಸಮಸ್ತರ ಏಳಿಗೆಗಾಗಿ ಸ್ವಚ್ಛತಾ ಅಭಿಯಾನ, ಸಸಿ ನೆಡುವ ಅಭಿಯಾನ, ರಕ್ತದಾನ ಶಿಬಿರ, ನೋಂದಣಿ ಹಾಗೂ ಪ್ರತಿಜ್ಞಾವಿಧಿ ಸ್ವೀಕಾರ, ಆರೋಗ್ಯ ಶಿಬಿರ,ನಮೋ ಸಾಕ್ಷ್ಯಚಿತ್ರ ಪ್ರದರ್ಶನಿ, ನಮೋ ಜೀವನ ಪ್ರದರ್ಶನಿ, ಪಂ.ದೀನದಯಾಳ ಉಪಾಧ್ಯಾಯ ಜನ್ಮದಿನ, ಸಾಧಕರಿಗೆ ಸನ್ಮಾನ, ಮನ್ ಕೀ ಬಾತ್ ವೀಕ್ಷಣೆ, ವಿಕಸಿತ ಭಾರತ ವಿಚಾರ ಗೋಷ್ಠಿ, ಆತ್ಮನಿರ್ಭರ ಭಾರತ ವಿಚಾರ ಗೋಷ್ಠಿ, ಸ್ಥಳೀಯ ಉತ್ಪನ್ನ, ಕರಕುಶಲ-ಗೃಹ-ಗುಡಿ ಕೈಗಾರಿಕೆಗಳ ಉತ್ಪನ್ನಗಳ,ಮಾರಾಟ ಉತ್ತೇಜನಕ್ಕಾಗಿ ಮೇಳ ಹೀಗೆ ಹಲವು ಕಾರ್ಯಕ್ರಮ ಸಂಘಟಿಸಲಾಗಿದೆ. ಎಲ್ಲ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿಸಿ ಮೋದಿ ಅವರ ಹುಟ್ಟುಹಬ್ಬಕ್ಕೆ ಕೊಡುಗೆಯಾಗಿ ನೀಡೋಣ ಎಂದು ತಿಳಿಸಿದರು.
ಸೇವಾ ಪಾಕ್ಷಿಕದ ಸಂಚಾಲಕ ಸುಬ್ರಾಯ ವಾಳ್ಕೆ ಮಾತನಾಡಿ, ಕಾರ್ಯಕ್ರಮದ ರೂಪುರೇಷೆ ತಿಳಿಸಿ, ರಕ್ತದಾನ, ಸ್ವಚ್ಛತಾ ಅಭಿಯಾನ, ವಿಚಾರಗೋಷ್ಠಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಏರ್ಪಡಿಸಲಾಗಿದೆ. ನಮ್ಮ ಜಿಲ್ಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ನಡೆಸೋಣ ಎಂದು ತಿಳಿಸಿದರು.ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಸೇವಾ ಪಾಕ್ಷಿಕ ಕಾರ್ಯಕ್ರಮ ಯಶಸ್ವಿಯಾಗಿಸಲು ನಾವೆಲ್ಲರೂ ಒಗ್ಗಟ್ಟಾಗಿ ದುಡಿಯೋಣ. ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಕಾಣಿಕೆಯಾಗಿ ನೀಡೋಣ ಎಂದರು.
ಚಿತ್ರಕಲಾ ಸ್ಪರ್ಧೆ ವಿಜೇತೆ ನವ್ಯಾ ಮಡಿವಾಳ, ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆಗಾಗಿ ದಾಂಡೇಲಿ ಮಂಡಲ ಅಧ್ಯಕ್ಷ ಬುಧವಂತ ಪಾಟೀಲ್ ಅವರಿಗೆ ಜಿಲ್ಲಾ ಬಿಜೆಪಿ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.ವೇದಿಕೆಯಲ್ಲಿ ಪ್ರಮುಖರಾದ ಕೆ.ಜಿ.ನಾಯ್ಕ್, ಆರ್.ಡಿ.ಹೆಗಡೆ, ಅಶೋಕ ಛಲವಾದಿ, ಈಶ್ವರ್ ನಾಯ್ಕ್,ಎಂ.ಜಿ.ಭಟ್,ಪ್ರೇಮಕುಮಾರ್ ನಾಯ್ಕ್, ನಿತ್ಯಾನಂದ ಗಾಂವ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಹೆಗಡೆ, ಪ್ರಶಾಂತ್ ನಾಯ್ಕ್, ಶಿವಾಜಿ ನರಸಾನಿ, ಪಕ್ಷದ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳು, ಎಲ್ಲ ಮಂಡಳ ಅಧ್ಯಕ್ಷರು, ಮಂಡಲ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಭಾರತಾಂಬೆಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರೇಮ್ ಕುಮಾರ್ ವಂದನಾರ್ಪಣೆ ಮಾಡಿದರು.