ಕನ್ನಡಪ್ರಭ ವಾರ್ತೆ ಸಿರಿಗೆರೆ

ಗ್ರಾಮೀಣ ಭಾಗದಲ್ಲಿ ಇರುವ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯಬಾರದು. ಅವರಿಗೂ ಎಲ್ಲರಂತೆ ಸಮಾನ ಅವಕಾಶಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಗ್ರಾಮಾಂತರ ಪ್ರದೇಶದಲ್ಲಿ ಸ್ವಂತ ಬಸ್‌ಗಳನ್ನು ನೀಡಿದ್ದೇನೆ ಎಂದು ಶಾಸಕ ಡಾ. ಎಂ. ಚಂದ್ರಪ್ಪ ತಿಳಿಸಿದರು.

ಇಸಾಮುದ್ರ ಹೊಸಹಟ್ಟಿಯಿಂದ ಅಜ್ಜಪ್ಪನಹಳ್ಳಿಯವರೆಗೆ 1.5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭಾನುವಾರ ಪೂಜೆ ಸಲ್ಲಿಸಿ ಮಾತನಾಡಿದರು.

ಉಚಿತವಾಗಿ ಬಸ್‌ ಸೌಕರ್ಯ ಒದಗಿಸಿದ ಮೇಲೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಬಸ್‌ನ ಚಾಲಕರ ವೇತನ, ಡೀಸೆಲ್‌ ಮುಂತಾದ ವೆಚ್ಚನ್ನೆಲ್ಲಾ ನಾನೇ ಭರಿಸುತ್ತಿದೇನೆ ಎಂದರು.

32 ವರ್ಷಗಳ ಕೆಳಗೆ ನಾನು ಭರಮಸಾಗರ ಕ್ಷೇತ್ರದಿಂದ ಶಾಸಕನಾದವನು. ಇಲ್ಲಿ ಚುನಾವಣೆಗೆ ನಿಂತಾಗ ಮತ ಕೇಳಲು ಹಳ್ಳಿಗಳಿಗೆ ಹೋಗಲೂ ರಸ್ತೆಗಳಿರಲಿಲ್ಲ. ನಾನು ಗೆದ್ದ ನಂತರ ಐದೇ ವರ್ಷದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆಗಳು ನಿರ್ಮಾಣ ಆದವು. ಈಗಲೂ ಕೂಡ ಕ್ಷೇತ್ರದ ೪೯೩ ಹಳ್ಳಿಗಳಲ್ಲಿ ಏನೇನು ಸಮಸ್ಯೆ ಇವೆ ಅವುಗಳನ್ನು ಅರಿತು ಬಗೆಹರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.


ನಾನು ಕಳ್ಳ ಬೆಕ್ಕಿನ ತರ ಓಡಾಡುವ ರಾಜಕಾರಣಿಯಲ್ಲ. ಸಾರ್ವಜನಿಕರ ಮಧ್ಯೆಯಿದ್ದುಕೊಂಡು ಧೈರ್ಯವಾಗಿ ಎದೆತಟ್ಟಿಕೊಂಡು ಚುನಾವಣೆಯಲ್ಲಿ ಮತ ಕೇಳುವ ಯೋಗ್ಯತೆಯಿಟ್ಟುಕೊಂಡು ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಿಸುತ್ತಿದ್ದೇನೆ ಎಂದರು.

ಚುನಾವಣೆ ಸಂದರ್ಭದಲ್ಲಿ ಎಲ್ಲಿಂದಲೂ ಬಂದು ತಲೆ ಕೆಡಿಸುವವರ ಮಾತುಗಳಿಗೆ ಮರುಳಾಗಬೇಡಿ. ಮತ ಹಾಕುವುದು ಒಂದು ನಿಮಿಷದ ಕೆಲಸ. ಯಾರು ನಿಮ್ಮ ಶ್ರೇಯಸ್ಸು ಬಯಸುತ್ತಾರೆ. ಕಷ್ಟ-ಸುಖಗಳನ್ನು ಕೇಳುತ್ತಾರೆ. ಗದ್ದಲ-ಗಲಾಟೆಯಾದಾಗ ಪೊಲೀಸ್ ಠಾಣೆಗೆ ಹೋಗಲು ಬಿಡದೆ ರಾಜಿ ಮಾಡಿಸುತ್ತಾರೆನ್ನುವುದನ್ನು ಆಲೋಚಿಸುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯ. ಮತ ಹಾಕಿದವರು, ಹಾಕದವರು ಎನ್ನುವ ತಾರತಮ್ಯವಿಲ್ಲದೆ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದರು.

137 ಕಿ.ಮೀ. ದೂರದಲ್ಲಿರುವ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಇನ್ನು ಮೂರ್ನಾಲ್ಕು ತಿಂಗಳಲ್ಲಿ ಪ್ರತಿ ಮನೆ ಮನೆಗೆ ಶುದ್ದವಾದ ಕುಡಿಯುವ ನೀರು ಪೂರೈಸಲಾಗುವುದು. ಸರ್ಕಾರಿ ಶಾಲೆಗೆ ಬರುವ ಬಡ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದೆಂದು ಉಚಿತವಾಗಿ ಬಸ್‍ಗಳನ್ನು ಬಿಟ್ಟಿದ್ದೇನೆ. ಪ್ರತಿದಿನ ಮನೆಯಿಂದ ಮಕ್ಕಳನ್ನು ಕರೆ ತಂದು ಶಾಲೆಯಲ್ಲಿ ಬಾಳೆಹಣ್ಣು, ಮೊಟ್ಟೆ, ಹಾಲು, ಮಧ್ಯಾಹ್ನ ಬಿಸಿಯೂಟ, ಸಂಜೆ ಪೌಷ್ಠಿಕಾಂಶವುಳ್ಳ ಕಾಳುಗಳನ್ನು ನೀಡಿ ಕಂಪ್ಯೂಟರ್ ಸೌಲಭ್ಯದ ಜೊತೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಟ್ಟು ಸಂಜೆ ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗಿ ತಲುಪಿಸಲಾಗುವುದು. ಇದಕ್ಕಿಂತ ಇನ್ನೇನು ಉಪಕಾರ ಮಾಡಬೇಕು ನಿಮಗೆ ಎಂದು ಕ್ಷೇತ್ರದ ಜನತೆಯನ್ನು ಶಾಸಕ ಡಾ.ಎಂ.ಚಂದ್ರಪ್ಪ ಪ್ರಶ್ನಿಸಿದರು.

ಭರಮಸಾಗರ ಬಿಜೆಪಿ.ಮಂಡಲ ಅಧ್ಯಕ್ಷ ಎನ್.ಟಿ.ಬಸಣ್ಣ, ಶೈಲೇಶ್ಕುಮಾರ್‌, ಕೋಗುಂಡೆ ಮಂಜುನಾಥ್‌, ಕಲ್ಲೇಶ್, ಪ್ರಾಣೇಶಪ್ಪ, ವೆಂಕಟೇಶ್‍ನಾಯ್ಕ, ಸಿದ್ದಬಸಣ್ಣ, ರಾಮನಾಯ್ಕ, ಪಾಪನಾಯ್ಕ, ಬುಡೇನ್‍ಸಾಬ್, ಸಿದ್ದಪ್ಪ, ಅರುಣ್‍ಕುಮಾರ್, ರಾಜಣ್ಣ, ತಿಪ್ಪೇಸ್ವಾಮಿ, ಶಿವಕುಮಾರ್, ರುದ್ರೇಶ್, ಅಂಜಿನಪ್ಪ, ಶಿವಣ್ಣ, ತಿಪ್ಪಣ್ಣ, ಮಂಜುನಾಥ, ಗ್ರಾಮದ ಮುಖಂಡರು ಹಾಜರಿದ್ದರು.