ಬಳ್ಳಾರಿ: ತಾಲೂಕಿನ ಹಲಕುಂದಿ ಗ್ರಾಮದ ಈಶ್ವರ ದೇವಸ್ಥಾನ ಆವರಣದಲ್ಲಿ ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಘಟಕ ಯೋಜನೆಯಡಿ ಗ್ರಾಮೀಣ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉದ್ಘಾಟಿಸಿದ ಉದ್ಯಮಿ ಎಚ್‌.ತಿಮ್ಮನಗೌಡ ಹಾಗೂ ಗ್ರಾಮದ ಮುಖಂಡ ಗಾದಿಲಿಂಗಪ್ಪ ಗ್ರಾಮೀಣ ಪರಿಸರದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಹಬ್ಬಗಳು ನಡೆಯುವಂತಾಗಬೇಕು ಎಂದು ಆಶಿಸಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಮಾತನಾಡಿ, ಗ್ರಾಮೀಣ ಭಾರತವು ತನ್ನ ವೈವಿಧ್ಯಮಯ ಸಂಸ್ಕೃತಿ, ಪರಂಪರೆ ಮತ್ತು ಜನಜೀವನದ ವಿಶಿಷ್ಟತೆಗಳಿಂದ ವಿಶ್ವದ ಗಮನ ಸೆಳೆಯುತ್ತದೆ. ಈ ಪರಂಪರೆಯನ್ನು ಜೀವಂತವಾಗಿಟ್ಟುಕೊಳ್ಳುವ ಪ್ರಮುಖ ಸಾಧನವೆಂದರೆ ಗ್ರಾಮೀಣ ಸಾಂಸ್ಕೃತಿಕ ಹಬ್ಬಗಳು. ಇವು ಕೇವಲ ಉತ್ಸವಗಳಲ್ಲ; ಜನರ ಜೀವನಶೈಲಿ, ನಂಬಿಕೆಗಳು, ಕೃಷಿ ಪದ್ಧತಿಗಳು ಮತ್ತು ಸಮುದಾಯದ ಬಾಂಧವ್ಯವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ವೇದಿಕೆಗಳಾಗಿವೆ ಎಂದು ಹೇಳಿದರು.

ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಮಾತನಾಡಿ, ಗ್ರಾಮೀಣ ಸಾಂಸ್ಕೃತಿಕ ಹಬ್ಬಗಳು ಸಾಮಾಜಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ದೂರದ ಬಂಧು-ಬಳಗಗಳು ಒಂದಾಗಿ ಸೇರಿ ಸಂತೋಷವನ್ನು ಹಂಚಿಕೊಳ್ಳುತ್ತಾರೆ. ಹೊಸ ತಲೆಮಾರಿನವರಿಗೆ ಸಂಪ್ರದಾಯಗಳನ್ನು ಪರಿಚಯಿಸುವಲ್ಲಿ ಇವು ಮಹತ್ವದ್ದಾಗಿವೆ. ಹಿರಿಯರಿಂದ ಕಿರಿಯರಿಗೆ ಮೌಲ್ಯಗಳು, ಸಂಸ್ಕೃತಿ ಮತ್ತು ನಂಬಿಕೆಗಳು ಹಸ್ತಾಂತರವಾಗುವ ಅವಕಾಶವೂ ಹಬ್ಬಗಳ ಮೂಲಕ ಸಿಗುತ್ತದೆ ಎಂದು ಹೇಳಿದರು.

ಆಧುನಿಕ ಜೀವನಶೈಲಿಯ ಪರಿಣಾಮದಿಂದ ಕೆಲವೆಡೆ ಈ ಹಬ್ಬಗಳ ಮಹತ್ವ ಕಡಿಮೆಯಾಗುತ್ತಿವೆ. ನಗರೀಕರಣ, ತಂತ್ರಜ್ಞಾನ ಮತ್ತು ಉದ್ಯೋಗದ ಹಿನ್ನೆಲೆಯಲ್ಲಿ ಯುವಕರು ಗ್ರಾಮಗಳನ್ನು ತೊರೆಯುತ್ತಿರುವುದರಿಂದ ಸಂಪ್ರದಾಯಗಳು ನಿಧಾನವಾಗಿ ಮರೆಯಾಗುವ ಭೀತಿ ಇದೆ. ಈ ಹಬ್ಬಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಗ್ರಾಮೀಣ ಸಾಂಸ್ಕೃತಿಕ ಹಬ್ಬಗಳು ನಮ್ಮ ಸಂಸ್ಕೃತಿಯ ಜೀವಾಳವಾಗಿದೆ. ಅವುಗಳನ್ನು ಕಾಪಾಡಿ ಮುಂದಿನ ಪೀಳಿಗೆಗೆ ತಲುಪಿಸುವುದು ಅತ್ಯಂತ ಅಗತ್ಯ. ಇವು ನಮ್ಮ ಗುರುತು, ನಮ್ಮ ಹೆಮ್ಮೆ ಮತ್ತು ನಮ್ಮ ಪರಂಪರೆಯ ಸಂಕೇತಗಳಾಗಿವೆ ಎಂದು ತಿಳಿಸಿದರು.


ಗ್ರಾಮದ ಪ್ರಮುಖರಾದ ಎಚ್.ಆರ್ ಮಲ್ಲನಗೌಡ, ಮಲ್ಲಿಕಾರ್ಜುನ ಗೌಡ, ಭೀಮರೆಡ್ಡಿ, ಚಂದ್ರಶೇಖರ, ಕೇಶವ, ಪಿ. ಗವಿಸಿದ್ದಪ್ಪ, ಬಿ.ಎಂ.ಪಾಟೀಲ್, ಪಿ.ಸಿದ್ದಪ್ಪ, ಯಲ್ಲಪ್ಪ ನಾಯಕ, ಟಿ.ಚಂದ್ರಶೇಖರ, ಆಲಂಬಾಷ ಮತ್ತಿತರರಿದ್ದರು. ಯರಗುಡಿ ಎಚ್‌.ಜಿ ಸುಂಕಪ್ಪ ತಂಡದಿಂದ ಜನಪದ, ಸಿರುಗುಪ್ಪದ ದಳವಾಯಿ ಅಂಬಣ್ಣ ತಂಡದಿಂದ ಸುಗಮ ಸಂಗೀತ, ಅನ್ನಪೂರ್ಣ ತಂಡದಿಂದ ರಂಗಗೀತೆಗಳು, ಹೆಚ್. ಹನುಮಂತಪ್ಪ ತಂಡದಿಂದ ದ್ರೌಪದಿ ವಸ್ತ್ರಾಪರಣ ಪೌರಾಣಿಕ ನಾಟಕ ಪ್ರದರ್ಶನ ಜರುಗಿದವು. ಮಾರುತಿ ತೊಗಲುಗೊಂಬೆ ಕಲಾ ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ ಹಾಗೂ ಟ್ರಸ್ಟಿನ ಕಾರ್ಯದರ್ಶಿ ಸಿ ತುಳಸಿ ಕಾರ್ಯಕ್ರಮ ನಿರ್ವಹಿಸಿದರು.