ಸಾರಾಂಶ
ನಮ್ಮದು ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ಕೃಷಿಯೇ ನಮ್ಮ ಜೀವಾಳ. ಹಲವಾರು ಕಾರಣಗಳಿಂದ ಕೃಷಿಯು ಇಂದು ಸಂಕಷ್ಟದಲ್ಲಿದೆ. ಗ್ರಾಮೀಣ ಸಂಸ್ಕೃತಿಯು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಾಣೆಯಾಗುವ ಆತಂಕವಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಆಧುನಿಕತೆ ಎಂಬ ಮಾಯೆಯಲ್ಲಿ ದಿನೇ ದಿನೇ ಗ್ರಾಮೀಣ ಸಂಸ್ಕೃತಿಯು ಕಾಣೆಯಾಗುತ್ತಿದೆ ಎಂದು ನಂದಿ ಗ್ರಾಮದ ಮುಖಂಡ ಹಾಗೂ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯ ಜಿ.ಆರ್.ಶ್ರೀನಿವಾಸ್ ವಿಷಾದ ವ್ಯಕ್ತಪಡಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಗಾನ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿ, ನಮ್ಮದು ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ಕೃಷಿಯೇ ನಮ್ಮ ಜೀವಾಳ. ಹಲವಾರು ಕಾರಣಗಳಿಂದ ಕೃಷಿಯು ಇಂದು ಸಂಕಷ್ಟದಲ್ಲಿದೆ. ಗ್ರಾಮೀಣ ಸಂಸ್ಕೃತಿಯು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಕಾಣೆಯಾಗುವ ಆತಂಕವಿದೆ, ಇಂದಿನ ಪೀಳಿಗೆಯು ಅಂತಹ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಹಿರಿಯ ಸಾಹಿತಿ ಲಲಿತಾ ರಾಮಮೂರ್ತಿ ಮಾತನಾಡಿ, ಗ್ರಾಮೀಣ ಭಾಗ ಸಂಸ್ಕೃತಿ ಮತ್ತು ಪರಂಪರೆಯು ವೈಜ್ಞಾನಿಕ ಚಿಂತನೆಗಳಿಂದ ಕೂಡಿದೆ, ಪ್ರತಿಯೊಂದು ಹಬ್ಬವೂ ತನ್ನದೇ ಆದ ಪರಂಪರೆಯನ್ನು ಹೊಂದಿದೆ. ಸಂಕ್ರಾಂತಿ ಹಬ್ಬವು, ಕೃಷಿ ಕಾರ್ಯಗಳೆಲ್ಲಾ ಮುಗಿದು ರೈತರು ಬೆಳೆದ ದವಸ ಧಾನ್ಯಗಳನ್ನು ಹದ ಮಾಡಿ ಕಣಜ ತುಂಬಿಕೊಂಡು ಕೃಷಿ ಚಟುವಟಿಕೆಗಳಿಂದ ವಿರಾಮ ಪಡೆದು ಆಚರಿಸುವ ಸಂಭ್ರಮದ ಆಚರಣೆಯಾಗಿದೆ. ಚಳಿಗಾಲದಲ್ಲಿ ಎಣ್ಣೆಯ ಅಂಶದ ಅವಶ್ಯಕತೆಯನ್ನು ಪರಿಗಣಿಸಿ ಎಳ್ಳು ತಿನ್ನುವುದರಿಂದ ಎಣ್ಣೆ ಅಂಶವು ದೇಹಕ್ಕೆ ಸಿಗುತ್ತದೆ. ಇದರಿಂದ ಆರೋಗ್ಯ ಸುಧಾರಿಸಲು ಸಹಕಾರಿಯಾಗುತ್ತದೆ. ಅದೇ ರೀತಿ ಜಾನುವಾರುಗಳಿಗೂ ವಿರಾಮ ಕೊಟ್ಟು ಅವುಗಳನ್ನು ತೊಳೆದು ಶೃಂಗಾರ ಮಾಡಿ ಸಂತಸ ಪಡುವುದರಿಂದ ಧನ್ಯತಾ ಭಾವ ಪಡೆಯುವುದು ಮೂಲ ಉದ್ದೇಶ. ಪರಿಸರದಲ್ಲಿ ಸಿಗುವ ವಿಧ ವಿಧದ ಹೂಗಳನ್ನು ತಂದು ಸಗಣಿಯಲ್ಲಿ ಬೆರಣಿ ಮಾಡಿ ಅದರೊಳಗೆ ಹೂಗಳನ್ನು ಅಲಂಕೃತಗೊಳಿಸಿ ಮನೆ ಬಾಗಿಲ ಬಳಿ ಗೋಡೆಗೆ ಅಂಟಿಸುವುದನ್ನು ನೋಡುವುದೇ ಒಂದು ಸೊಬಗು. ಇದು ಗ್ರಾಮೀಣ ಸೊಗಡನ್ನು ಹೆಚ್ಚಿಸುತ್ತಿತ್ತು. ಈಗ ಇವೆಲ್ಲಾ ಕಣ್ಮರೆಯಾಗಿವೆ, ಕಸಾಪ ಅವುಗಳನ್ನು ನೆನಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಸಂಕ್ರಾಂತಿ ಗಾನ ಸಂಭ್ರಮದ ಸ್ಪರ್ಧೆಯಲ್ಲಿ ಎಂ.ವಿ.ಶ್ರೀನಿವಾಸ್ ಪ್ರಥಮ, ಕುಮಾರಿ ಸೃಷ್ಟಿ ದ್ವಿತೀಯ ಹಾಗೂ ಇಬ್ರತುನ್ನಿಸಾ ತೃತೀಯ ಬಹುಮಾನ ಪಡೆದುಕೊಂಡರು. ತೀರ್ಪುಗಾರರಾಗಿ ಶಿಕ್ಷಕರಾದ ಕಾಂತಮ್ಮ ಮತ್ತು ಶೈಲಾ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ, ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಸಾಹಿತಿ ಬಿ.ಎಂ.ಪ್ರಮೀಳ, ಜಿಲ್ಲಾ ಕಸಾಪ ಸದಸ್ಯರಾದ ಸುಧಾ ವೆಂಕಟೇಶ್, ತಾಲೂಕು ಕಾರ್ಯದರ್ಶಿ ಕೆ.ಎಂ.ರೆಡ್ಡೆಪ್ಪ, ಸುಶೀಲಾ ಮಂಜುನಾಥ್, ಡಿ. ಎಂ.ಶ್ರೀರಾಮ, ಮಹಾಂತೇಶ್, ಮಂಚನಬಲೆ ಶ್ರೀನಿವಾಸ್, ಚಿಕ್ಕರೆಡ್ಡೆಪ್ಪ, ನರಸಿಂಹರಡ್ಡಿ, ಮುನೇಗೌಡ, ಲತಾ ರಾಮಮೋಹನ್, ಮಹದೇವ್, ಅಣ್ಣಮ್ಮ ,ಗೀತಾ, ಮತ್ತಿತರರು ಇದ್ದರು.