ಸಾರಾಂಶ
ಗದಗ: ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮೀಣಾಭಿವೃದ್ಧಿ ವಿವಿಯ ಪಾತ್ರ ಪ್ರಮುಖವಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತರಾದ ಜಿ. ಎಸ್. ಸಂಗ್ರೇಶಿ ಹೇಳಿದರು.
ಅವರು ಶನಿವಾರ ಸಮೀಪದ ನಾಗಾವಿಯಲ್ಲಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯ ಎನ್. ಎಸ್. ಎಸ್. ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಅವರ ಸಹಯೋಗದಲ್ಲಿ 5 ದಿನಗಳ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಈ ವಿಶ್ವವಿದ್ಯಾಲಯದ ಮಹತ್ವವನ್ನು ವಿವರಿಸುವ ಮೂಲಕ, ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯವು ಹಳ್ಳಿಗಳಾದ ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಅವಕಾಶಗಳನ್ನು ನೀಡುತ್ತದೆ. ಹಳ್ಳಿಯವರು ಶಿಕ್ಷಣ, ಕೃಷಿ ಮತ್ತು ಮೂಲಭೂತ ಸೌಲಭ್ಯಗಳಲ್ಲಿ ಅನೇಕ ಮಾರ್ಗಗಳನ್ನು ಅನ್ವೇಷಿಸಲು, ಈ ವಿಶ್ವವಿದ್ಯಾಲಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಚ್. ಕೆ. ಪಾಟೀಲರ ಕೊಡುಗೆಗಳು ಈ ಕ್ಷೇತ್ರದ ವೃದ್ಧಿಗೆ ನವಚೇತನ ನೀಡಿದಂತಿವೆ ಎಂದರು.
ನೀವು ಪ್ರತಿಯೊಬ್ಬರೂ ನಿಮ್ಮ ಹಳ್ಳಿಯ ಅಭಿವೃದ್ಧಿಗೆ ಕೈಲಾದಂತೆ ಸೇವೆ ಸಲ್ಲಿಸುವ ಮೂಲಕ ದೇಶ ಮತ್ತು ಸಮಾಜಕ್ಕೆ ಪ್ರೇರಣೆಯಾದವರಾಗಿರಿ. ಯುವಕರಲ್ಲಿ ಅಪಾರ ಶಕ್ತಿ ಇರುತ್ತದೆ, ಅದು ಭಾರತ ದೇಶವನ್ನು ನವೀಕರಿಸಲು ಅಗತ್ಯವಾಗಿದೆ ಎಂದರು.ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಎನ್ಎಸ್ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಾತನಾಡಿ, ಯುವಜನರಿಗೆ ತಮ್ಮ ಗುರಿಯನ್ನು ಪ್ರತ್ಯಕ್ಷವಾಗಿ ಗುರುತಿಸಲು, ಆತ್ಮವಿಶ್ವಾಸದಿಂದ ಬದುಕಲು ಹಾಗೂ ಸಮಾಜದ ಉತ್ತಮಕ್ಕಾಗಿ ಕಾರ್ಯನಿರ್ವಹಿಸಲು ಎನ್ಎಸ್ಎಸ್ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವದ ಜೊತೆಗೆ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಎನ್ಎಸ್ಎಸ್ ಹೊಂದಿದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎನ್ಎಸ್ಎಸ್ ಅಧಿಕಾರಿಗಳು ಮತ್ತು ರಾಜ್ಯದ 11 ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಮತ್ತು ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಎನ್ಎಸ್ಎಸ್ ಸಮಿತಿಯ ಸದಸ್ಯರು ಹಾಜರಿದ್ದರು. ಡಾ.ಚೈತ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ಮತ್ತು ಶ್ವೇತ ಕೆ. ನಿರೂಪಿಸಿದರು.