ರೈತ ಮಹಿಳೆಯರು ಹಾಗೂ ಗೃಹಿಣಿಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಉದ್ದೇಶದಿಂದ ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ ಪಡೆದುಕೊಂಡು ಅದನ್ನು ಸ್ವಉದ್ಯೋಗ ಹಾಗೂ ಆದಾಯ ಗಳಿಸುವ ಚಟುವಟಿಕೆಗಳಿಗೆ ಸದ್ಭಳಕೆ ಮಾಡಿಕೊಳ್ಳಬೇಕು

ಕಂಪ್ಲಿ: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ವಿವಿಧ ಸಹಕಾರ ಸಂಸ್ಥೆಗಳ ಸಹಯೋಗದಲ್ಲಿ ಮೆಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶನಿವಾರ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭ ಸಂಭ್ರಮದಿಂದ ಆಚರಿಸಲಾಯಿತು.

ಸಮಾರಂಭದಲ್ಲಿ ಮೆಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ ಮಾತನಾಡಿ, ಸಹಕಾರ ಸಂಘ ಗ್ರಾಮೀಣ ಭಾಗದ ರೈತರು, ಮಹಿಳೆಯರು ಹಾಗೂ ಸಣ್ಣ ವ್ಯಾಪಾರಸ್ಥರ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ವೇದಿಕೆಯಾಗಿವೆ. ಸಹಕಾರ ತತ್ವದಡಿ ಎಲ್ಲರೂ ಸಂಘಟಿತರಾಗಿ ಕಾರ್ಯ ನಿರ್ವಹಿಸಿದರೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದರು.

ರೈತ ಮಹಿಳೆಯರು ಹಾಗೂ ಗೃಹಿಣಿಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಉದ್ದೇಶದಿಂದ ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ ಪಡೆದುಕೊಂಡು ಅದನ್ನು ಸ್ವಉದ್ಯೋಗ ಹಾಗೂ ಆದಾಯ ಗಳಿಸುವ ಚಟುವಟಿಕೆಗಳಿಗೆ ಸದ್ಭಳಕೆ ಮಾಡಿಕೊಳ್ಳಬೇಕು. ಸಾಲ ಉತ್ಪಾದಕ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೆಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೈತರ ಹಿತದೃಷ್ಟಿಯಿಂದ ವಿವಿಧ ಸೌಲಭ್ಯ ಕಲ್ಪಿಸುತ್ತಿದೆ. ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ರಸಗೊಬ್ಬರ ವಿತರಣೆ, ಸಾಲ ಸೌಲಭ್ಯ ಸೇರಿದಂತೆ ಹಲವು ಸೇವೆ ಒದಗಿಸಲಾಗುತ್ತಿದೆ. ಇದರೊಂದಿಗೆ ಪಿಗ್ಮಿ ಉಳಿತಾಯ ಯೋಜನೆಯ ಮೂಲಕ ಗ್ರಾಮೀಣ ಜನರಲ್ಲಿ ಸಣ್ಣ ಉಳಿತಾಯದ ಅಭ್ಯಾಸ ಬೆಳೆಸುವ ಕಾರ್ಯವೂ ಪ್ರಗತಿಯಲ್ಲಿದೆ. ಸಂಘದ ಸದಸ್ಯರ ಸಹಕಾರದಿಂದ ಸಂಸ್ಥೆಯು ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರದ ಮೂಲ ಉದ್ದೇಶವೇ ಸಂಘಟನೆ, ಪರಸ್ಪರ ಸಹಾಯ ಹಾಗೂ ಆರ್ಥಿಕ ಪ್ರಗತಿಯಾಗಿದೆ. ಜನರು ಸಹಕಾರ ತತ್ವದಡಿ ಒಗ್ಗೂಡಿ ಕಾರ್ಯ ನಿರ್ವಹಿಸಿದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮೆಟ್ರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಡಿಮೆ ಅವಧಿಯಲ್ಲಿ ಉತ್ತಮ ಪ್ರಗತಿ ಸಾಧಿಸಿರುವುದು ಶ್ಲಾಘನೀಯ. ಸಂಘದ ಬೆಳವಣಿಗೆಗೆ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರ ಪರಿಶ್ರಮ ಮತ್ತು ಸಹಕಾರ ಪ್ರಮುಖವಾಗಿದೆ ಎಂದರು.

ಕುಷ್ಟಗಿಯ ಉಪನ್ಯಾಸಕ ಸುಭಾಷ ಎ.ಗೌಡರ ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿ, ಸಹಕಾರ ಸಂಸ್ಥೆಗಳು ಕೇವಲ ಸಾಲ ವಿತರಣೆ ಮತ್ತು ಉಳಿತಾಯಕ್ಕೆ ಸೀಮಿತವಾಗದೆ ಗ್ರಾಮೀಣ ಜನರ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿವೆ. ಕೃಷಿ, ಹೈನುಗಾರಿಕೆ, ಸಣ್ಣ ಕೈಗಾರಿಕೆ, ಮಹಿಳಾ ಸ್ವಸಹಾಯ ಗುಂಪುಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ಸಂಘಗಳು ಜನರಿಗೆ ಆರ್ಥಿಕ ಬೆಂಬಲ ನೀಡುತ್ತಿವೆ. ಸಹಕಾರ ಸಂಸ್ಥೆಗಳ ಸೇವೆ ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಶಿಸ್ತು, ಉಳಿತಾಯ ಹಾಗೂ ಸ್ವಾವಲಂಬನೆಗೆ ಆದ್ಯತೆ ನೀಡಿದಾಗ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿಡಿಸಿಸಿ ನಿರ್ದೇಶಕ ಕುರುಗೋಡಿನ ಹುಲುಗಪ್ಪ, ಬಿ.ನಾರಾಯಣಪ್ಪ, ಉಪ್ಪಾರು ಮಲ್ಲೇಶಪ್ಪ, ಎಚ್. ಶೇಖರಗೌಡ, ಬಿ.ಗಂಗಾಧರ, ಜಿ.ಎಂ. ವೀರಭದ್ರಯ್ಯ, ಗ್ಯಾನಪ್ಪ, ಚಂದ್ರಮೌಳಿ, ರಾಮಚಂದ್ರ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ, ಗೌಡ್ರು ಡಿಂಡಿ ಮಹರ್ಷಿ, ಎಂ. ಬಸವರಾಜ, ಆಡಳಿತ ಮಂಡಳಿ ಸದಸ್ಯ ಬಿ.ಗಂಗಾಧರ, ಹೊನ್ನಳ್ಳಿ ಗಂಗಾಧರ, ಗಿರೆಡ್ಡಿಮರೆಗೌಡ, ಸಿ.ಡಿ. ಪಾಂಡುರಂಗ, ಪಿ.ಶೆಕ್ಷಾವಲಿ, ಜಮಾಪುರ ವೀರಭದ್ರಪ್ಪ, ಎಚ್. ಫಕ್ಕೀರಪ್ಪ, ಅಯ್ಯಪ್ಪ ಸಿಂದಿಗೇರಿ, ಜಿ.ಚಂದ್ರಶೇಖರ, ಕೆ.ಲಕ್ಷ್ಮೀ, ಎನ್.ಮಂಜುಳಾ, ಜಿ.ನಾಗರಾಜಗೌಡ ಸೇರಿದಂತೆ ಸಹಕಾರ ಸಂಘಗಳ ಪ್ರತಿನಿಧಿ, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.