ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶ ಹಾಗೂ ದೂರದ ಪ್ರದೇಶಗಳಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಸಂಚಾರಿ ಇ-ಬೈಕ್ ಗಳು ಸಹಕಾರಿ ಆಗಲಿವೆ ಎಂದು ಜಿಪಂ ಸಿಇಒ ಡಾ.ವಾಸಂತಿ ಅಮರ್ ಹೇಳಿದರು
ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶ ಹಾಗೂ ದೂರದ ಪ್ರದೇಶಗಳಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಸಂಚಾರಿ ಇ-ಬೈಕ್ ಗಳು ಸಹಕಾರಿ ಆಗಲಿವೆ ಎಂದು ಜಿಪಂ ಸಿಇಒ ಡಾ.ವಾಸಂತಿ ಅಮರ್ ಹೇಳಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾಡಳಿತ, ಆರೋಗ್ಯ ಇಲಾಖೆಯಡಿ ಆಪ್ಟಮ್ ಇಂಡಿಯಾ ಸಂಸ್ಥೆ ಮತ್ತು ಯುನೈಟೆಡ್ ವೇ ಬೆಂಗಳೂರು ವತಿಯಿಂದ ಸಿಎಸ್ಆರ್ ಅನುದಾನದಡಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 45 ಇ-ಬೈಕ್ ಗಳನ್ನು ಹಸ್ತಾಂತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರ ಈಗಾಗಲೇ ರಾಜ್ಯಾದ್ಯಂತ ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ ಯೋಜನೆಯನ್ನು ಜಾರಿಗೊಳಿಸಿದೆ. ಇದಕ್ಕೆ ಪೂರಕವಾಗಿ ಇಂದು ಆಪ್ಟಮ್ ಇಂಡಿಯಾ ಸಂಸ್ಥೆ ನಮ್ಮ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ- ಬೈಕ್ ಗಳನ್ನು ನೀಡುತ್ತಿರುವುದು ಪ್ರಶಂಸನೀಯ. ಸಂಚಾರಿ ಇ- ಬೈಕ್ ಗಳು ತುರ್ತು ಆರೋಗ್ಯ ಸೇವೆಗಳನ್ನು ಜನರಿಗೆ ಒದಗಿಸಲಿದೆ. ಗ್ರಾಮೀಣ ಭಾಗದವರಿಗೆ ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೆ, ತುರ್ತು ಆರೋಗ್ಯ ಸೇವೆಗಳಲ್ಲಿ ವಿಳಂಬವಾಗುತ್ತದೆ. ಈ ರೀತಿಯ ಸಂದರ್ಭಗಳಲ್ಲಿ ಇ-ವಾಹನಗಳು ಆರೋಗ್ಯ ಸಿಬ್ಬಂದಿಗೆ ಸಹಾಯಕವಾಗುತ್ತವೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಆಸ್ಪತ್ರೆಗೆ ಹೋಗಲು ಸಾಧ್ಯವಾಗದವರಿಗೆ, ರೋಗಿಗಳಿಗೆ ತ್ವರಿತ ಚಿಕಿತ್ಸೆ, ಔಷಧಿಗಳನ್ನು ತಲುಪಿಸಲು ಹಾಗೂ ಮನೆ, ಮನೆಗೂ ಆರೋಗ್ಯ ಸೇವೆಯನ್ನು ಒದಗಿಸಲು ಈ ವಾಹನಗಳು ಮಹತ್ವದ ಪಾತ್ರ ವಹಿಸುತ್ತವೆ.ಇ-ಬೈಕ್‌ಗಳು ಪರಿಸರ ಸ್ನೇಹಿಯಾಗಿದ್ದು, ವಾಯುಮಾಲಿನ್ಯ ಆಗದಂತೆ ತಡೆಗಟ್ಟುತ್ತವೆ. ವಾಹನಗಳ ನಿರ್ವಹಣೆ ಸೇರಿದಂತೆ ಸರಿಯಾಗಿ ಬಳಸಿಕೊಳ್ಳಬೇಕು. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಸರಿಯಾದ ಸಮಯಕ್ಕೆ ಆರೋಗ್ಯ ಸೇವೆ ಒದಗಿಸಿ ಎಂದು ಆರೋಗ್ಯ ಸಿಬ್ಬಂದಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿಪಂ ಉಪಕಾರ್ಯದರ್ಶಿ ಶಿವಕುಮಾರ್, ಆರೋಗ್ಯಾಧಿಕಾರಿ ಡಾ.ಲಕ್ಕಾಕೃಷ್ಣಾರೆಡ್ಡಿ, ಆಪ್ಟಮ್ ಸಂಸ್ಥೆಯ ಎಂ.ಡಿ ಉಮಾ ರತ್ನಮ್ ಕೃಷ್ಣ, ಮತ್ತು ಯುನೈಟೆಡ್ ವೇ ಬೆಂಗಳೂರು ಸಂಸ್ಥೆಯ ಸಿಇಒ ರಾಜೇಶ್ ಕೃಷ್ಣನ್, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.ಬಾಕ್ಸ್.......
ಪ್ರಮುಖಾಂಶಗಳು-ಇ- ಬೈಕ್ ಗಳು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಲಿವೆ.
-ತುರ್ತು ಆರೋಗ್ಯ ಸೇವೆ ಒದಗಿಸಲಿವೆ.-ಆರೋಗ್ಯ ಸೇವೆ ಮತ್ತು ಸಿಬ್ಬಂದಿಯ ಕಾರ್ಯ ಕ್ಷಮತೆ ಹೆಚ್ಚಲಿದೆ.
-ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಭಾಗದ ಜನರಿಗೆ ಅನುಕೂಲ.-ಬಡವರು, ಮಧ್ಯಮ ವರ್ಗದವರು ಹಾಗೂ ಆಸ್ಪತ್ರೆಗೆ ತೆರಳದವರಿಗೆ ಅನುಕೂಲ.
-ಆರೋಗ್ಯ ಸೇವೆಯನ್ನು ಮತ್ತಷ್ಟು ಜನರ ಹತ್ತಿರ ಕೊಂಡೊಯ್ಯಲಿದೆ.ಫೋಟೋ-
7ಕೆಡಿಬಿಪಿ2- ಬೆಂ.ಗ್ರಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಂಚಾರಿ ಇ-ಬೈಕ್ ಹಸ್ತಾಂತರ ಕಾರ್ಯಕ್ರಮಕ್ಕೆ ಜಿಪಂ ಸಿಇಒ ವಾಸಂತಿ ಅಮರ್ ಚಾಲನೆ ನೀಡಿದರು.