ಸಾರಾಂಶ
ಗ್ರಾಮೀಣ ಕೈಗಾರಿಕಾ ಇಲಾಖೆಯಿಂದ ಅಕ್ರಮ ಆರೋಪ । ಗ್ರಾಮೀಣ ಕರಕುಶಲಕರ್ಮಿಗಳಿಗೆ ಟೂಲ್ ಕಿಟ್ ಪೂರೈಸುವ ಯೋಜನೆ
ಗೋಪಾಲ್ ಯಡಗೆರೆಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜ್ಯದ ವಿವಿಧ ಇಲಾಖೆಗಳಲ್ಲಿ ದಿನಕ್ಕೊಂದು ಹಗರಣ ಹೊರಗೆ ಬರುತ್ತಿರುವುದರ ನಡುವೆಯೇ ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಕೈಗಾರಿಕಾ ಇಲಾಖೆಯ ವತಿಯಿಂದ ಕರೆಯಲಾಗಿರುವ ಟೆಂಡರ್‌ನಲ್ಲಿ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.ಈ ಟೆಂಡರ್ ನಲ್ಲಿ ಆಯ್ದ ಕೆಲವೇ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಗೋಲ್‌ಮಾಲ್ ನಡೆಸುತ್ತಿದ್ದಾರೆ ಎಂದು ಟೆಂಡರ್ ವಂಚಿತರು ಆರೋಪಿಸಿದ್ದು, ಮೇಲ್ನೋಟಕ್ಕೆ ಇದು ಸತ್ಯ ಎಂದು ಹೇಳಲಾಗುತ್ತಿದೆ.
ಏನಿದು ಆರೋಪ?:ಗ್ರಾಮೀಣ ಕೈಗಾರಿಕಾ ಇಲಾಖೆ ವತಿಯಿಂದ ಗ್ರಾಮೀಣ ಕರಕುಶಲ ಕರ್ಮಿಗಳಿಗೆ ಟೂಲ್ ಕಿಟ್ ಪೂರೈಸುವ ಸಂಬಂಧ ಕರೆದಿರುವ ಲಕ್ಷಾಂತರ ರುಪಾಯಿ ಮೌಲ್ಯದ ಟೆಂಡರ್‌ನಲ್ಲಿ ಈ ಗೋಲ್‌ಮಾಲ್ ನಡೆದಿದೆ ಎಂಬುದು ಇಲಾಖೆಯಲ್ಲಿ ಕೆಲಸ ಮಾಡುವ ಗುತ್ತಿಗೆದಾರರ ಆರೋಪ.
ಸುಮಾರು 39 ಲಕ್ಷ ರುಪಾಯಿ ಮೌಲ್ಯದ ಇ ಟೆಂಡರ್ ಕರೆದಿರುವ ಇಲಾಖೆ ಇದಕ್ಕಾಗಿ ಅಲ್ಪ ಸಮಯವನ್ನು ನೀಡಿದ್ದು, ಇ ಟೆಂಡರ್ ಮೂಲಕ ಸಲ್ಲಿಸಬೇಕಾದ ದಾಖಲೆ ಒಂದುಗೂಡಿಸಲು ಆಸಕ್ತ ಹಾಗೂ ಹೊಸದಾಗಿ ಟೆಂಡರ್ ಹಾಕಲು ಇಚ್ಛಿಸುತ್ತಿರುವವರಿಗೆ ತೊಡಕಾಗಿ ಪರಿಣಮಿಸಿದೆ. ಇದು ಸಮಸ್ಯೆಯ ಮೂಲ.ಸಾಲು ಸಾಲು ರಜೆಯ ನಡುವೆ ಅಲ್ಪ ಸಮಯವನ್ನು ನಿಗದಿಪಡಿಸುವ ಮೂಲಕ ಅಧಿಕಾರಿಗಳು ಈ ತನಕ ಟೆಂಡರ್ ಹಾಕುತ್ತಾ ಬಂದಿರುವ ಕೆಲವರಿಗೆ ಅನುಕೂಲವಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ವಂಚಿತರು ಆರೋಪಿಸಿದ್ದಾರೆ.
ಗ್ರಾಮೀಣ ಪ್ರದೇಶದ ಬಾರ್ಬರ್, ಕಾರ್ಪೆಂಟರ್, ಟೈಲರ್ ಸೇರಿದಂತೆ ವಿವಿಧ ಕುಶಲ ಕರ್ಮಿಗಳಿಗೆ ಕಿಟ್ ನೀಡುವ ಸಂಬಂಧ ಟೆಂಡರ್ ಸಲ್ಲಿಕೆಗೂ ಮೊದಲೇ ಸ್ಯಾಂಪಲ್ ಕಿಟ್ ಸಲ್ಲಿಸಬೇಕಿದ್ದು ಇದಕ್ಕೂ ಕಡಿಮೆ ಸಮಯ ನಿಗದಿಪಡಿಸಲಾಗಿದೆ.ಕಳೆದ ವರ್ಷ ಡಿಸೆಂಬರ್ 17 ರಂದು ಇ ಟೆಂಡರ್ ಕರೆದಿರುವ ಇಲಾಖೆ ಅಧಿಕಾರಿಗಳು ಸ್ಯಾಂಪಲ್ ಕಿಟ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆ ದಿನವಾಗಿ ನಿಗದಿಪಡಿಸಿದ್ದರು. ಟೆಂಡರ್ ಸಲ್ಲಿಕೆಗೆ ಜನವರಿ 4ರ ತನಕ ಅವಕಾಶ ನೀಡಲಾಗಿದೆ. ಈ ನಡುವೆ ಟೆಂಡರ್ ಸಲ್ಲಿಸುವ ವೇಳೆ ಸಲ್ಲಿಸಬೇಕಾಗಿರುವ ಹಲವು ದಾಖಲೆಗಳನ್ನು ಸರ್ಕಾರಿ ಕಚೇರಿಗಳಿಂದ ಪಡೆಯಬೇಕಿದೆ. ಆದರೆ ಈ ನಡುವೆ ಕ್ರಿಸ್‌ಮಸ್ ಸೇರಿದಂತೆ ಹಲವು ರಜೆಗಳು ಬಂದಿದ್ದು, ಪ್ರತಿಯೊಂದು ಅಧಿಕೃತ ಹಾಗೂ ದೃಢೀಕೃತ ದಾಖಲೆಯೇ ಆಗಿರಬೇಕು. ಹಾಗೆಯೇ ಸ್ಯಾಂಪಲ್ ಕಿಟ್ ಹಾಜರುಪಡಿಸಲೂ 25 ಕ್ಕೂ ಹೆಚ್ಚು ಗುಣಮಟ್ಟದ ಸಾಮಾಗ್ರಿಗಳನ್ನೇ ಖರೀದಿಸಬೇಕಿದೆ. ಇಷ್ಟೆಲ್ಲವನ್ನು ಕಡಿಮೆ ಸಮಯದಲ್ಲಿ ಹೇಗೆ ಪೂರೈಸಲು ಸಾಧ್ಯ ಎಂದು ಟೆಂಡರ್ ವಂಚಿತರು ಪ್ರಶ್ನಿಸುತ್ತಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ ಆಸುಪಾಸು ಇಲಾಖೆ ಕರೆಯುವ ಟೆಂಡರ್‌ನಲ್ಲಿ ಕೆಲವೇ ಜನರು ಭಾಗವಹಿಸುತ್ತ ಬಂದಿದ್ದಾರೆ. ತರಾತುರಿಯಲ್ಲಿ ಟೆಂಡರ್ ಕರೆಯುವ ಅಧಿಕಾರಿಗಳು ಹೊಸಬರು ಯಾರೂ ಟೆಂಡರ್ ಸಲ್ಲಿಸಲು ಬಂದರೆ ಇಲ್ಲದ ಪ್ರಶ್ನೆ ಹಾಗೂ ನೆಪಗಳನ್ನು ಹೇಳಿ ಟೆಂಡರ್ ಸಲ್ಲಿಸದಂತೆ, ಸ್ಯಾಂಪಲ್ ಕಿಟ್ ಹಾಜರುಪಡಿಸದಂತೆ ನೋಡಿಕೊಳ್ಳುತ್ತಾರೆ ಎಂದು ಆರೋಪಿಸಲಾಗಿದೆ.ಕೆಲವೇ ಕೆಲವು ಟೆಂಡರ್‌ನಲ್ಲಿ ಭಾಗವಹಿಸಿ ಅದರಲ್ಲಿ ಮೊದಲೇ ಮ್ಯಾಚ್ ಫಿಕ್ಸಿಂಗ್ ಆದ ರೀತಿಯಲ್ಲಿ ಒಬ್ಬನೇ ಒಬ್ಬ ವ್ಯಕ್ತಿಗೆ ಟೆಂಡರ್ ಸಿಗುತ್ತಿರುವುದನ್ನು ನೋಡಿ ಈ ಬಾರಿ ನಾವೂ ಟೆಂಡರ್ ಹಾಕಲು ಮುಂದಾಗಿದ್ದೇವೆ. ಆದರೆ ಇಲಾಖೆಯ ಎಫ್ ಡಿಎ ಇಲ್ಲ ಸಲ್ಲದ ನೆಪ ಹೇಳಿ ಟೆಂಡರ್ ಹಾಕುವುದನ್ನು ತಪ್ಪಿಸಿದ್ದಾರೆ ಎಂದು ಅವಲತ್ತುಕೊಳ್ಳುತ್ತಾರೆ.
ಗ್ರಾಮೀಣ ಕೈಗಾರಿಕಾ ಇಲಾಖೆಯ ವತಿಯಿಂದ ಕರೆದಿರುವ ಟೆಂಡರ್‌ನಲ್ಲಿ ಭಾಗವಹಿಸಲು ಅಲ್ಪಾವಧಿಯನ್ನು ನಿಗದಿಪಡಿಸಲಾಗಿದೆ. ದಾಖಲೆ ಸಲ್ಲಿಕೆಗೆ ಸಮಯ ಕಡಿಮೆ ಇದ್ದು ಟೆಂಡರ್ ಸಮಯವನ್ನು ವಿಸ್ತರಿಸುವಂತೆ ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಇದಕ್ಕೆ ಸೂಕ್ತ ಪ್ರತಿಕ್ರಿಯೆ ಸಿಗದಿರುವುದನ್ನು ನೋಡಿದರೆ ಇದರಲ್ಲಿ ಗೋಲ್‌ಮಾಲ್ ಹಾಗೂ ಮ್ಯಾಚ್ ಫಿಕ್ಸಿಂಗ್ ಆಗಿರುವ ಅನುಮಾನ ಮೂಡುತ್ತಿದೆ.ಎಸ್.ಎಂ.ದಿನೇಶ್, ಟೆಂಡರ್ ವಂಚಿತರು.
ಇಲಾಖೆಯಿಂದ ಕರೆದಿರುವ ಟೆಂಡರ್ನಲ್ಲಿ ಎಲ್ಲಾ ಮಾರ್ಗಸೂಚಿಯನ್ನು ಪಾಲಿಸಲಾಗಿದೆ. ಸರ್ಕಾರದ ಅನುದಾನ ಹಿಂದಕ್ಕೆ ಹೋಗಬಾರದು ಎಂಬ ಕಾರಣಕ್ಕೆ ಬೇಗನೇ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದೇವೆ. ಇ ಟೆಂಡರ್‌ನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. ಆದಾಗ್ಯೂ ಟೆಂಡರ್ ಅವಧಿ ವಿಸ್ತರಣೆಯ ಮನವಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದುವರಿಯುತ್ತೇವೆ.ಸುರೇಶ್, ಉಪ ನಿರ್ದೇಶಕ, ಗ್ರಾಮೀಣ ಕೈಗಾರಿಕಾ ಇಲಾಖೆ.