ಹಳವುದರ ಗ್ರಾಮದ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲಾ ವರ್ಷದ ಹರುಷ ಕಾರ್ಯಕ್ರಮವನ್ನು ತಜ್ಞರು ಉದ್ಘಾಟಿಸಿದರು. ಹಳವುದರ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯ ಶಾಲಾ ವರುಷದ ಹರುಷ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಅಭಿನಂದಿಸಲಾಯಿತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಹಳ್ಳಿಗಳಲ್ಲಿ ನೆಲೆಯೂರಿರುವ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅಂತಹ ಸಂಸ್ಥೆಗಳು ಗ್ರಾಮಾಂತರ ಮಟ್ಟದಲ್ಲಿಯೇ ಜನ್ಮ ತಾಳಿವೆ. ಪುಟ್ಟ ಗ್ರಾಮವಾದ ಹಳವುದರದಲ್ಲಿ ಸುಂದರ ಪರಿಸರ ಸೃಷ್ಟಿಸಿಕೊಂಡು ಶಾಲಾ ಸಮುಚ್ಛಯವೊಂದು ತಲೆ ಎತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಮೆರಿಕದ ಫ್ರಾಂಕ್‌ಫೋರ್ಡ್ ಇಂಟರ್‌ನ್ಯಾಷನಲ್ ವಿಶ್ವವಿದ್ಯಾಲಯದಿಂದ ಮಲ್ಟಿ-ಸೆನ್ಸರಿ ಎಕ್ಸ್‌ಪೀರಿಯೆನ್ಷಿಯಲ್ ಲರ್ನಿಂಗ್ ಶಿಕ್ಷಣದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ.ಫಾತೀಮಾ ರಫೀವುಲ್ಲಾ ಅಭಿಪ್ರಾಯಪಟ್ಟರು.

ಸಿರಿಗೆರೆ ಸಮೀಪದ ಹಳವುದರದ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾಲಾ ವರುಷದ ಹರುಷ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರಗಳಲ್ಲಿ ದೊರೆಯುವ ಶಿಕ್ಷಣಕ್ಕೆ ಸರಿಸಾಟಿಯಾಗಬಲ್ಲಂತ ಶಿಕ್ಷಣವನ್ನು ಗ್ರಾಮಾಂತರದಲ್ಲಿ ಸ್ಥಾಪಿತವಾಗಿರುವ ಶಾಲೆಗಳು ಈಗ ನೀಡುತ್ತಿವೆ. ಇಂತಹ ಪರಿಸರಕ್ಕೆ ಪೋಷಕರೂ ಕೂಡ ಮಾರು ಹೋಗಿದ್ದಾರೆ. ಹಳ್ಳಿಗಳ ಮಟ್ಟದಲ್ಲಿ ನಡೆಯುತ್ತಿರುವ ಶಾಲೆಗಳಲ್ಲಿ ಮೌಲ್ಯ ಮತ್ತು ಸಂಸ್ಕಾರಗಳು ದೊರೆಯುತ್ತಿವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಚಳ್ಳಕೆರೆಯ ವಾರಿಯರ್ಸ್‌ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ನರೇಂದ್ರ ಬಾಬು ಗ್ರಾಮಾಂತರ ಮಟ್ಟದಲ್ಲಿ ಇಂತಹ ಸಂಸ್ಥೆಯೊಂದು ತಲೆ ಎತ್ತಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಸಂತಸ. ಇಲ್ಲಿಯ ಮಕ್ಕಳು ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ ಎಂದರು.

ದಾವಣಗೆರೆ ಬಾಪೂಜಿ ಎಂಜಿನಿಯರಿಂಗ್‌ ಕಾಲೇಜ್‌ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಎಲ್.‌ ಸಂತೋಷ್‌, ನವ ನಾಗರೀಕತೆಯಿಂದ ದೂರವಿದ್ದು ವಾಸ್ತವ ಜಗತ್ತಿಗೆ ತೆಗೆದುಕೊಳ್ಳಲು ಇಂತಹ ಪರಿಸರದಲ್ಲಿ ಶಿಕ್ಷಣ ನೀಡುತ್ತಿರುವುದು ಶುಭದ ಸೂಚನೆ. ಇಲ್ಲಿಯ ಮಕ್ಕಳಿಗೆ ಉಜ್ವಲ ಭವಿಷ್ಯ ದೊರೆಯಲಿ, ಅವರ ಸಾಧನೆ ಇನ್ನೂ ಹೆಚ್ಚಾಗಲಿ ಎಂದರು.

ಸ್ನೇಹಪ್ರಿಯ ವಿದ್ಯಾಸಂಸ್ಥೆಯ ಗೌರವಾಧ್ಯಕ್ಷ ಎಚ್.ಸಿ.ಶರಣಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಸಾಪಕ ಎಚ್.‌ಸಿ.ಪ್ರಸನ್ನಕುಮಾರ್‌ ತಮ್ಮ ಶಾಲೆಯ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರತಿಶತ 100ರಷ್ಟು ಫಲಿತಾಂಶ ತಂದುಕೊಡುತ್ತಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಆರನೇ ಸ್ಥಾನವನ್ನು ನಮ್ಮ ಶಾಲೆಯ ವಿದ್ಯಾರ್ಥಿನಿ ಗಳಿಸಿದ್ದಾರೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ಮಮತಾ ಪ್ರಸನ್ನಕುಮಾರ್‌, ಶಾಲಾ ಮಕ್ಕಳ ಪೋಷಕರು, ಶಿಕ್ಷಕರು ಭಾಗಿಯಾಗಿದ್ದರು. ಶೈಕ್ಷಣಿಕ ಚಟುವಟಿಕೆಗಳಲ್ಲಿ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳನ್ನು ಹಾಗೂ ಶಾಲಾ ಶಿಕ್ಷಕರನ್ನು ಈ ಸಂದರ್ಭದಲ್ಲಿ ನೆನಪಿನ ಕಾಣಿಕೆ ನೀಡುವ ಮೂಲಕ ಅಭಿನಂದಿಸಲಾಯಿತು.