ಫೈನಲ್ ಪಂದ್ಯ ಸೇರಿ ಟೂರ್ನಿಯುದ್ದಕ್ಕೂ ಆಲ್‌ರೌಂಡ್ ಪ್ರದರ್ಶನ ನೀಡಿದ ರೂರಲ್ ಕಿಂಗ್ಸ್‌ನ ಶಿವಾನಂದ ಹಿರೇಮಠ ಅವರು ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಜತೆಗೆ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಗದಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಗದಗ ಮೀಡಿಯಾ ಕ್ರಿಕೆಟ್ ಲೀಗ್‌ನ ಅಂತಿಮ ಹಣಾಹಣಿಯಲ್ಲಿ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್‌ಗಳ ಅಂತರದ ಗೆಲುವು ದಾಖಲಿಸುವ ಮೂಲಕ ರೂರಲ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ಟೂರ್ನಿಯುದ್ದಕ್ಕೂ ಸತತ ಜಯ ಗಳಿಸಿದ್ದ ನೈಟ್ ರೈಡರ್ಸ್ ತಂಡವು ರೂರಲ್ ಕಿಂಗ್ಸ್‌ನ ಆಲ್‌ರೌಂಡ್ ಪ್ರದರ್ಶನಕ್ಕೆ 5 ವಿಕೆಟ್‌ಗಳ ಅಂತರದಿಂದ ಸೋಲನುಭವಿಸಿ ರನ್ನರ್ ಅಪ್‌ಗೆ ತೃಪ್ತಿ ಪಡಬೇಕಾಯಿತು.ಫೈನಲ್ ಪಂದ್ಯ ಸೇರಿ ಟೂರ್ನಿಯುದ್ದಕ್ಕೂ ಆಲ್‌ರೌಂಡ್ ಪ್ರದರ್ಶನ ನೀಡಿದ ರೂರಲ್ ಕಿಂಗ್ಸ್‌ನ ಶಿವಾನಂದ ಹಿರೇಮಠ ಅವರು ಪಂದ್ಯ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಜತೆಗೆ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ನೈಟ್ ರೈಡರ್ಸ್‌ನ ಮಂಜು ಪತ್ತಾರ ಉತ್ತಮ ಬಾಲರ್ ಪ್ರಶಸ್ತಿಗೆ ಭಾಜನರಾದರು.
ಭಾನುವಾರ ಸುರಿದ ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ರೂರಲ್ ಕಿಂಗ್ಸ್‌ನ ಬೌಲಿಂಗ್ ಪಡೆಯನ್ನು ನೈಟ್ ರೈಡರ್ಸ್ ತಂಡದ ಆರಂಭಿಕರಾದ ಸುರೇಶ ಕಡ್ಲಿಮಟ್ಟಿ, ಮಂಜು ಪತ್ತಾರ ಅವರು ಉತ್ತಮವಾಗಿ ಎದುರಿಸಿ 67 ರನ್‌ಗಳ ಜೊತೆಯಾಟವಾಡಿದರು.ಸುರೇಶ ಕಡ್ಲಿಮಟ್ಟಿ 33, ಮಂಜು ಪತ್ತಾರ 33, ಅರುಣಕುಮಾರ ಹಿರೇಮಠ 20 ರನ್ ಗಳಿಸಿದರು. ಅಂತಿಮವಾಗಿ ನಿಗದಿತ 12 ಒವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿತು. ರೂರಲ್ ಕಿಂಗ್ಸ್ ತಂಡದ ಪರವಾಗಿ ಸಂಜೀವ್ ಪಾಂಡ್ರೆ ಹಾಗೂ ಶಿವಾನಂದ ಹಿರೇಮಠ ತಲಾ ಒಂದು ವಿಕೆಟ್ ಪಡೆದರು.
ಇದಕ್ಕುತ್ತರವಾಗಿ 103 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ರೂರಲ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಶಿವಾನಂದ ಹಿರೇಮಠ ಏಕಾಂಗಿಯಾಗಿ ಹೋರಾಟ ನಡೆಸಿ 36 ಎಸೆತಗಳಲ್ಲಿ 55 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನೈಟ್ ರೈಡರ್ಸ್ ಪರ ಮಂಜು ಪತ್ತಾರ 2 ವಿಕೆಟ್, ಸುರೇಶ ಕಡ್ಲಿಮಟ್ಟಿ ಹಾಗೂ ಸಂಗನಗೌಡ ಖಾನಪ್ಪಗೌಡ್ರ ತಲಾ 1 ವಿಕೆಟ್ ಪಡೆದರು.ಅಂತಿಮವಾಗಿ ಚಾಂಪಿಯನ್ ಆದ ರೂರಲ್ ಕಿಂಗ್ಸ್ ತಂಡಕ್ಕೆ, ರನ್ನರ್ ಅಪ್ ಆದ ನೈಟ್ ರೈಡರ್ಸ್ ತಂಡಕ್ಕೆ ಕಾನಿಪ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಅವರು ಟ್ರೋಫಿ ವಿತರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಅರುಣಕುಮಾರ ಹಿರೇಮಠ ಸೇರಿ ರೈರಲ್ ಕಿಂಗ್ಸ್ ತಂಡದ ಮಾಲೀಕರಾದ ಜಗದೀಶ ಪೂಜಾರ, ಆರ್‌ಸಿಬಿ ತಂಡದ ಅಜಿತ ಹೊಂಬಾಳಿ, ವಿನ್ನರ್ಸ್ ತಂಡ ಅನಂತ ಕಾರ್ಕಳ, ಸುನೀಲ ತೆಂಬದಮನಿ, ಟಿ.ಎನ್. ಭಾಂಡಗೆ, ನೈಟ್ ರೈಡರ್ಸ್ ತಂಡದ ಎಚ್.ಎಂ. ಶರೀಫನವರ, ಆನಂದ ಸಾಲಿಗ್ರಾಮ, ಆನಂದಯ್ಯ ವಿರಕ್ತಮಠ, ರವಿಕಾಂತ ಅಂಗಡಿ, ದೇವಪ್ಪ ಲಿಂಗದಾಳ, ವೆಂಕಟೇಶ ಇಮರಾಪೂರ, ಸಂತೋಷ ಕೊಣ್ಣೂರ ಸೇರಿದಂತೆ ವರದಿಗಾರರು ಹಾಗೂ ಛಾಯಾಗ್ರಾಹಕರು ಇದ್ದರು.
ಪಂದ್ಯಾವಳಿ ಯಶಸ್ವಿ: ಕಾನಿಪ ವತಿಯಿಂದ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ನಾಲ್ಕು ತಂಡಗಳ ಮಾಲೀಕರು, ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಹಕಾರದಿಂದ ಪಂದ್ಯಾವಳಿ ಯಶಸ್ವಿಗೊಂಡಿದ್ದು, ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕಾನಿಪ ಜಿಲ್ಲಾಧ್ಯಕ್ಷರಾದ ರಾಜು ಎಂ. ಹೆಬ್ಬಳ್ಳಿ ತಿಳಿಸಿದರು.