ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಜಾನಪದ ಸಾಹಿತ್ಯದ ಮಾಲಿಕರು ಗ್ರಾಮೀಣರು. ಸಮುದಾಯದ ಅಂಕು ಡೊಂಕುಗಳನ್ನು ತಿದ್ದುವ ಸಾಮರ್ಥ್ಯ ಜಾನಪದ ಸಾಹಿತ್ಯಕ್ಕಿದೆ. ಸರಳ ಭಾಷೆಯಿಂದ ಜನಪದ ಸಾಹಿತ್ಯ ಕೂಡಿದೆ ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಜಿ ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದ ಲಿಂ.ಸಿದ್ದಲಿಂಗ ಸ್ವಾಮೀಜಿಗಳ 92 ನೇ ಜಾತ್ರಾಮಹೋತ್ಸವದಂಗವಾಗಿ ವಚನ ಶಿಲಾಶಾಸನ ಮಂಟಪ ಆವರಣದಲ್ಲಿ ಜಿಲ್ಲಾ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಗೋಷ್ಠಿಯಲ್ಲಿ ಮಾತನಾಡಿ, ನಮ್ಮೆಲ್ಲರ ಹಿರಿಯರು ಜಾನಪದ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿಪಾದಿಸಿ ಅದರಂತೆ ನಡೆದು ಸುಂದರ ಸೌಹಾರ್ದತೆಯ ಮೂಲಕ ಜೀವನ ಕಟ್ಟಿಕೊಂಡು ಮಾದರಿಯಾಗಿದ್ದಾರೆ ಎಂದರು.
ಜಾನಪದ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಮೌಖಿಕ ಪರಂಪರೆಯಿಂದ ಬೆಳೆದು ಬಂದ ಜನಸಾಮಾನ್ಯರ ಸಾಹಿತ್ಯವಾಗಿದೆ. ಜನಪದ ಗೀತೆಗಳು, ಕಥೆಗಳು, ಗಾದೆಗಳು, ಒಗಟುಗಳು ಪ್ರಖ್ಯಾತಗೊಂಡಿವೆ. ರಾಜ್ಯದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ಜನಪದರ ಆಸ್ತಿ ಎಂದು ಶ್ಲಾಘಿಸಿದರು.ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ಜಾನಪದ ಸಾಹಿತ್ಯ ಸಮಾಜದ ಜೀವನಾಡಿ. ಜಾನಪದ ಹಾಡು ಮತ್ತು ಕಥೆಗಳು ಸಾಂಸ್ಕೃತಿಕ ಪರಂಪರೆಯ ಹಾಗೂ ನೈತಿಕ ಮೌಲ್ಯಗಳು ಹಾಗೂ ಬದುಕಿನ ಅನುಭವಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಾಧ್ಯಮವಾಗಿದೆ ಎಂದು ಹೇಳಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಜಾನಪದ ಕಲಾವಿದ ಬಸವರಾಜ ಹಾರಿವಾಳ, ಜಾಸಾಪ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಜಾನಪದ ಚಿಂತಕ ಬಸವರಾಜ ಸಾರವಾಡ ಜಾನಪದ ಹಾಡುಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ಬಾಬುರಾವ ಮಹಾರಾಜರು, ನಿಂಗಪ್ಪ ಬೊಮ್ಮನಹಳ್ಳಿ, ಈರಣ್ಣ ಬೆಕಿನಾಳ, ಸಿ.ಬಿ.ಬಿರಾದಾರ, ವಿವೇಕಾನಂದ ಕಲ್ಯಾಣಶೆಟ್ಟಿ, ಎಲ್.ಎಲ್.ಓಂಕಾರ, ಕಾಶೀನಾಥ ಅವಟಿ, ವಿಜಯಲಕ್ಷ್ಮೀ ಹಳಕಟ್ಟಿ ಇತರರು ಇದ್ದರು.
ಈ ಸಂದರ್ಭದಲ್ಲಿ ಹೆಬ್ಬಾಳ ಗ್ರಾಮದ ರೈತರು ಹಂತಿ ಪದ ಹಾಡಿ ರಂಜಿಸಿದರು. ಶಶಿಕಲಾ ನಾಯ್ಕೋಡಿ ಜಾನಪದ ಗೀತಗಾಯನ ಮಾಡಿದರು. ರೇಖಾ ಕುಂಬಾರ ಪ್ರಾಥಿ೯ಸಿದರು. ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕ ಅಧ್ಯಕ್ಷ ಶಿವಾನಂದ ಡೋಣೂರ ಸ್ವಾಗತಿಸಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ರೂಪಾ ರಜಪೂತ ವಂದಿಸಿದರು.