ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದವರು ಕ್ಷೇತ್ರದ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿತ್ತು. ಆದರೆ ಇಂದಿಗೂ ಟಿಸಿ ಕೊರತೆ ಮತ್ತು ವಿದ್ಯುತ್ ಸಮಸ್ಯೆ ನಿವಾರಣೆಯಾಗಿಲ್ಲ ಎಂದು ಟೀಕಿಸಿದರು. ಶಾಸಕರ ವಿರುದ್ಧ ವ್ಯಂಗ್ಯವಾಡಿದ ಸಂತೋಷ್, ಬೆಂಗಳೂರಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವಂತೆ ಸಲಹೆ ನೀಡುತ್ತಾರೆ. ಆದರೆ ತಮ್ಮ ಸ್ವಕ್ಷೇತ್ರದ ರೈತರು ಯಾವ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಕೇಳುವವರೇ ಇಲ್ಲ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ತಾಲೂಕಿನಲ್ಲಿ ದಿನೇದಿನೇ ತೀವ್ರವಾಗುತ್ತಿರುವ ವಿದ್ಯುತ್ ಪರಿವರ್ತಕಗಳ ಕೊರತೆ, ನಿರಂತರ ಲೋಡ್ ಶೆಡ್ಡಿಂಗ್, ರಾಗಿ ಖರೀದಿ ಕೇಂದ್ರಗಳಲ್ಲಿ ನಡೆಯುತ್ತಿರುವ ಅವ್ಯವಸ್ಥೆ, ರೈತರ ಮೇಲಿನ ಅನ್ಯಾಯ, ನಡೆದ ಜನಸ್ಪಂದನ ಕಾರ್ಯಕ್ರವೂ ಇಲ್ಲವೇ ಇದು ಪೊಲೀಸ್ ಭಯದ ವೇದಿಕೆಯೋ ಹಾಗೂ ಆಡಳಿತ ವೈಫಲ್ಯದ ವಿರುದ್ಧ ಜೆಡಿಎಸ್ ಮುಖಂಡ ಎನ್. ಆರ್. ಸಂತೋಷ್ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಅರಸೀಕೆರೆ ತಾಲೂಕಿನಲ್ಲಿ ರೈತರು ಬದುಕಿಗಾಗಿ ಹೋರಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಇಲ್ಲ, ಟಿಸಿಗಳಿಲ್ಲ, ರಾಗಿ ಮಾರಾಟಕ್ಕೆ ಸರಿಯಾದ ವ್ಯವಸ್ಥೆಯಿಲ್ಲ, ಜಮೀನು ದಾಖಲೆ ಸಮಸ್ಯೆಗಳಿಗೆ ಪರಿಹಾರವಿಲ್ಲ. ಆದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಶಾಸಕರು ಮಾತ್ರ ಕ್ಷೇತ್ರದಿಂದ ದೂರ ಉಳಿದಿದ್ದಾರೆ ಎಂದು ಆರೋಪಿಸಿದರು. ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಳೆದ ೨೫ರಿಂದ ೩೦ ದಿನಗಳಿಂದ ನಿರಂತರವಾಗಿ ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗುತ್ತಿವೆ ಎಂದು ಸಂತೋಷ್ ದೂರಿದರು. ೬೩ ಕೆವಿ, ೧೦೦ ಕೆವಿ ಹಾಗೂ ೨೫ ಕೆವಿ ಸಾಮರ್ಥ್ಯದ ಟಿಸಿಗಳು ದೊಡ್ಡ ಪ್ರಮಾಣದಲ್ಲಿ ಹಾಳಾಗಿವೆ. ಸದ್ಯ ಕ್ಷೇತ್ರದಲ್ಲಿ ಕನಿಷ್ಠ ೪೦ರಿಂದ ೪೫ ಟಿಸಿಗಳ ತುರ್ತು ಅವಶ್ಯಕತೆ ಇದೆ. ಆದರೆ ರೈತರು ಕೆಇಬಿ ಕಚೇರಿಗೆ ಹೋದರೆ ಸ್ಪಂದನೆ ಇಲ್ಲ. ಪ್ರತಿದಿನ ಕಚೇರಿಗಳಿಗೆ ಅಲೆದಾಡಿ ಬೇಸತ್ತು ಮನೆಗೆ ಮರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಕೃಷಿ ಮೋಟಾರ್‌ಗಳಿಗೆ ವಿದ್ಯುತ್ ಸಿಗದೆ ಬೆಳೆ ಒಣಗುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದಾರೆ. ಬೋರ್‌ವೆಲ್ ಇದ್ದರೂ ಕರಂಟ್ ಇಲ್ಲದ ಕಾರಣ ನೀರು ಹರಿಸಲಾಗುತ್ತಿಲ್ಲ. ಇದರಿಂದ ರೈತರಲ್ಲಿ ಆತಂಕ ಮತ್ತು ಅಸಮಾಧಾನ ಹೆಚ್ಚಾಗಿದೆ ಎಂದು ತಿಳಿಸಿದರು. ತಾಲೂಕಿನಲ್ಲಿ ಅಧಿಕೃತವಾಗಿ ಎರಡು ಗಂಟೆ ಲೋಡ್ ಶೆಡ್ಡಿಂಗ್ ಘೋಷಣೆ ಇದ್ದರೂ, ವಾಸ್ತವದಲ್ಲಿ ದಿನದ ಬಹುಪಾಲು ಸಮಯ ವಿದ್ಯುತ್ ವ್ಯತ್ಯಯವೇ ಇರುತ್ತದೆ ಎಂದರು.ಅಧಿಕಾರಿಗಳನ್ನು ಕೇಳಿದರೆ ಕರಂಟ್ ಇಲ್ಲ ಸಾರ್ ಎಂಬ ಉತ್ತರ ಮಾತ್ರ ಬರುತ್ತದೆ. ರೈತರು ರಾತ್ರಿ ಪೂರ್ತಿ ಜಾಗರಣೆ ಮಾಡಿ ವಿದ್ಯುತ್ ಬರುವ ಸಮಯ ಕಾಯುವ ಪರಿಸ್ಥಿತಿ ಇದೆ. ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ. ಗ್ರಾಮೀಣ ಭಾಗದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದವರು ಕ್ಷೇತ್ರದ ಮೂಲಭೂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿತ್ತು. ಆದರೆ ಇಂದಿಗೂ ಟಿಸಿ ಕೊರತೆ ಮತ್ತು ವಿದ್ಯುತ್ ಸಮಸ್ಯೆ ನಿವಾರಣೆಯಾಗಿಲ್ಲ ಎಂದು ಟೀಕಿಸಿದರು. ಶಾಸಕರ ವಿರುದ್ಧ ವ್ಯಂಗ್ಯವಾಡಿದ ಸಂತೋಷ್, ಬೆಂಗಳೂರಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸುವಂತೆ ಸಲಹೆ ನೀಡುತ್ತಾರೆ. ಆದರೆ ತಮ್ಮ ಸ್ವಕ್ಷೇತ್ರದ ರೈತರು ಯಾವ ಸಂಕಷ್ಟದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಕೇಳುವವರೇ ಇಲ್ಲ ಎಂದು ಹೇಳಿದರು.ಅರಸೀಕೆರೆಯು ರಾಗಿ ನಾಡು ಎಂದು ಹೆಸರಾಗಿದೆ. ರೈತರ ಅಭಿವೃದ್ಧಿಗೆ ಸದನದಲ್ಲಿ ಹಲವು ಭರವಸೆಗಳನ್ನು ನೀಡಲಾಗಿತ್ತು. ಆದರೆ ನೆಲಮಟ್ಟದಲ್ಲಿ ರೈತರಿಗೆ ಸಿಗುತ್ತಿರುವುದು ಕೇವಲ ನಿರಾಶೆ ಮಾತ್ರ ಸಿಕ್ಕಿದೆ. ರಾಗಿ ಖರೀದಿ ಕೇಂದ್ರಗಳಲ್ಲೂ ಭಾರೀ ಅವ್ಯವಸ್ಥೆ ನಡೆಯುತ್ತಿದೆ ಎಂದು ದೂರಿದ ಅವರು, ಹೋಬಳಿಯ ಜೆ.ಸಿ.ಪುರದಲ್ಲಿ ಒಂದೇ ಖರೀದಿ ಕೇಂದ್ರವಿದ್ದು, ಸಾವಿರಾರು ರೈತರು ಅಲ್ಲಿ ಜಮಾಯಿಸುತ್ತಿದ್ದಾರೆ. ಆದರೆ ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ರೈತರು ಪರದಾಡುತ್ತಿದ್ದಾರೆ ಎಂದರು. ಲಾರಿ ಬೋಗುಣಿ, ವರಸೆತನದಾರರು ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಭಾರೀ ಅನ್ಯಾಯವಾಗುತ್ತಿದೆ. ಖರೀದಿ ಕೇಂದ್ರ ಪ್ರವೇಶಕ್ಕೂ ನೂರು ರುಪಾಯಿ ಲಂಚ ಕೇಳಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ರಾಗಿ ಇಳಿಸುವುದಕ್ಕೂ, ತೂಕ ಮಾಡಿಸುವುದಕ್ಕೂ ರೈತರು ಹಣ ಖರ್ಚು ಮಾಡಬೇಕಾಗಿದೆ ಎಂದು ಹೇಳಿದರು. ಬಿಸಿಲಿನ ತಾಪದಲ್ಲಿ ಟ್ರ್ಯಾಕ್ಟರ್‌ಗಳು ನಾಲ್ಕು ಕಿಲೋಮೀಟರ್‌ಗೂ ಹೆಚ್ಚು ಸಾಲಿನಲ್ಲಿ ನಿಂತಿವೆ. ರೈತರು ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧ ರೈತರು, ಮಹಿಳೆಯರು ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರು ಒಂದು ಚೀಲ ರಾಗಿ ಬೆಳೆಸಲು ಎಷ್ಟು ಶ್ರಮಪಡುತ್ತಾರೆ ಎಂಬುದನ್ನು ಆಡಳಿತ ಅರ್ಥ ಮಾಡಿಕೊಳ್ಳಬೇಕು. ಆದರೆ ಖರೀದಿ ಕೇಂದ್ರದಲ್ಲಿ ಅವರನ್ನು ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಬೆಳೆ ಮಾರಾಟ ಮಾಡಲು ಬಂದ ರೈತರು ಅವಮಾನ ಅನುಭವಿಸಿ ಹಿಂದಿರುಗುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.ರಾಜಸ್ವ ಇಲಾಖೆಯಲ್ಲಿಯೂ ಭಾರೀ ಸಮಸ್ಯೆಗಳಿವೆ ಎಂದು ಹೇಳಿದ ಸಂತೋಷ್, ಕಳೆದ ಐದುರಿಂದ ಆರು ತಿಂಗಳಿನಿಂದ ಸರ್ವೇಯರ್‌ಗಳ ಮುಷ್ಕರ ನಡೆಯುತ್ತಿದೆ. ಇದರ ಪರಿಣಾಮ ಪಹಣಿ ದುರಸ್ತಿ ಜಮೀನು ಗಡಿ ಗುರುತು, ಸರ್ವೇ ಸೇರಿದಂತೆ ರೈತರ ಹಲವು ಕೆಲಸಗಳು ಸಂಪೂರ್ಣ ನಿಂತಿವೆ” ಎಂದು ಹೇಳಿದರು. ಗ್ರಾಮೀಣ ಭಾಗದ ಜನರು ತಾಲ್ಲೂಕು ಕಚೇರಿಗಳಿಗೆ ಸುತ್ತಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ರೈತರು ದಿನಗೂಲಿ ಬಿಟ್ಟು ಕಚೇರಿಗಳ ಮುಂದೆ ಅಲೆದಾಡುವ ಪರಿಸ್ಥಿತಿ ಬಂದಿದೆ. ಶಾಸಕರ ಜನತಾ ದರ್ಶನ ಕಾರ್ಯಕ್ರಮಗಳ ಮೇಲೂ ಸಂತೋಷ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಜನತಾ ದರ್ಶನಕ್ಕೆ ಜನರಿಗಿಂತ ಪೊಲೀಸರೇ ಹೆಚ್ಚು ಇರುತ್ತಾರೆ. ೨೫ ಜನ ಸಾರ್ವಜನಿಕರು ಇದ್ದರೆ ೨೦೦ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗುತ್ತದೆ. ರೈತರು ಪ್ರಶ್ನೆ ಕೇಳಲು ಮುಂದಾದರೆ ತಕ್ಷಣ ಪೊಲೀಸರು ಮಧ್ಯೆ ಪ್ರವೇಶಿಸಿ ಅವರನ್ನು ಕೂರಿಸುವ ಕೆಲಸ ಮಾಡುತ್ತಾರೆ ಎಂದು ದೂರಿದರು. ಇದು ಜನಸ್ಪಂದನ ಕಾರ್ಯಕ್ರಮವಲ್ಲ, ಪೊಲೀಸ್ ಭಯದ ಸ್ಪಂದನ ಕಾರ್ಯಕ್ರಮವಾಗಿದೆ. ಜನರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳುವ ಸ್ವಾತಂತ್ರ್ಯವೇ ಇಲ್ಲದಂತಾಗಿದೆ ಎಂದು ಕಿಡಿಕಾರಿದರು. ಅರಸೀಕೆರೆ ಕ್ಷೇತ್ರದಲ್ಲಿ ಇಂತಹ ದುರ್ಬಲ ಆಡಳಿತ ಹಿಂದೆ ಯಾವತ್ತೂ ಕಂಡಿರಲಿಲ್ಲ. ಶಾಸಕರು ಕ್ಷೇತ್ರದಲ್ಲಿ ಜನರಿಗೆ ಸಿಗುವುದೇ ಕಷ್ಟವಾಗಿದೆ. ಹೆಚ್ಚಿನ ಸಮಯ ಬೆಂಗಳೂರಿನಲ್ಲಿ ಕಳೆದರೆ ಕ್ಷೇತ್ರದ ಸಮಸ್ಯೆಗಳು ಹೇಗೆ ಪರಿಹಾರವಾಗುತ್ತವೆ ಎಂದು ಪ್ರಶ್ನಿಸಿದರು. ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಟಿಸಿ ಕೊರತೆ ನಿವಾರಣೆ, ನಿರಂತರ ವಿದ್ಯುತ್ ಪೂರೈಕೆ, ರಾಗಿ ಖರೀದಿ ಕೇಂದ್ರಗಳಲ್ಲಿ ಪಾರದರ್ಶಕ ವ್ಯವಸ್ಥೆ ಹಾಗೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.