ಸಾರಾಂಶ
ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶಯದಂತೆ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಿರುವುದು ಅತ್ಯುತ್ತಮ ಸಾಮಾಜಿಕ ಕಾರ್ಯ ಎಂದು ರೋಟರಿ ಸಂಸ್ಥೆಯ ಮಂಜುನಾಥ್ ಅನಿಕರ್ ಹೇಳಿದರು. ಶ್ರವಣಬೆಳಗೊಳ ಶ್ರೀ ಬಾಹುಬಲಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರವಣಬೆಳಗೊಳದಲ್ಲಿ ಡಯಾಲಿಸಿಸ್ ಕೇಂದ್ರ
ಶ್ರವಣಬೆಳಗೊಳ: ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ಇಂತಹ ಉತ್ತಮ ಉದ್ದೇಶದಿಂದ ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶಯದಂತೆ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಿರುವುದು ಅತ್ಯುತ್ತಮ ಸಾಮಾಜಿಕ ಕಾರ್ಯ ಎಂದು ರೋಟರಿ ಸಂಸ್ಥೆಯ ಮಂಜುನಾಥ್ ಅನಿಕರ್ ಹೇಳಿದರು.ಶ್ರೀ ಬಾಹುಬಲಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಆರೋಗ್ಯ, ಶಿಕ್ಷಣ, ಸಾಮಾಜಿಕ ಕಳಕಳಿಯಿಂದ ಆರಂಭಿಸಿದ ಸಂಸ್ಥೆಗಳಲ್ಲಿ ಇಂದು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತಿರುವುದು ಶ್ಲಾಘನೀಯವಾದುದು. ಇದರಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಈ ಭಾಗದ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ಫಾರ್ಟಿನೆಟ್ ಟೆಕ್ನಾಲಜಿ ಆಫ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಕಿಶೋರ್ ರೆಡ್ಡಿ ನೇತೃತ್ವದಲ್ಲಿ 16 ಲಕ್ಷ ರು. ವೆಚ್ಚದ 2 ಡಯಾಲಿಸಿಸ್ ಯಂತ್ರಗಳನ್ನು ನೀಡಿದ್ದು, ನವಕಾರ್ ಬಯೋ ಕೆಮಿಕಲ್ ಸಂಸ್ಥೆಯಿಂದ 2.5 ಲಕ್ಷ ರು. ವೆಚ್ಚದ ಆರ್‌ಒ ಘಟಕವನ್ನು ನೀಡಿದ್ದು, ಶ್ರುತ ಕೇವಲಿ ಟ್ರಸ್ಟ್ ಸಂಸ್ಥೆಯು ನಿರ್ವಹಣೆ ಮಾಡಲಿದೆ ಎಂದು ಹೇಳಿದರು.ರೋಟರಿ ಸಂಸ್ಥೆಯು 89 ವರ್ಷಗಳಿಂದ ಸಾಮಾಜಿಕ ಸೇವೆ ಮಾಡುತ್ತಿದ್ದು, ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರಗಳು ಹಾಗೂ ರಕ್ತನಿಧಿ ಕೇಂದ್ರಗಳಿಗೆ ಸಹಕಾರ ನೀಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆದು ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ವಿಜಯರಾಮ್, ಮಾಜಿ ಅಧ್ಯಕ್ಷ ರಂಗರಾವ್, ಅಧ್ಯಕ್ಷೆ ಗೌರಿ ಓಜಾ, ಉಪಾಧ್ಯಕ್ಷ ಸುಖೆನ್ ಪದ್ಮನಾಭ್, ಶ್ರೀನಿ ವೆಲಿದಂಡ, ಚೆಲ್ಲಿಮಣಿ, ಮಾಳವಿಕಾ, ರಾಜಶೇಖರ್ ಪಾಲೇವ್, ವಿನ್ಸೆಂಟ್ ರಾಜ್, ಬಾಹುಬಲಿ ಆಸ್ಪತ್ರೆಯ ವೈದ್ಯರಾದ ಡಾ. ಬಿ.ಎಚ್.ರಾಮಚಂದ್ರ, ಡಾ.ಕೆ.ಆರ್.ಪೂರ್ಣಿಮಾ, ಡಾ.ಡಿ.ಕಾವ್ಯಶ್ರೀ, ಬಾಹುಬಲಿ ಇದ್ದರು.ಶ್ರವಣಬೆಳಗೊಳದ ಶ್ರೀ ಬಾಹುಬಲಿ ಆಸ್ಪತ್ರೆಯಲ್ಲಿ ಆರಂಭವಾದ ಡಯಾಲಿಸಿಸ್ ಕೇಂದ್ರವನ್ನು ರೋಟರಿ ಸಂಸ್ಥೆಯ ಮಂಜುನಾಥ್ ಅನಿಕರ್ ಉದ್ಘಾಟಿಸಿದರು.