ರಾಮಮೂರ್ತಿ ನವಲಿ ಗಂಗಾವತಿ

ಜನರಿಗೆ ಭದ್ರತೆ ಹಾಗೂ ಹಕ್ಕುಗಳನ್ನು ಸಂರಕ್ಷಿಸಬೇಕಾದ ಆರಕ್ಷಕ ಠಾಣೆ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದಿಂದ ದೂರು ಕೊಡಲು ಬರುವ ಜನರು ಸುಮಾರು ಮೂರು ಕಿಮೀ ದೂರ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಗ್ರಾಮೀಣ ಪೊಲೀಸ್‌ ಠಾಣೆ ನಗರದ ಪೊಲೀಸ್‌ ಸಮುಚ್ಚಯದಲ್ಲಿತ್ತು. ತೀರ ಹಳೆಯದಾಗಿದ್ದರಿಂದ ಅನುದಾನ ಬರುತ್ತದೆ ಎನ್ನುವ ಲೆಕ್ಕಾಚಾರದಿಂದ ಇದ್ದ ಕಟ್ಟಡ ನೆಲಸಮ ಮಾಡಲಾಗಿದೆ.

ನಗರದ ಸಿಬಿಎಸ್‌ ಗಂಜ್‌ ಪ್ರದೇಶದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರ ಅತಿಥಿ ಗೃಹದಲ್ಲಿ ಗ್ರಾಮೀಣ ಪೊಲೀಸ್‌ ಠಾಣೆ ಬಾಡಿಗೆ ಇದ್ದು, ಇದಕ್ಕಾಗಿ ಪ್ರತಿ ತಿಂಗಳು ₹22 ಸಾವಿರ ಪಾವತಿಸುತ್ತಿದೆ. ಸಮಿತಿಗೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಇಲ್ಲದ ಕಾರಣ 55 ತಿಂಗಳು ಕರಾರು ಇದೆ.

ಇದ್ದ ಕಟ್ಟಡ ನೆಲಸಮ: ಗ್ರಾಮೀಣ ಪೊಲೀಸ್‌ ಠಾಣೆಯ ಹಳೆ ಕಟ್ಟಡ ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗೆ ಸಿದ್ದಪಡಿಸಲಾಗಿತ್ತು. 40 ವರ್ಷಗಳ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡಕ್ಕೆ ಕಾಯುತ್ತಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಹೊಸ ಕಟ್ಟಡ ಮರೀಚಿಕೆಯಾಗಿ ಉಳಿದಿದೆ.


ಗ್ರಾಮೀಣ ಪೊಲೀಸ್‌ ಠಾಣೆಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ಸ್ಟೇಟ್‌ ಪೊಲೀಸ್‌ ಹೌಸಿಂಗ್‌ ಬೋರ್ಡ್‌ನವರು ₹2.80 ಕೋಟಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಅನುದಾನ ಬಾರದ ಕಾರಣ ಕಳೆದ ವರ್ಷದಿಂದ ಪಾಳು ಬಿದ್ದಿದೆ.

ದೂರುದಾರರ ಪರದಾಟ: ಗಂಗಾವತಿ ನಗರ ಪೊಲೀಸ್ ಸಮುಚ್ಚಯದಲ್ಲಿ ಡಿವೈಎಸ್ಪಿ ಕಚೇರಿ, ನಗರ ಪೊಲೀಸ್‌ ಠಾಣೆ ಮತ್ತು ಸಂಚಾರಿ ಪೊಲೀಸ್‌ ಠಾಣೆ ಜತೆಗೆ ಗ್ರಾಮೀಣ ಪೊಲೀಸ್‌ ಠಾಣೆ ಕಾರ್ಯ ನಿರ್ವಹಿಸುತ್ತಿತ್ತು. ಈಗ ಜನರು ಸುಮಾರು ಮೂರು ಕಿಮೀ ದೂರ ಹೋಗಿ ದೂರು ದಾಖಲಿಸಬೇಕಾದ ಸ್ಥಿತಿ ಬಂದಿದೆ. ಇದರಿಂದ ಸಿಬ್ಬಂದಿಗಳಿಗೂ ತಮ್ಮ ವಸತಿ ಗೃಹಗಳಿಗೆ ಹೋಗಲು ವಿಳಂಬವಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಅದಷ್ಟು ಬೇಗ ಸರ್ಕಾರ( ಕರ್ನಾಟಕ ಸ್ಟೇಟ್‌ ಹೌಸಿಂಗ್‌ ಬೋರ್ಡ್‌) ಅನುದಾನ ನೀಡಿದರೆ ಸಾರ್ವಜನಿಕರು ಮತ್ತು ಪೊಲೀಸ್‌ ಸಿಬ್ಬಂದಿಗಳಿಗೂ ಅನುಕೂಲವಾಗುತ್ತದೆ.

ಗ್ರಾಮೀಣ ಪೊಲೀಸ್‌ ಠಾಣೆಯ ಹಳೆ ಕಟ್ಟಡ ನೆಲಸಮಗೊಳಿಸಲಾಗಿದೆ. ಹೊಸ ಕಟ್ಟಡಕ್ಕಾಗಿ ಸರ್ಕಾರದ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ವರ್ಷ ತಾಲೂಕಿನ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಬರುತ್ತದೆ. ಈ ವರ್ಷ ಗ್ರಾಮೀಣ ಪೊಲೀಸ್‌ ಠಾಣೆಗೆ ಅನುದಾನ ಬರಬಹುದು ಎಂದು ಗಂಗಾವತಿ ಡಿವೈಎಸ್ಪಿ ಜಾಯಪ್ಪ ನ್ಯಾಮಗೌಡರ್ ತಿಳಿಸಿದ್ದಾರೆ.

ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಹೊಸ ಕಟ್ಟಡದ ಪ್ರಸ್ತಾನೆಯ ಬಗ್ಗೆ ಮಾಹಿತಿ ಇಲ್ಲ. ಕಳೆದ 4 ತಿಂಗಳಿಂದ ಅಧಿಕಾರ ವಹಿಸಿಕೊಂಡಿದ್ದೇನೆ. ಕಟ್ಟಡದ ಬಗ್ಗೆ ಮಾಹಿತಿ ಇಲ್ಲ ಎಂದು ರಾಯಚೂರು ಕರ್ನಾಟಕ ಸ್ಟೇಟ್‌ ಪೊಲೀಸ್‌ ಹೌಸಿಂಗ್‌ ಬೋರ್ಡ್‌ ಎಇಇ ಲಿಂಗರಾಜ್ ತಿಳಿಸಿದ್ದಾರೆ.