ಕನ್ನಡಪ್ರಭ ವಾರ್ತೆ ಹಲಗೂರು

ಗ್ರಾಮೀಣ ವಿದ್ಯಾರ್ಥಿಗಳೇ ಇಂದು ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಗರ ಮತ್ತು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗಿಂತಲೂ ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಿದಾನಂದಗೌಡ ತಿಳಿಸಿದರು.

ಹುಸ್ಕೂರು ಗ್ರಾಮದ ಬಾಲಾಜಿ ಎಜುಕೇಷನ್ ಟ್ರಸ್ಟ್‌ನ ಸ್ಪಂದನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಸ್ಪಂದನ ಸಂಭ್ರಮ- ಮತ್ತು ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶಾಲೆ ತೆರೆಯುವುದು ದೇಶ ಸೇವೆ ಮಾಡಿದಷ್ಟೇ ಪುಣ್ಯದ ಕೆಲಸ ಎಂದರೆ ತಪ್ಪಾಗದು ಎಂದರು.

ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಗ್ರಹಿಸುವ ಶಕ್ತಿ ಅಪಾರವಾಗಿದೆ. ಕಲಿಯುವಲ್ಲಿ ಸೋತರೂ ಮತ್ತೆ ಗೆಲುವಿಗೆ ಯತ್ನಿಸಿದರೇ ಮಗು ನಿಗದಿತ ಗುರಿ ಮುಟ್ಟಲಿದೆ. ಪೋಷಕರು ಮಕ್ಕಳಿಗೆ ವಿದ್ಯೆ ಕಲಿಸುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಾಳಜಿ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಲು ಶ್ರಮಿಸಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ ಮಾತನಾಡಿ, ದೈನಂದಿನ ಜೀವನದಲ್ಲಿ ಮಗುವಿಗೆ ಕಲಿಕೆ ಜೊತೆಗೆ ಆಟಕ್ಕೂ ಸಮಯಾವಕಾಶ ಮಾಡಿ ಕೊಡಬೇಕು. ರಾತ್ರಿ ಸಮಯದಲ್ಲಿ ಸುಲಭದ ವಿಷಯಗಳನ್ನು, ಬೆಳಗ್ಗೆ ಸಮಯದಲ್ಲಿ ಕಷ್ಟದ ವಿಷಯಗಳನ್ನು ಕಲಿಸಬೇಕು. ಪ್ರತಿದಿನವೂ ಅಂಕ ಪಡೆಯಲು ಒತ್ತಡ ಹೇರಬಾರದು. ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಲು ಕಲಿಸಿ ಎಂದರು.


ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ ಮಾತನಾಡಿ, ಶಾಲಾ ವಾರ್ಷಿಕೋತ್ಸವ ಆಚರಣೆ ಆಡಂಬರಕ್ಕಲ್ಲ. ಶಾಲೆ ಮತ್ತು ಪೋಷಕರು ನಡುವಿನ ಒಂದು ಸಮಾಗಮ ಕಲಿಕೆಯನ್ನು ಉತ್ತೇಜಿಸಲಿದೆ ಎಂದರು.

ಶಾಲೆಯಲ್ಲಿ ನಡೆಸಿದ ಪೋಷಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಈ ವೇಳೆ ಬಾಲಾಜಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕೆಂಪೇಗೌಡ, ಸಹ ಕಾರ್ಯದರ್ಶಿ ಎಚ್.ಕೆ.ದೇವರಾಜು, ಮೂತ್ರಪಿಂಡ ಶಸ್ತ್ರ ಚಿಕಿತ್ಸಕ ಡಾ.ರಮೇಶ್ ಹನುಮೇಗೌಡ, ಸೈನಿಕ ಬಿ.ಎನ್. ಮಧು, ಸಾಹಿತಿ ಕೃಷ್ಣೇಗೌಡ ಹುಸ್ಕೂರು, ವಕೀಲ ಎಚ್.ಆರ್.ಸುರೇಶ್, ಎಸ್.ಬಿ.ಐ ವ್ಯವಸ್ಥಾಪಕ ಪ್ರತಾಪ್, ಇಂಜಿನಿಯರ್ ವೆಂಕಟಪ್ಪ, ಹೊನ್ನೇಗೌಡ, ಶಿವಲಿಂಗೇಗೌಡ, ಯುರೋ ಕಿಡ್ಸ್ ರಾಜೇಶ್, ಮುಖ್ಯ ಶಿಕ್ಷಕಿ ಬಿ.ಕಮಲ ಸೇರಿದಂತೆ ಹಲವರು ಭಾಗವಹಿಸಿದ್ದರು.