ಸಾರಾಂಶ
ಶಿರಹಟ್ಟಿ: ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ಸಿಗದೇ ರೈತರು ಪರದಾಡುವಂತಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ರೈತರು, ರೈತ ಮಹಿಳೆಯರು ಶುಕ್ರವಾರ ಬೆಳಗಿನ ಜಾವ ಪಟ್ಟಣದ ಜನತಾ ಬಜಾರ ಮುಂದೆ ಕೈಯಲ್ಲಿ ಆಧಾರ ಕಾರ್ಡ್ ಹಿಡಿದುಕೊಂಡು ಗೊಬ್ಬರಕ್ಕಾಗಿ ಅಂಗಲಾಚುತ್ತಿರುವ ದೃಶ್ಯ ಕಂಡುಬಂದಿತು.ಈ ಬಾರಿ ಉತ್ತಮ ಮಳೆ ಸುರಿದಿದ್ದು, ಭೂಮಿಯಲ್ಲಿ ಹೆಚ್ಚಿನ ತೇವಾಂಶವಿದೆ. ಸದ್ಯ ಗೋವಿನ ಜೋಳ ಬೆಳೆಗೆ ಯೂರಿಯಾ ಗೊಬ್ಬರದ ತೀವ್ರ ಅವಶ್ಯಕತೆ ಇದೆ ಎಂದು ರೈತರು ಗೋಗರೆಯುತ್ತಿದ್ದಾರೆ.ಗುರುವಾರ ರಾತ್ರಿ ಪಟ್ಟಣದ ಜನತಾ ಬಜಾರಗೆ ೨೦ ಟನ್ ಯೂರಿಯಾ ಗೊಬ್ಬರ ಬಂದಿದೆ ಎಂಬ ಸುದ್ದಿ ತಿಳಿದ ಗ್ರಾಮೀಣ ರೈತರು ಶುಕ್ರವಾರ ಬೆಳಗ್ಗೆ ತಂಪು ವಾತಾವರಣದಲ್ಲೇ ಯೂರಿಯಾ ಗೊಬ್ಬರ ಖರೀದಿಗೆ ಮುಗಿ ಬಿದ್ದರು. ನೂರು ಮೀಟರ್‌ನಷ್ಟು ಉದ್ದವಾದ ಸಾಲಿನಲ್ಲಿ ನಿಂತಿದ್ದ ರೈತರು ಮತ್ತು ರೈತ ಮಹಿಳೆಯರು ಒಬ್ಬರಿಗೆ ಎರಡು ಚೀಲದಂತೆ ಕೇವಲ ೨೦೦ ಜನರಿಗೆ ಪೊಲೀಸ್ ಸರ್ಪಗಾವಲಿನಲ್ಲಿ ಹಂಚಿಕೆ ಮಾಡಿದ್ದು, ಉಳಿದ ರೈತರು ನಿರಾಸೆಗೊಂಡು ಹಿಂತಿರುಗಿ ಹೋದರು. ಜನತಾ ಬಜಾರಗೆ ಹೋಗುವ ರಸ್ತೆ ಪಕ್ಕದಲ್ಲಿಯೇ ತಾಲೂಕು ಆಸ್ಪತ್ರೆ ಇರುವುದರಿಂದ ಬೆಳಗಿನ ವೇಳೆ ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳು ಕೂಡ ಗೊಬ್ಬರದ ಗದ್ದಲಕ್ಕೆ ಆಸ್ಪತ್ರೆಗೆ ತೆರಳಲು ಪರದಾಡಿದ ಘಟನೆ ಕೂಡ ಕಂಡುಬಂದಿತು. ಗ್ರಾಮೀಣ ಭಾಗದ ಸೊಸೈಟಿಗಳಲ್ಲಿ ಯೂರಿಯಾ ಗೊಬ್ಬರ ಸಮರ್ಪಕವಾಗಿ ಲಭ್ಯವಿಲ್ಲದ ಕಾರಣ ರೈತರು ಪಟ್ಟಣದ ಜನತಾ ಬಜಾರ ಮತ್ತು ಇತರ ಖಾಸಗಿ ಅಗ್ರೋ ಕೆಂದ್ರಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಆಧಾರ ಕಾರ್ಡ್ ಜತೆಗೆ ಹೆಬ್ಬೆಟ್ಟು ಗುರುತು ನೀಡಿ ಗೊಬ್ಬರ ಪಡೆಯುವ ಅನಿವಾರ್ಯತೆ ಎದುರಾಗಿದೆ.ತಾಲೂಕಿನಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹಂತ-ಹಂತವಾಗಿ ಸರಬರಾಜು ಮಾಡುವಂತೆ ವಿತರಕರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿಂದೆ ಖಾಸಗಿ ಅಗ್ರೋ ಕೇಂದ್ರಗಳಲ್ಲಿ ಯೂರಿಯಾ ಜೊತೆಗೆ ಲಿಂಕ್ ಪ್ರೊಡಕ್ಟ್ ನೀಡುತ್ತಿದ್ದರಿಂದ ರೈತರು ಕಿರಿ ಕಿರಿ ಮಾಡಿದ ಘಟನೆ ನಡೆದಿದೆ.ಕೃಷಿಗೆ ಅಗತ್ಯವಾದ ಯೂರಿಯಾ ಗೊಬ್ಬರದ ಕೊರತೆಯಿಂದ ರೈತರು ಈ ಬಾರಿ ಕೂಲಿ ಕೆಲಸ, ನಿದ್ದೆ, ಊಟ ಇಲ್ಲದೇ ಕಾಯುವಂತಾಗಿದೆ. ಜುಲೈ ತಿಂಗಳಿನಲ್ಲಿ ತಾಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದು, ಇದರಿಂದ ರಸಗೊಬ್ಬರಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅದರಲ್ಲೂ ಕಡಿಮೆ ದರ ಎನ್ನುವ ಕಾರಣಕ್ಕೆ ಯೂರಿಯಾ ಗೊಬ್ಬರಕ್ಕೆ ವ್ಯಾಪಕ ಬೇಡಿಕೆ ಬಂದಿದೆ. ತಾಲೂಕಿನಲ್ಲಿ ಈ ಬಾರಿ ೩೦೯೧೯ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಅಗತ್ಯ ಪ್ರಮಾಣದಲ್ಲಿ ಯೂರಿಯಾ ನೀಡಿದರೆ ಬೆಳೆಗಳು ಚೇತರಿಸಿಕೊಂಡು ಬೆಳವಣಿಗೆ ಉತ್ತಮಗೊಳ್ಳುತ್ತದೆ ಎಂಬ ಉದ್ದೇಶದಿಂದ ಯೂರಿಯಾ ಖರೀದಿಸಲು ರೈತರು ಮುಗಿಬೀಳುತ್ತಿದ್ದಾರೆ ಎಂದು ರೈತರು ಹೇಳುತ್ತಾರೆ.ಶಿರಹಟ್ಟಿ ತಾಲೂಕಿನ ಜಲ್ಲಿಗೇರಿ, ಕಡಕೋಳ, ರಣತೂರ, ದೇವಿಹಾಳ, ಛಬ್ಬಿ, ಮಾಚೇನಹಳ್ಳಿ, ಕುಸ್ಲಾಪೂರ, ತೆಗ್ಗಿನಭಾವನೂರ, ನವೇಭಾವನೂರ ಸೇರಿದಂತೆ ಗದಗ ತಾಲೂಕಿನ ಮಹಾಲಿಂಗಪೂರ, ಅತ್ತಿಕಟ್ಟಿ, ಯಲಿಶಿರುಂಜ, ಸೊರಟೂರ, ಶಿರುಂಜ, ಹಂಗನಕಟ್ಟಿ ಗ್ರಾಮದ ರೈತರು ಗೊಬ್ಬರಕ್ಕಾಗಿ ಮುಗಿಬಿದ್ದಿರುವುದು ಕಂಡುಬಂದಿತು. ಒಮ್ಮೆಲೇ ರೈತರು ಅಂಗಡಿಯೊಳಕ್ಕೆ ನುಗ್ಗುತ್ತಾರೆ ಎನ್ನುವ ಭಯದಿಂದಾಗಿ ಅಂಗಡಿ ಮಾಲೀಕರು ಪೊಲೀಸರ ಸಹಕಾರದಿಂದ ಯಾವುದೇ ಗದ್ದಲ, ಗಲಾಟೆ ಆಗದಂತೆ ಶಾಂತರೀತಿಯಿಂದ ಸರದಿ ಸಾಲಿನಲ್ಲಿದ್ದ ರೈತರಿಗೆ ಚೀಟಿ ನೀಡಿ ಗೊಬ್ಬರ ಹಂಚಿಕೆ ಮಾಡಲಾಯಿತು.