ಸಾರಾಂಶ
ಹುಬ್ಬಳ್ಳಿಯ ಎಸ್.ಎಂ. ಕೃಷ್ಣ ನಗರದ ಬಳಿ ನಡೆದಿರುವ ರಾಜನಾಲಾ ತಡೆಗೋಡೆ ಅಭಿವೃದ್ಧಿ ಕಾಮಗಾರಿಯನ್ನು ಶಾಸಕ ಪ್ರಸಾದ ಅಬ್ಬಯ್ಯ ವೀಕ್ಷಿಸಿದರು.
ಹುಬ್ಬಳ್ಳಿ: ಈ ಭಾಗದ ಜನರ ಬಹುದಿನದ ಬೇಡಿಕೆಯಂತೆ ರಾಜನಾಲಾಕ್ಕೆ ಹಂತ ಹಂತವಾಗಿ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆದರೆ, ರಾಜನಾಲಾ ಅಭಿವೃದ್ಧಿಗೆ ಅಡ್ಡಿಯಾಗಿರುವ ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಲ್ಲಿನ ಎಸ್.ಎಂ. ಕೃಷ್ಣ ನಗರದ ಬಳಿ ನಡೆದಿರುವ ರಾಜನಾಲಾ ತಡೆಗೋಡೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ ಮಾತನಾಡಿದರು.ರಾಜನಾಲಾದ ಎರಡು ಕಡೆಯಲ್ಲಿ 9 ಮೀಟರ್ ವರೆಗೆ ಯಾವುದೇ ಒತ್ತುವರಿ ಮಾಡದಂತೆ ಕಾನೂನು ಇದೆ. ಆದರೆ, ಜನರಿಗೆ ಕಾನೂನಿನ ಅರಿವು ಮತ್ತು ಭಯ ಎರಡೂ ಇಲ್ಲದಂತಾಗಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣ. ಪ್ರತಿಬಾರಿ ಮಳೆ ಬಂದಾಗಲೂ ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗುತ್ತದೆ ಎಂದರು.
ಜನರ ಪರದಾಟ ದೂರಮಾಡಲು ಕೋಟ್ಯಂತರ ರುಪಾಯಿ ಅನುದಾನದಲ್ಲಿ ನಾಲಾ ತಡೆಗೋಡೆ ನಿರ್ಮಿಸಲಾಗುತ್ತಿದೆ. ಆದರೆ, ಸಾರ್ವಜನಿಕರು ಮಾತ್ರ ಸ್ಪಂದಿಸದೇ ಇರುವುದು ದುರಾದೃಷ್ಟವೇ ಸರಿ. ಹೀಗಾಗಿ ನಾಲಾ ಒತ್ತುವರಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದರು.ಈ ವೇಳೆ ವಿವಿಧ ಇಲಾಖೆ ಅಧಿಕಾರಿಗಳು, ಪಾಲಿಕೆ ಸದಸ್ಯರು, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.