ಕನ್ನಡಪ್ರಭ ವಾರ್ತೆ, ತುಮಕೂರು

1971 ರಲ್ಲಿ ಭಾರತ - ಪಾಕಿಸ್ತಾನ ನಡುವೆ ನಡೆದ ಯುದ್ಧದ ಗೆಲುವಿನ ರೂವಾರಿ ಅಂದಿನ ರಕ್ಷಣಾ ಸಚಿವ ಡಾ.ಬಾಬು ಜಗಜೀವನ ರಾಮ್ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬಣ್ಣಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಡಾ. ಬಾಬು ಜಗಜೀವನ್ ರಾಮ್ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 1971 ರ ಭಾರತ- ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ರಕ್ಷಣಾ ಸಚಿವರಾಗಿದ್ದ ಬಾಬು ಜಗಜೀವನ್ ರಾಮ್ ಅವರು, ಸೈನಿಕರಿಗೆ ಹಾಗೂ ನಮ್ಮ ದೇಶದಲ್ಲಿ ಗೆಲುವಿಗೆ ಬೇಕಾದ ಎಲ್ಲ ವಿಷಯಗಳಲ್ಲಿ ದಿಟ್ಟ ನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ಈ ಯುದ್ದದಲ್ಲಿ ಭಾರತ ವಿಜಯ ಸಾಧಿಸಲು ಪ್ರಮುಖ ರೂವಾರಿಯಾದರು. ಅಲ್ಲದೆ, ಕೃಷಿ ಸಚಿವರಾಗಿ ದೇಶದಲ್ಲಿ ಅಂದಿನ ಸ್ಥಿತಿಯಲ್ಲಿ ಭಾರತದಲ್ಲಿ ಇದ್ದ ಆಹಾರ ಧಾನ್ಯದ ಕೊರತೆ ನೀಗಿಸಲು ಹಸಿರು ಕ್ರಾಂತಿಯನ್ನೇ ಮಾಡಿ ಹಸಿರು ಕ್ರಾಂತಿಯ ರೂವಾರಿಯಾದರು. ಹಾಗೂ ಕಾರ್ಮಿಕ ಸಚಿವರಾಗಿಯೂ ಸಾಕಷ್ಟು ಸುಧಾರಣೆಗಳನ್ನು ತಂದವರು ಜಗಜೀವನ್ ರಾಮ್ ಅವರು ಎಂದಿಗೂ ಆದರ್ಶಪ್ರಾಯರರು ಎಂದರು.

ಅದೇ ಪ್ರಗತಿಯ ಹಾದಿಯಲ್ಲಿ ತುಮಕೂರು ಜಿಲ್ಲಾಡಳಿತ ಕಳೆದ ಎರಡು ವರ್ಷಗಳಿಂದ ನಿರಂತರ ಶ್ರಮವಹಿಸಿ ಹಟ್ಟಿ, ತಾಂಡಾಗಳನ್ನು ಗುರುತಿಸಿ ಕಂದಾಯ ಗ್ರಾಮಗಳಾಗಿ ಪರಿಸಲು ಶ್ರಮಿಸಿದೆ. ಸುಮಾರು 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ ಮಾತನಾಡಿ, ಡಾ.ಬಾಬು ಜಗಜೀವನ್ ರಾಮ್ ಅವರು, ಬಾಲ್ಯದಲ್ಲೆ ಜಾತೀಯತೆಯ ವಿರುದ್ಧ ಧ್ವನಿ ಎತ್ತಿದ್ದರು. ಶಾಲಾ ದಿನಗಳಲ್ಲಿ ಅಸ್ಪೃಷ್ಯರಿಗೆ ಇಡಲಾಗಿದ್ದ ಕುಡಿಯುವ ನೀರಿನ ಗಡಿಯನ್ನು ಒಡೆತುವ ಮೂಲಕ ಪ್ರತಿಭಟಿಸಿದ್ದರು. ನಂತರ ಕಾಲೇಜು ದಿನಗಳಲ್ಲಿ ಪ್ರತ್ಯೇಕ ಹೋರಾಟವನ್ನೇ ಸಂಘಟನೆ ಕಟ್ಟಿದರು. ಅವರ ಹೋರಾಟದ ಕೆಲವು ಅಂಶಗಳನ್ನು ಸಂವಿಧಾನ ರಚನಾ ಸಮಿತಿಯೂ ಅಳವಡಿಸಿತು. ಅಂತೆಯೇ ತುಮಕೂರು ಜಿಲ್ಲಾ ಪಂಚಾಯ್ತಿ ಕೂಡ ನಿವೇಶನ ರಹಿತರಿಗೆ 20 ಸಾವಿರ ನಿವೇಶನಗಳನ್ನು ಗ್ರಾಮ ಪಂಚಾಯ್ತಿ ಮೂಲಕ ಕೊಡುವ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು.


ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋನಿಯಾ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು,

ದಲಿತ ಸಂಘರ್ಷ ಸಮಿತಿಯ ಮುಖಂಡರಾದ ಪಿ.ರಾಮಯ್ಯ, ಭಾನುಪ್ರಕಾಶ್ ಸೇರಿದಂತೆ ಹಲವು ಮುಂಡರು ಭಾಗವಹಿಸಿದ್ದರು.