ವಚನ ಯುಗದ ಅಧ್ಯಾತ್ಮಿಕ ಚಿಂತನೆಯ ರೂವಾರಿ ಹಡಪದ ಅಪ್ಪಣ್ಣ

| Published : Jul 22 2024, 01:15 AM IST

ಸಾರಾಂಶ

ಹಡಪದ ಅಪ್ಪಣ್ಣ ಯುವ ಕವಿಗಳ ಸ್ಫೂರ್ತಿ ಆಗಿದ್ದು, ಜೀವನದ ಬಗ್ಗೆ ಅರಿವು ಮೂಡಿಸುವ ಅವರ ವಚನಗಳೇ ನಿದರ್ಶನವಾಗಿವೆ.

ಬಳ್ಳಾರಿ: 12ನೇ ಶತಮಾನದ ವಚನ ಯುಗದಲ್ಲಿ ಜನಸಾಮಾನ್ಯರಲ್ಲಿ ಅಧ್ಯಾತ್ಮಿಕ ಚಿಂತನೆಗಳನ್ನು ಬಿತ್ತಿದವರು ಶಿವಶರಣ ಹಡಪದ ಅಪ್ಪಣ್ಣನವರು ಎಂದು ಕಿಷ್ಕಿಂದ ವಿಶ್ವ ವಿದ್ಯಾಲಯದ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಎಸ್.ಮಂಜುನಾಥ ಹೇಳಿದರು.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಹಡಪದ ಅಪ್ಪಣ್ಣ ಯುವ ಕವಿಗಳ ಸ್ಫೂರ್ತಿ ಆಗಿದ್ದು, ಜೀವನದ ಬಗ್ಗೆ ಅರಿವು ಮೂಡಿಸುವ ಅವರ ವಚನಗಳೇ ನಿದರ್ಶನವಾಗಿವೆ. ಅಪ್ಪಣ್ಣನವರು ಪ್ರಸ್ತುತ ದಿನಮಾನಗಳ ಮನುಷ್ಯರ ಮನೋಭಾವನೆಗಳ ಕುರಿತು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಜಂಗಮ ಹೊಸಳ್ಳಿಯ ಪುರವರ್ಗ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶಿವಶರಣ ಅಪ್ಪಣ್ಣ ನವರು ಕಾಯ, ವಾಚ, ಮನಸ್ಸಿನಿಂದ ಭಕ್ತಿಪೂರ್ವಕವಾಗಿ ನ್ಯಾಯ ಹಾಗೂ ಧರ್ಮದ ಗೌರವ ಸಂಪಾದನೆ ಮಾಡಿದರು ಎಂದು ಹೇಳಿದರು.

12ನೇ ಶತಮಾನದ ಪ್ರಸಿದ್ಧ ವಚನಕಾರರಲ್ಲಿ ಒಬ್ಬರಾದ ಹಡಪದ ಅಪ್ಪಣ್ಣನವರು ತಮ್ಮ ವಚನ ತತ್ವಾದರ್ಶಗಳ ಮೂಲಕ ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿರುತ್ತಾರೆ ಎಂದರು.

ಜಗಜ್ಯೋತಿ ಬಸವಣ್ಣನವರ ಅನುಯಾಯಿ ಹಾಗೂ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಅಪ್ಪಣ್ಣನವರು ಸಮಾಜದಲ್ಲಿ ಸಮಾನತೆ, ಐಕ್ಯತೆ ಹಾಗೂ ಒಗ್ಗಟ್ಟಿನ ಸಾರವನ್ನು ತಮ್ಮ ವಚನಗಾಯನಗಳ ಮೂಲಕ ಸಾರಿ, ಸಮಾಜ ಪರಿವರ್ತನೆಯಾಗುವಲ್ಲಿ ಶ್ರಮ ವಹಿಸಿದರು ಎಂದು ಹೇಳಿದರು.

ಈ ವೇಳೆ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ಈ ವೇಳೆ ಕೆ.ವಸಂತ್‍ಕುಮಾರ್ ಅವರ ತಂಡದಿಂದ ವಚನ ಸಂಗೀತ ಆಯೋಜಿಸಲಾಗಿತ್ತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರದೊಂದಿಗೆ ನಗರದ ಎಚ್.ಆರ್. ಗವಿಯಪ್ಪ ವೃತ್ತದಿಂದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಮೆರವಣಿಗೆ ಜರುಗಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಹಡಪದ ಅಪ್ಪಣ್ಣ ಸೇವಾ ಸಂಘದ ಜಿಲ್ಲಾಧ್ಯಕ್ಷ ಹೆಚ್.ರುದ್ರಪ್ಪ, ಸಮಾಜದ ಮುಖಂಡರಾದ ಸಿ.ಕೊಟ್ರೇಶ, ಎಚ್.ತಿಪ್ಪೇಸ್ವಾಮಿ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ, ಸವಿತಾ ಸಮಾಜದ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.