ಅಧಿಕಾರಿಗಳ ಬೆವರೀಳಿಸಿದ ಆರ್‌.ವಿ. ದೇಶಪಾಂಡೆ

| Published : Jan 09 2024, 02:00 AM IST / Updated: Jan 09 2024, 04:47 PM IST

ಸಾರಾಂಶ

ಅರಣ್ಯದಲ್ಲಿ ಬದುಕುವ ಜನರ ಮನೆ ರಿಪೇರಿಗೆ ತೊಂದರೆ ನೀಡಿದರೆ ನಾನು ಸಹಿಸುವುದಿಲ್ಲ. ಜನರಿಗೆ ಬದುಕುವ ಹಕ್ಕಿದೆ. ನೀವು ಮನಸ್ಸಿಗೆ ಬಂದಂತೆ ವರ್ತಿಸಿದರೆ ನಾನು ನನ್ನ ಕ್ರಮ ಮಾಡಬೇಕಾಗುತ್ತದೆ.

ಜೋಯಿಡಾ: ತಾಲೂಕು ಪಂಚಾಯಿತಿಯಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಆರ್‌.ವಿ. ದೇಶಪಾಂಡೆ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.ಅಣಶಿಯಲ್ಲಿ ಮಾದೇವ ಗಾವುಡ ಅವರ 300 ಅಡಕೆ ಮರ ಕಡಿದು ನಾಶ ಮಾಡಿದ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. 

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮಾರಾಕ್ಷರ ಅವರ ಸ್ವಂತ ಆಸಕ್ತಿಯಿಂದ ಈ ಅಡಕೆ ಗಿಡ ನಾಶಪಡಿಸಲಾಗಿದೆ ಎಂದು ಆರೋಪ ಕೇಳಿ ಬಂತು. ಆಗ ಶಾಸಕರು, ಡಿಎಫ್‌ಒಗೆ ಕರೆ ಎಸಿಎಫ್‌ ಅಮರಾಕ್ಷರ ಅವರಿಗೆ ಶೋಕಾಸ್ ನೋಟಿಸ್ ನೀಡಲು ಹೇಳಿದರು.

ಅರಣ್ಯದಲ್ಲಿ ಬದುಕುವ ಜನರ ಮನೆ ರಿಪೇರಿಗೆ ತೊಂದರೆ ನೀಡಿದರೆ ನಾನು ಸಹಿಸುವುದಿಲ್ಲ. ಜನರಿಗೆ ಬದುಕುವ ಹಕ್ಕಿದೆ. ನೀವು ಮನಸ್ಸಿಗೆ ಬಂದಂತೆ ವರ್ತಿಸಿದರೆ ನಾನು ನನ್ನ ಕ್ರಮ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರದ ಕಾರ್ಯಕ್ರಮವನ್ನು ಜನತೆಗಾಗಿ ಮಾಡಿದಾಗ ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು. ನೀವೇ ಡೀಲ್ ಮಾಡಬಾರದು, ನಮಗೂ ಜನರ ಅಗತ್ಯತೆ ಬಗ್ಗೆ ತಿಳಿಯಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಪಾಠ ಮಾಡಿದರು.

ಕಳಪೆ ಕಾಮಗಾರಿ ಕುರಿತು ಮಾತನಾಡಿದ ಶಾಸಕರು, ಕಳಪೆ ಕಾಮಗಾರಿ ನಡೆದ ಬಗ್ಗೆ ಸಾರ್ವಜನಿಕರು ದೂರುತ್ತಿದ್ದು ನಿಮಗೆ ಆಸಕ್ತಿ ಇದ್ದರೆ ಇಲ್ಲಿ ಇರಿ, ಬಹಳ ವರ್ಷಗಳಿಂದ ಬೀಡು ಬಿಟ್ಟ ನೀವು ಜಾಗ ಖಾಲಿ ಮಾಡಿ, ಆಸಕ್ತಿ ಇಲ್ಲದೆ ಕೆಲಸ ಮಾಡಬೇಡಿ, ನೀವು ಮಾಡುವ ತಪ್ಪುಗಳು ಜನರೇ ಹೇಳುವಂತಹ ಸ್ಥಿತಿ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

800 ಜನರು ಈ ವರೆಗೂ ವಾರಸಾ ಮಾಡಿಕೊಂಡಿಲ್ಲ ಎಂದು ತಹಸೀಲ್ದಾರ್‌ರು ಸಭೆಯ ಗಮನಕ್ಕೆತಂದರು. ಕೂಡಲೇ ಗುಂದಕ್ಕೆ ಬಸ್ ಬಿಡುವಂತೆ ಸಾರಿಗೆ ಇಲಾಖೆಗೆ ಸೂಚಿಸಿದ ಶಾಸಕರು, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗೆ ರಸ್ತೆ ಸರಿಪಡಿಸಿ ಬ್ರಿಡ್ಜ್ ಪಕ್ಕದಿಂದ ಬಸ್ ಹೋಗುವಂತೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಇಒಗೆ ಎಲ್ಲ ಕಾಮಗಾರಿಗಳ ಬಗ್ಗೆ ಗಮನ ಹರಿಸಿ ಕ್ರಮಕೈಕೊಳ್ಳಲು ಸೂಚಿಸಿದರು. ತಾಲೂಕು ಉಸ್ತುವಾರಿ, ಧಾರವಾಡ ಕೃಷಿ ವಿವಿ ಕುಲಪತಿ ಜಯಲಕ್ಷ್ಮಿ ರಾಯಕೋಡ, ತಹಸೀಲ್ದಾರ್‌ ಮಂಜುನಾಥ ಮುನ್ನೊಳೀ, ಇಒ ಆನಂದ ಬಡಕುಂದ್ರಿ, ಡಿಐಎಸ್‌ಪಿ ಶಿವಾನಂದ ಕಟಗಿ, ಗ್ರಾಪಂ ಅಧ್ಯಕ್ಷೆ ಚಂದ್ರಿಮ ಮಿರಾಷಿ ಇದ್ದರು.