ಎಸ್. ಬಾಲರಾಜುಗೆ ಒಲಿದ ಬಿಜೆಪಿ ಟಿಕೆಟ್‌

| Published : Mar 14 2024, 02:00 AM IST

ಸಾರಾಂಶ

ಚಾಮರಾಜನಗರ ಮೀಸಲು ಕ್ಷೇತ್ರದಿಂದ ಮಾಜಿ ಶಾಸಕ ಎಸ್‌. ಬಾಲರಾಜು ಅವರಿಗೆ ಬಿಜೆಪಿ ಟಿಕೆಟ್‌ ಒಲಿದಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರಭಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸಂಸದ ಶ್ರೀನಿವಾಸ ಪ್ರಸಾದ್ ಅಳಿಯಂದರಿಗೆ ಟಿಕೆಟ್ ಕೈ ತಪ್ಪಿದ್ದು ಮಾಜಿ ಶಾಸಕ ಬಾಲರಾಜು ಕಮಲಪಡೆ ಹುರಿಯಾಳಾಗಿದ್ದಾರೆ.

ದೇವರಾಜು ಕಪ್ಪಸೋಗೆ

ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರ ಮೀಸಲು ಕ್ಷೇತ್ರದಿಂದ ಮಾಜಿ ಶಾಸಕ ಎಸ್‌. ಬಾಲರಾಜು ಅವರಿಗೆ ಬಿಜೆಪಿ ಟಿಕೆಟ್‌ ಒಲಿದಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರಭಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸಂಸದ ಶ್ರೀನಿವಾಸ ಪ್ರಸಾದ್ ಅಳಿಯಂದರಿಗೆ ಟಿಕೆಟ್ ಕೈ ತಪ್ಪಿದ್ದು ಮಾಜಿ ಶಾಸಕ ಬಾಲರಾಜು ಕಮಲಪಡೆ ಹುರಿಯಾಳಾಗಿದ್ದಾರೆ.2004 ರಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಶಾಸಕರಾಗಿದ್ದ ಬಾಲರಾಜು ಬಳಿಕ ನಡೆದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರೂ ಕೈ ಹಿಡಿದಿರಲಿಲ್ಲ. 2023 ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಬಾಲರಾಜು ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದರು. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬಾಲರಾಜು ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು ಮೊದಲ ಬಾರಿಗೆ ಲೋಕಸಭಾ ಅಖಾಡಕ್ಕೆ ಇಳಿಯಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಾಮರಾಜನಗರದಲ್ಲಿ ಮೊದಲ ಬಾರಿಗೆ 2019ರಲ್ಲಿ ಶ್ರಿನಿವಾಸ ಪ್ರಸಾದ್ ಕಮಲ ಅರಳಿಸಿದ್ದರು.

ಬಿಜೆಪಿ ಮೂಲಕ ರಾಜಕೀಯ ಪ್ರವೇಶ:ಎಸ್‌.ಬಾಲರಾಜು ಅವರು 1999ರಲ್ಲಿ ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡುವ ಮೂಲಕ 24,250 ಮತಗಳಿಸಿದ್ದರು. ನಂತರ 2004 ರಲ್ಲಿ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟದಿಂದ ಟಿಕೆಟ್‌ ಕೈ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ 27,736 ಮತ ಗಳಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ನಂತರ 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 11,805, 2013 ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ 32,929 ಮತಗಳಿಸಿ ಸೋಲು ಅನುಭವಿಸಿದ್ದರು. ನಂತರ ಕಾಂಗ್ರೆಸ್‌ ಸೇರ್ಪಡೆಯಾಗಿ 2018 ಮತ್ತು 2023ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ್ದರಿಂದ ಬಿಜೆಪಿ ಸೇರ್ಪಡೆಯಾಗುವ ಮೂಲಕ 2024ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಟಿಕೆಟ್ ಆಕಾಂಕ್ಷಿಗಳು ಯಾರ್ಯಾರಿದ್ದರು..? ಬಿಜೆಪಿಯಿಂದ ಟಿಕೆಟ್ ಪಡೆಯಲು ಆಕಾಂಕ್ಷಿಗಳ ಸರತಿ ಸಾಲೇ ನಿರ್ಮಾಣವಾಗಿತ್ತು. ಎಸ್.ಬಾಲರಾಜು, ಪ್ರಸಾದ್ ಅಳಿಯಂದಿರಾದ ಡಾ.ಮೋಹನ್, ಹರ್ಷವರ್ಧನ್, ದಿ.ಕೆ.ಶಿವರಾಂ, ಎಸ್.ಮಹಾದೇವಯ್ಯ, ವೆಂಕಟರಮಣಸ್ವಾಮಿ ಪಾಪು, ಎಚ್‌.ಸಿ. ಲಕ್ಷ್ಮಣ್‌ ಆಕಾಂಕ್ಷಿಗಳಾಗಿ ಗುರುತಿಸಿಕೊಂಡಿದ್ದರು.