ಎಸ್.ಬಂಗಾರಪ್ಪ ನಿಜವಾದ ಹಿಂದುತ್ವವಾದಿ: ರವಿಕುಮಾರ್ ಟೆಲೆಕ್ಸ್

| Published : Oct 27 2024, 02:29 AM IST / Updated: Oct 27 2024, 02:30 AM IST

ಎಸ್.ಬಂಗಾರಪ್ಪ ನಿಜವಾದ ಹಿಂದುತ್ವವಾದಿ: ರವಿಕುಮಾರ್ ಟೆಲೆಕ್ಸ್
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿಯಾಗಿದ್ದ ಸಂದರ್ಭ ಎಸ್. ಬಂಗಾರಪ್ಪ ಆರಾಧನಾ ಯೋಜನೆ ಜಾರಿಗೆ ತರುವ ಮೂಲಕ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಈ ಕಾರಣದಿಂದ ರಾಜ್ಯ ಕಂಡ ನಿಜವಾದ ಹಿಂದುತ್ವವಾದಿ ಎಂದರೆ ಎಸ್. ಬಂಗಾರಪ್ಪ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪರಿಷತ್ತು ಸದಸ್ಯ ಎನ್.ರವಿಕುಮಾರ್ ಟೆಲೆಕ್ಸ್ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಮುಖ್ಯಮಂತ್ರಿಯಾಗಿದ್ದ ಸಂದರ್ಭ ಎಸ್. ಬಂಗಾರಪ್ಪ ಆರಾಧನಾ ಯೋಜನೆ ಜಾರಿಗೆ ತರುವ ಮೂಲಕ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಈ ಕಾರಣದಿಂದ ರಾಜ್ಯ ಕಂಡ ನಿಜವಾದ ಹಿಂದುತ್ವವಾದಿ ಎಂದರೆ ಎಸ್. ಬಂಗಾರಪ್ಪ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪರಿಷತ್ತು ಸದಸ್ಯ ಎನ್.ರವಿಕುಮಾರ್ ಟೆಲೆಕ್ಸ್ ಹೇಳಿದರು. ಶನಿವಾರ ಪಟ್ಟಣದ ಡಾ. ರಾಜ್ ರಂಗಮಂದಿರದಲ್ಲಿ ಎಸ್. ಬಂಗಾರಪ್ಪ ಫೌಂಡೇಶನ್ ಮತ್ತು ಎಸ್. ಬಂಗಾರಪ್ಪ ವಿಚಾರ ವೇದಿಕೆ ವತಿಯಿಂದ ಬಂಗಾರಪ್ಪ ಅವರ ೯೨ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಬಂಗಾರಪ್ಪ ಸಮಾಜವಾದಿ ಚಿಂತನೆಗಳು, ಇಂದಿನ ಪ್ರಸ್ತುತತೆ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಆರಾಧನಾ ಯೋಜನೆ ಮೂಲಕ ನನೆಗುದಿಯಲ್ಲಿದ್ದ ರಾಜ್ಯದ ಅದೆಷ್ಟೋ ನಗರ, ಪಟ್ಟಣ, ಗ್ರಾಮೀಣ ಪ್ರದೇಶದ ದೇವಸ್ಥಾನಗಳು ಅಭಿವೃದ್ಧಿ ಕಂಡಿವೆ. ಅಲ್ಲದೇ, ಹೊಸ ವಿನ್ಯಾಸದಲ್ಲಿ ರೂಪುಗೊಂಡಿವೆ. ಹಾಗಾಗಿ, ತಮ್ಮ ರಾಜಕೀಯ ಜೀವನದುದ್ದಕ್ಕೂ ಹಿಂದುವಾದಿಯಾಗಿಯೇ ನಡೆದಿದ್ದಾರೆ. ಅಧಿಕಾರದ ಆಸೆಗಾಗಿ ಯಾವುದೇ ಪಕ್ಷಕ್ಕೆ ಸೀಮಿತರಾಗದೇ, ಜಾತಿ, ಮತ, ಧರ್ಮಗಳನ್ನು ಮೀರಿದ ಸಮಾನತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ರಾಜಕೀಯ ನೇತಾರನಾಗಿ, ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ ಎಂದರು.

ಸದಾ ಬಡವರು, ಹಿಂದುಳಿದವರ ಪರವಾಗಿ ಆಲೋಚಿಸುತ್ತಾ, ತಳಸಮುದಾಯಗಳಿಗೆ ಧ್ವನಿಯಾಗಿ ಆಡಳಿತ ನಡೆಸಿದವರು ಬಂಗಾರಪ್ಪ. ಅವರು ಈ ನಾಡು ಕಂಡ ಕಾರ್ಲ್‌ ಮಾರ್ಕ್ಸ್‌ ಎಂದು ಬಣ್ಣಿಸಿದರೆ ತಪ್ಪಾಗಲಾರದು. ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆ ಹೊಂದಿದ್ದ ಎಸ್‌.ಬಂಗಾರಪ್ಪ ಅವರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವ ರಾಜಕಾರಣಿಗೆ ಬಂಗಾರಪ್ಪ ಅವರು ಮಾದರಿಯಾಗಿದ್ದಾರೆ. ಜೊತೆಗೆ ನಾಯಕರನ್ನು ರೂಪಿಸುವ ಔದಾರ್ಯ ಗುಣವನ್ನು ಬಂಗಾರಪ್ಪ ಹೊಂದಿದ್ದರು ಎಂದರು.

ಕೆಲ ಕ್ಲಿಷ್ಟಕರ ಸನ್ನಿವೇಷದಲ್ಲಿ ಕಾನೂನಿನ ತೊಡಕುಗಳು ಎದುರಾದ ಸಂದರ್ಭದಲ್ಲಿಯೂ ಮಾನವೀಯತೆ ಗುರಿಯಾಗಿಸಿಕೊಂಡು ಬಂಗಾರಪ್ಪ ಜನಪರ ಆಡಳಿತವನ್ನು ನೀಡಿದ್ದರು. ಇದರಿಂದಾಗಿ ರಾಜ್ಯ ಹಾಗೂ ರಾಷ್ಟ್ರದ ಉದ್ದಗಲಕ್ಕೂ ಅವರ ಅಭಿಮಾನಿಗಳು ಇರುವುದನ್ನು ಕಾಣಬಹುದು ಎಂದು ಹೇಳಿದರು.

ಪ್ರೊ .ಎಲ್. ಮುಕುಂದರಾಜ್ ಬಂಗಾರಪ್ಪ ಸಮಾಜವಾದಿ ಚಿಂತನೆಗಳು, ಇಂದಿನ ಪ್ರಸ್ತುತತೆ ಕುರಿತು ವಿಚಾರ ಮಂಡಿಸಿದರು. ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜ್‌ನ ಪ್ರಾಧ್ಯಾಪಕ ಸಿರಾಜ್ ಅಹ್ಮದ್ ಬಂಗಾರಪ್ಪ ಕುರಿತು ಮಾತನಾಡಿದರು.

ಎಸ್.ಬಂಗಾರಪ್ಪ ಫೌಂಡೇಶನ್ ಅಧ್ಯಕ್ಷ ಹಾಗೂ ಸಚಿವ ಮಧು ಬಂಗಾರಪ್ಪ ನೇತೃತ್ವ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಬಸವಂತಪ್ಪ ಕೋಟೆ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ, ಸದಾನಂದಗೌಡ ಬಿಳಗಲಿ, ಕೆ.ವಿ. ಗೌಡ, ಎಂ.ಡಿ. ಶೇಖರ್, ಜೆ.ಪ್ರಕಾಶ್ ಹಳೇ ಸೊರಬ, ಸುರೇಶ್ ಹಾವಣ್ಣನವರ್, ಜ್ಯೋತಿ ನಾರಾಯಣಪ್ಪ, ಮಂಜುನಾಥ ತಲಗಡ್ಡೆ, ಶ್ರೀಕಾಂತ ಚಿಕ್ಕಶಕುನ ಸೇರಿದಂತೆ ಮತ್ತಿತರರಿದ್ದರು.