ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಗೆದ್ದಿದ್ದ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಕೊನೆಗೂ ಬಿಜೆಪಿ ಟಿಕೆಟ್ ಕೈತಪ್ಪಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗಿದೆ.ತೀರಾ ಇತ್ತೀಚಿನವರೆಗೆ ಬಿಜೆಪಿ ಟಿಕೆಟ್ಗೆ ಪ್ರತಾಪ್ ಸಿಂಹ ಅವರ ಹೆಸರು ಮಾತ್ರ ಇತ್ತು. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಾಪ್ ಸಿಂಹ ಅವರ ಬದಲಿಗೆ ಮೈಸೂರು ರಾಜವಂಶಸ್ಥ ಯದುವೀರ್ ಅವರಿಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಬಿಜೆಪಿಯು ಬುಧವಾರ ಸಂಜೆ ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯಲ್ಲಿ ಅಂತಿಮವಾಗಿ ಅದು ನಿಜವಾಗಿದೆ.
ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ 2014 ರಲ್ಲಿ ಅಚ್ಚರಿಯ ಅಭ್ಯರ್ಥಿಯಾಗಿ ಮೈಸೂರಿನಿಂದ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ನ ಎಚ್. ವಿಶ್ವನಾಥ್ ಅವರನ್ನು ಸೋಲಿಸಿ, ಆಯ್ಕೆಯಾದರು. 2019 ರಲ್ಲಿ ಕಾಂಗ್ರೆಸಿನ ಸಿ.ಎಚ್. ವಿಜಯಶಂಕರ್ ಅವರನ್ನು ಭಾರಿ ಅಂತರಗಳಿಂದ ಸೋಲಿಸಿ, ಪುನಾರಾಯ್ಕೆಯಾದರು. ಆ ಮೂಲಕ 1989ರ ನಂತರ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಂತರ ಸತತ ಎರಡನೇ ಬಾರಿಗೆ ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಬಾರಿ ಟಿಕೆಟ್ ಸಿಕ್ಕಿ, ಗೆದ್ದಿದ್ದರು. ಎಚ್.ಡಿ. ತುಳಸಿದಾಸಪ್ಪ ಅವರ ನಂತರ ಹ್ಯಾಟ್ರಿಕ್ ಗೆಲವು ದಾಖಲಿಸಿದವರು ಎಂಬ ಶ್ರೇಯ ಸಿಗುತ್ತಿತ್ತು.ಯದುವೀರ್ ಅವರು ರಾಜಸ್ಥಾನದ ಡಂಗರ್ಪುರ್ ರಾಜವಂಶಸ್ಥರಾದ ತ್ರಿಷಿಕಾ ಕುಮಾರಿ ಅವರನ್ನು ವಿವಾಹವಾಗಿದ್ದಾರೆ. ಅವರ ತ್ರಿಷಿಕಾ ಅವರ ತಂದೆ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದವರು. ಅವರು ಒತ್ತಡ ಹೇರಿದ್ದು ಜೊತೆಗೆ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನೀಡಿಕೆಗೆ ಕೆಲವರ ವಿರೋಧ ಮುಳುವಾಗಿದೆ.
ಜೆಡಿಎಸ್ ನಿರ್ಣಾಯಕಕಳೆದೆರಡು ಚುನಾವಣೆಗಳಲ್ಲೂ ಪ್ರತಾಪ್ ಸಿಂಹ ಗೆಲುವಿನಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಿತ್ತು. 2014 ರಲ್ಲಿ ಎಚ್. ವಿಶ್ವನಾಥ್ ಮೇಲಿನ ಕೋಪ, 2019 ರಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಸೋಲಿಗೆ ಮುಂದಾಗಿದೆ. ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡಿದೆ ಎಂಬ ಆಕ್ರೋಶದ ಮೇರೆಗೆ ಬೆಂಬಲ ನೀಡಿತ್ತು. ಜೊತೆಗೆ ಪ್ರತಾಪ್ ಸಿಂಹ ಒಕ್ಕಲಿಗರು ಎಂಬುದು ಕೂಡ ಪ್ಲಸ್ ಪಾಯಿಂಟ್ ಆಗಿತ್ತು. ಆದರೆ ಈ ಬಾರಿ ಜೆಡಿಎಸ್ ಏನು ಮಾಡುತ್ತದೆ, ಆ ಪಕ್ಷದ ಮತದಾರರು ಏನು ಮಾಡುತ್ತಾರೆ ಎಂಬುದರ ಮೇಲೆ ಫಲಿತಾಂಶ ನಿಂತಿದೆ.
ರಾಜವಂಶಸ್ಥರಿಗೆ ಇದೇ ಮೊದಲಲ್ಲ- ಬಿಜೆಪಿಯಿಂದ ಗೆದ್ದಿಲ್ಲಮೈಸೂರು ಲೋಕಸಭಾ ಕ್ಷೇತ್ರದಲ್ಲಿ ರಾಜವಂಶಸ್ಥರ ಸ್ಪರ್ಧೆ ಇದೇ ಮೊದಲ್ಲಲ್ಲ. 1984, 1989, 1996, 1999 ರಲ್ಲಿ ಕ್ಷೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾಗಿದ್ದರು. 1991 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ, 2004 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನಾನಂತರ ಯದುವೀರ್ ಅವರನ್ನು ಪ್ರಮೋದಾದೇವಿ ಒಡೆಯರ್ ಅವರು ದತ್ತು ತೆಗೆದುಕೊಂಡು, ಪಟ್ಟಾಭಿಷೇಕ ಹಾಗೂ ತ್ರಿಷಿಕಾಕುಮಾರಿ ಅವರ ಜೊತೆ ವಿವಾಹ ನೆರವೇರಿಸಿದ್ದರು.
ಒಡೆಯರ್ ಗೆದ್ದಾಗ- ಸೋತಾಗ ಕೊಡಗು ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಸೇರಿರಲಿಲ್ಲ. ಎಚ್.ಡಿ. ಕೋಟೆ ಹಾಗೂ ಕೆ.ಆರ್. ನಗರ ಮೈಸೂರಿನಲ್ಲಿ ಇದ್ದವು. ಈಗ ಎಚ್.ಡಿ. ಕೋಟೆಯು ಚಾಮರಾಜನಗರ, ಕೆ.ಆರ್. ನಗರವು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿವೆ.