ಸಾರಾಂಶ
ಗೃಹಭಂಗ ಕಾದಂಬರಿ ನಮ್ಮನ್ನು ಎಷ್ಟೊಂದು ಆಕರ್ಷಣೆ ಮಾಡಿತ್ತು ಎಂದರೆ ಪುಸ್ತಕ ಓದುತ್ತಾ ಓದುತ್ತಾ ಒಂದು ಏನೋ ನಮಗೇ ಗೊತ್ತಿಲ್ಲದ ಲೋಕ ಸೃಷ್ಟಿಯಾಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್ ಗೃಹಭಂಗ ಕಾದಂಬರಿ ನಮ್ಮನ್ನು ಎಷ್ಟೊಂದು ಆಕರ್ಷಣೆ ಮಾಡಿತ್ತು ಎಂದರೆ ಪುಸ್ತಕ ಓದುತ್ತಾ ಓದುತ್ತಾ ಒಂದು ಏನೋ ನಮಗೇ ಗೊತ್ತಿಲ್ಲದ ಲೋಕ ಸೃಷ್ಟಿಯಾಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್ ತಿಳಿಸಿದರು.
ರಮಣಾ ಬ್ಲಾಕ್ ನಲ್ಲಿರುವ ಓದಿನ ಮನೆ (ಗ್ರಂಥಾಲಯ) ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್.ಎಲ್. ಭೈರಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಎಸ್. ಎಲ್. ಭೈರಪ್ಪರವರು ಕಟ್ಟಿಕೊಟ್ಟಂತಹ ಪದಗಳು ಮತ್ತು ವರ್ಣನೆಗಳು ಪರ್ವಕಾಲಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತಿತ್ತು. ಅಷ್ಟೊಂದು ಶಕ್ತಿ ಆ ಸಾಹಿತ್ಯದಲ್ಲಿ ಅಡಗಿತ್ತು. ಮತ್ತೊಬ್ಬ ಎಸ್.ಎಲ್. ಭೈರಪ್ಪ ಹುಟ್ಟುವುದಕ್ಕೆ ಸಾಧ್ಯನೇ ಇಲ್ಲ. ಹೇಗೆ ಕುವೆಂಪುರವರು ರಾಮಾಯಣ ದರ್ಶನಂ ಮೂಲಕ ಪ್ರಸಿದ್ಧಿ ಪಡೆದರೋ ಹಾಗೇ ಎಸ್.ಎಲ್. ಭೈರಪ್ಪರವರ ಪರ್ವ ಆಧುನಿಕ ಕಾಲಘಟ್ಟದಲ್ಲಿ ಪರ್ವ ಮಹಾಭಾರತವನ್ನು ನೋಡಿದ ರೀತಿಯೇ ಬೇರೆ. ಪರ್ವ ಕಾದಂಬರಿಗೆ ಮತ್ತೊಂದು ಜ್ಞಾನಪೀಠ ಬರಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೆ. ನಮಗೆ ಒಂಬತ್ತನೇ ಜ್ಞಾನಪೀಠ ಪ್ರಶಸ್ತಿ ಸಿಗುವಂತ ಸಾಧ್ಯತೆಗಳು ಕ್ಷೀಣಿಸಿತು ನಾವು ನಮ್ಮ ಕನ್ನಡ ಸಾಹಿತ್ಯ ಲೋಕದ ಅತ್ಯಮೂಲ್ಯ ರತ್ನವನ್ನು ಕಳೆದುಕೊಂಡಿದ್ದೇವೆ ಎಂದು ಕಂಬನಿ ಮಿಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ರಾಮಣ್ಣ ಮಾತನಾಡಿ ಎಸ್.ಎಲ್. ಭೈರಪ್ಪನವರಿಗೆ ಸಾಹಿತ್ಯ ಸರಸ್ವತಿ ಒಲಿದಿದ್ದರಿಂದ ಭಾಷೆಯನ್ನುಎತ್ತರದ ಹಂತಕ್ಕೆ ತೆಗೆದುಕೊಂಡು ಹೋಗಿದ್ದರು. ಅವರ ಮಂದ್ರ ಎನ್ನುವ ಕಾದಂಬರಿಯನ್ನು ಓದಿದಾಗ ಅಪ್ಪಟ ಸಂಗೀತಗಾರನಿಗೆ ಸಿದ್ಧಿಸಬಹುದಾದಂತಹ ಶಕ್ತಿ ಅನ್ನುವಂತದ್ದನ್ನು ಅವರು ಆ ಕಾದಂಬರಿಯಲ್ಲಿ ತರುತ್ತಾರೆ ಎಂದರು. ಆಡಿಟರ್ ವೇಣು ತಮ್ಮ ಹಾಗೂ ಎಸ್.ಎಲ್. ಭೈರಪ್ಪರವರ ಒಡನಾಟದ ಬಗ್ಗೆ ವಿವರಿಸಿದರು. ಎಸ್.ಎಲ್. ಭೈರಪ್ಪರವರ ಕಾದಂಬರಿಗಳು ಬಿಡುಗಡೆ ಮುಂಚೆಯೇ ಪ್ರೀ ಆರ್ಡರ್ ಮೂಲಕವೇ 4-5 ಮುದ್ರಣಗಳನ್ನು ಕಾಣುತ್ತಿದ್ದವು ಅವರು ಕನಕಪುರದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಪರಿಷತ್ ವತಿಯಿಂದ ಕೊಡಮಾಡುವ ಒಂದು ಲಕ್ಷ ಹಣವನ್ನು ತುಂಬಿದ ಸಭೆಯಲ್ಲಿ ವೇದಿಕೆ ಮೇಲೆಯ ಕನಕಪುರದ ವೃದ್ಧಾಶ್ರಮಕ್ಕೋ ಅಥವಾ ಅಭಿವೃದ್ದಿ ಕಾರ್ಯಕ್ರಮಕ್ಕೆ ಕೊಟ್ಟು ಮಾನವೀಯತೆಯನ್ನು ಮೆರೆದರು ಎಂದು ಹೇಳಿದರು. ಓದುಗರ ಪರವಾಗಿ ರಂಗ ನಿರ್ದೇಶಕಿ ಸುಶ್ಮ, ಸುರೇಶ್, ಸೋಮು, ನಾರಾಯಣ್, ನಾರಾಯಣ್, ಶ್ವೇತಾ ಸೇರಿದಂತ ಹಲವರು ಎಸ್.ಎಲ್. ಭೈರಪ್ಪರವರ ಬಗ್ಗೆ, ತಾವು ಓದಿದ ಅವರ ಸಾಹಿತ್ಯದ ಬಗ್ಗೆ ಮಾತನಾಡಿದರು. ಈ ವೇಳೆ ಲೇಖಕರಾದ ವೈ.ಜಿ. ವೆಂಕಟೇಶಯ್ಯ, ನಾರಾಯಣ್, ಶ್ರೀನಿವಾಸ್ ನಳಿನ, ಕಾಂತರಾಜು, ಐಟಿಐ ನಂಜುಂಡಸ್ವಾಮಿ, ಗಜಾನನ ಒಡೆಯರ್, ಶಂಕರ್, ರವಿ ಸೇರಿದಂತ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.