ದಕ್ಷಿಣ ಕನ್ನಡದಲ್ಲಿ ಐಟಿ ಕಂಪನಿ ಸ್ಥಾಪನೆ ಹಿಂದೆ ಎಸ್.ಎಂ.ಕೃಷ್ಣ ಪ್ರಯತ್ನ!

| Published : Dec 11 2024, 12:47 AM IST

ದಕ್ಷಿಣ ಕನ್ನಡದಲ್ಲಿ ಐಟಿ ಕಂಪನಿ ಸ್ಥಾಪನೆ ಹಿಂದೆ ಎಸ್.ಎಂ.ಕೃಷ್ಣ ಪ್ರಯತ್ನ!
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪಾಂಚಜನ್ಯ ರಥಯಾತ್ರೆ ನಡೆಸಿ ಮಂಗಳೂರಿಗೂ ಆಗಮಿಸಿದ್ದರು ಎಂದು ನೆನಪಿಸುತ್ತಾರೆ ಮಾಜಿ ಸಚಿವ ರಮಾನಾಥ ರೈ. ಇದಲ್ಲದೆ ಧರ್ಮಸ್ಥಳವೇ ಮೊದಲಾದ ಧಾರ್ಮಿಕ ತಾಣಗಳಿಗೂ ಎಸ್‌.ಎಂ.ಕೃಷ್ಣ ಭೇಟಿ ನೀಡಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯನ್ನು ಇನ್ನೊಂದು ಐಟಿ ಕೇಂದ್ರ ಮಾಡಲು ಮಾಜಿ ಮುಖ್ಯಮಂತ್ರಿ ದಿ. ಎಸ್‌.ಎಂ.ಕೃಷ್ಣ ಎಲ್ಲ ರೀತಿಯ ಸಹಕಾರ ನೀಡಿದ್ದರು ಎಂಬುದು ಗಮನಾರ್ಹ. ಬೆಂಗಳೂರನ್ನು ಸಿಂಗಾಪುರ ಮಾದರಿಯಲ್ಲಿ ಐಟಿ ಹಬ್‌ ಮಾಡುವಂತೆ ಮಂಗಳೂರನ್ನು ಐಟಿ ಸಿಟಿ ಮಾಡುವ ಕನಸನ್ನು ಮುಖ್ಯಮಂತ್ರಿಯಾಗಿದ್ದಾಗ ಎಸ್‌.ಎಂ.ಕೃಷ್ಣ ಕಂಡಿದ್ದರು. ಅದರ ಫಲವಾಗಿಯೇ ಮಂಗಳೂರು ಹೊರವಲಯ ಮುಡಿಪಿನಲ್ಲಿ ಐಟಿ ಕಂಪನಿಗಳು ತಲೆ ಎತ್ತುವಂತಾಯಿತು.

ಮುಡಿಪಿನಲ್ಲಿ ಸುಮಾರು 200 ಎಕರೆ ಪ್ರದೇಶವನ್ನು ಐಟಿ ಕಂಪನಿಗೆ ಮುಡಿಪಾಗಿಟ್ಟ ಎಸ್‌.ಎಂ. ಕೃಷ್ಣ, ಭವಿಷ್ಯದಲ್ಲಿ ಅಲ್ಲಿಗೆ ಇನ್ನಷ್ಟು ಐಟಿ ಕಂಪನಿಗಳು ಬರುವಂತೆ ರೂಪಿಸಿದ್ದರು. ಇನ್ಫೋಸಿಸ್‌ ಅಲ್ಲದೆ ವಿಪ್ರೋ ಕಂಪನಿ ಕೂಡ ಮುಡಿಪಿಗೆ ಆಗಮಿಸುವ ಸುದ್ದಿ ಇತ್ತು. ಈಗ ಮುಡಿಪಿನಲ್ಲಿ ಐಟಿ ಕಂಪನಿ ತಲೆ ಎತ್ತಿದ್ದು, ಇದರ ಹಿಂದಿನ ಶಕ್ತಿ ಎಸ್‌.ಎಂ.ಕೃಷ್ಣ ಆಗಿದ್ದರು ಎಂಬುದು ಗಮನಾರ್ಹ. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬಂಟ್ವಾಳದಿಂದ ಗೆದ್ದ ರಮಾನಾಥ ರೈ ಅವರು ಬಂದರು, ಒಳನಾಡು ಜಲಸಾರಿಗೆ ಸಚಿವರಾಗಿದ್ದರು. ಬಳಿಕ ಸಾರಿಗೆ ಸಚಿವರೂ ಆಗಿದ್ದರು. ಈ ವೇಳೆ ಮಲ್ಪೆ, ಗಂಗೊಳ್ಳಿ ಬಂದರು ಅಭಿವೃದ್ಧಿ, ಬಸ್‌ ನಿಲ್ದಾಣ ಹಾಗೂ ಡಿಪೋಗಳ ನಿರ್ಮಾಣ, ಮಂಗಳೂರಿನ ಮಹಾತ್ಮಾಗಾಂಧಿ ರಸ್ತೆಯ ಉದ್ಘಾಟನೆಯನ್ನು ಸ್ವತಃ ಸಿಎಂ ಎಸ್‌.ಎಂ.ಕೃಷ್ಣ ನೆರವೇರಿಸಿದ್ದರು. ಅಲ್ಲದೆ ದ.ಕ. ಜಿಲ್ಲೆಯ ಅಭಿವೃದ್ಧಿಗೆ ಪ್ರತ್ಯೇಕ ಟಾಸ್ಕ್‌ಫೋರ್ಸ್‌ ರಚಿಸಿದ್ದರು.

ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪಾಂಚಜನ್ಯ ರಥಯಾತ್ರೆ ನಡೆಸಿ ಮಂಗಳೂರಿಗೂ ಆಗಮಿಸಿದ್ದರು ಎಂದು ನೆನಪಿಸುತ್ತಾರೆ ಮಾಜಿ ಸಚಿವ ರಮಾನಾಥ ರೈ. ಇದಲ್ಲದೆ ಧರ್ಮಸ್ಥಳವೇ ಮೊದಲಾದ ಧಾರ್ಮಿಕ ತಾಣಗಳಿಗೂ ಎಸ್‌.ಎಂ.ಕೃಷ್ಣ ಭೇಟಿ ನೀಡಿದ್ದರು.

ಸ್ಪೀಕರ್‌, ಸಂಸದ, ಶಾಸಕರ ಸಂತಾಪ:

ತಮ್ಮ ದೂರದೃಷ್ಟಿ, ವಿಶಿಷ್ಟ ಆಡಳಿತ ಶೈಲಿ ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಜನಪ್ರಿಯ ನಾಯಕರಾಗಿದ್ದು ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಅದ ಛಾಪನ್ನು ಮೂಡಿಸಿದ್ದ ಎಸ್‌.ಎಂ.ಕೃಷ್ಣ ನಿಧನಕ್ಕೆ ಕರ್ನಾಟಕ ರಾಜ್ಯ ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಅವರ ಅಗಲಿಕೆಯಿಂದ ನಮ್ಮ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಹಾಗೂ ನಾವೆಲ್ಲರೂ ಒಂದು ಉತ್ತಮ, ಸ್ಫೂರ್ತಿದಾಯಕ ನಾಯಕನನ್ನು ಕಳೆದುಕೊಂಡಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಟರ್ನೆಟ್‌ ಮತ್ತು ಕಂಪ್ಯೂಟರ್ ತರಬೇತಿಯನ್ನು ನೀಡುವ ಸಲುವಾಗಿ ಕಿಯೊನಿಕ್ಸ್ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಕಂಪ್ಯೂಟರ್ ಶಿಕ್ಷಣವನ್ನು ಗ್ರಾಮೀಣ ಮಟ್ಟಕ್ಕೆ ಕೊಂಡೊಯ್ದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ದಾಸೋಹ ಯೋಜನೆಯನ್ನು ಯಶಸ್ವಿಯಾಗಿ ಮುಂದುವರಿಸಿರುವ ಮೂಲಕ ಅವರು ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಎರಡನ್ನೂ ಉತ್ತೇಜಿಸವಲ್ಲಿ ಮಹತ್ವದ ಪಾತ್ರ ವಹಿಸಿದವರು ಎಂದು ಸ್ಪೀಕರ್‌ ಯು.ಟಿ.ಖಾದರ್‌ ಸ್ಮರಿಸಿದ್ದಾರೆ.

ಸಂಸದ ಕ್ಯಾ.ಬ್ರಿಜೇಶ್‌ ಚೌಟ ಸಂತಾಪ:

ರಾಜ್ಯದ ಹಾಗೂ ದೇಶದ ಅಭಿವೃದ್ಧಿಗೆ ಅನುಪಮ ಕೊಡುಗೆ ನೀಡಿದ್ದ ಎಸ್.ಎಂ.ಕೃಷ್ಣ ಅವರ ನಿಧನದಿಂದ ನಾಡು ಒಬ್ಬ ಶ್ರೇಷ್ಠ ಮಹಾನ್‌ ನಾಯಕನನ್ನು ಕಳೆದುಕೊಂಡಿದೆ. ನಾಡು ಕಂಡ ಶ್ರೇಷ್ಠ ಅನುಭವಿ ರಾಜಕಾರಣಿಯಾಗಿದ್ದ ದೂರದೃಷ್ಟಿಯ ಆಡಳಿತಕ್ಕೆ ಮಾದರಿಯಾಗಿದ್ದ ಎಸ್‌.ಎಂ. ಕೃಷ್ಣ ಅವರು ಬೆಂಗಳೂರು ನಗರಕ್ಕೆ ಐಟಿ-ಬಿಟಿಯ ಗರಿಮೆಯನ್ನು ಮೂಡಿಸುವ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮೇರು ವ್ಯಕ್ತಿತ್ವದ ರಾಜಕೀಯ ಧುರೀಣ ಎಸ್‌.ಎಂ. ಕೃಷ್ಣ ಅವರ ನಿಧನವು ಇಡೀ ನಾಡಿಗೆ ತುಂಬಲಾರದ ನಷ್ಟ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ಶಾಸಕ ವೇದವ್ಯಾಸ್‌ ಕಾಮತ್‌ ನುಡಿ ನಮನ:

ಮುಖ್ಯಮಂತ್ರಿಯಾಗಿ ಎಸ್‌.ಎಂ.ಕೃಷ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಹತ್ತು ಹಲವು ಹೊಸ ಪ್ರಯೋಗಗಳನ್ನು ಪರಿಚಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಅವರು ಕೇಂದ್ರ ಸಚಿವರಾಗಿ, ವಿದೇಶಾಂಗ ಮಂತ್ರಿಗಳಾಗಿ ದೇಶಕ್ಕೂ ಹಲವು ಕೊಡುಗೆ ನೀಡಿದ್ದರು. ಅಂತಹ ಶ್ರೇಷ್ಠ ವ್ಯಕ್ತಿತ್ವದ ನಿಧನದಿಂದ ದೇಶದ ಧೀಮಂತ ರಾಜಕಾರಣದ ವ್ಯಕ್ತಿತ್ವವೊಂದರ ಅಂತ್ಯವಾಗಿದ್ದು ಇಡೀ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಸಂತಾಪ ಸೂಚಕದಲ್ಲಿ ಪ್ರಾರ್ಥಿಸಿದ್ದಾರೆ.