ಎಸ್‌.ಪಿ.ದಿನೇಶ್‌ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ!

| Published : May 12 2024, 01:16 AM IST

ಸಾರಾಂಶ

ನೈಋತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್‌ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿ, ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಹೀಗಾಗಿ ಕಳೆದ 10 ತಿಂಗಳಿನಿಂದ ತಯಾರಿ ನಡೆಸಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಪಕ್ಷದ ಎಲ್ಲಾ ಸಂಘಟನೆಗಳ ಬಳಸಿಕೊಂಡು ಹತ್ತು ಸಾವಿರಕ್ಕೂ ಹೆಚ್ಚು ನೋಂದಣಿ ಮಾಡಿಸಿದ್ದೇನೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೈಋತ್ಯ ಪದವೀಧರರ ಕ್ಷೇತ್ರದಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ಎಸ್.ಪಿ.ದಿನೇಶ್ ಸ್ಪಷ್ಟಪಡಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನೈಋತ್ಯ ಪದವೀಧರ ಕ್ಷೇತ್ರದಿಂದ ನನಗೆ ಟಿಕೆಟ್‌ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿ, ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಹೀಗಾಗಿ ಕಳೆದ 10 ತಿಂಗಳಿನಿಂದ ತಯಾರಿ ನಡೆಸಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಪಕ್ಷದ ಎಲ್ಲಾ ಸಂಘಟನೆಗಳ ಬಳಸಿಕೊಂಡು ಹತ್ತು ಸಾವಿರಕ್ಕೂ ಹೆಚ್ಚು ನೋಂದಣಿ ಮಾಡಿಸಿದ್ದೇನೆ. ಆದರೆ, ಈಗ ಪಕ್ಷಾಂತರಿಯಾದ, ಬೇರೆ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಪಕ್ಷದ ನಾಯಕರಿಗೆ ಹೀನಾಯವಾಗಿ ಹೀಯಾಳಿಸಿದ ಆಯನೂರು ಮಂಜುನಾಥ್ ರಿಗೆ ಅಧಿಕೃತ ಅಭ್ಯರ್ಥಿಯೆಂದು ಘೋಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಭ್ಯರ್ಥಿ ಬದಲಾವಣೆಗೆ ಇನ್ನು ಅವಕಾಶವಿದೆ:

ಈ ಬಗ್ಗೆ ಅಧ್ಯಕ್ಷರಿಗೆ ಕೇಳಿದರೆ ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲವೆಂದು ಹೇಳಿರುವುದು ನನಗೆ ಬೇಸರ ತಂದಿದೆ. ಈವರೆಗೂ ಅಧಿಕೃತ ಅಭ್ಯರ್ಥಿ ನನ್ನನ್ನು ಸಂಪರ್ಕಿಸಿಲ್ಲ. ಜಿಲ್ಲಾಧ್ಯಕ್ಷರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸದಂತೆ ಮನವೊಲಿಸಿದರೂ ನಾನು ಒಪ್ಪಲಿಲ್ಲ. ನಾಮಪತ್ರ ವಾಪಸ್‌ ಪಡೆಯಲು ಮೇ 20ರಂದು ಕೊನೆಯ ದಿನವಾಗಿದ್ದು, ಇನ್ನೂ ಅಭ್ಯರ್ಥಿ ಬದಲಾವಣೆಗೆ ಅವಕಾಶವಿದೆ. ಬದಲಾವಣೆ ಪ್ರಯತ್ನಕ್ಕೆ ಈಗಲೂ ನಾನು ಪ್ರಯತ್ನಿಸುತ್ತಿದ್ದೇನೆ. ಒಂದು ವೇಳೆ ಅಧಿಕೃತ ಬದಲಾಯಿಸಿ ಪಕ್ಷನಿಷ್ಠೆ ಇರುವವರೆಗೆ ಬೇರೆ ಯಾರಿಗಾದರೂ ಕೊಟ್ಟಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು, ಆ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಹೈಕಮಾಂಡ್‌ ಮತ್ತೊಮ್ಮೆ ಪರಿಶೀಲಿಸಲಿ:

ಹಲವಾರು ಶಿಕ್ಷಕ ಸಂಘಟನೆಗಳು, ಪದವೀಧರ ಸಂಘಟನೆಗಳು ನನಗೆ ಬೆಂಬಲ ಸೂಚಿಸಿವೆ. ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನನಗೆ ಬೆಂಬಲ ಸೂಚಿಸಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿತ್ತು. ನಾನು ಎರಡು ಬಾರಿ ನಿಂತಾಗಲೂ ಅಲ್ಪ ಮತಗಳ ಅಂತರದಿಂದ ಸೋತಿದ್ದೆ, ಈ ಬಾರಿ 15 ಶಾಸಕರು ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರಿದ್ದಾರೆ. ಅದರಲ್ಲಿ 13 ಶಾಸಕರು ಮತ್ತು ಮಾಜಿ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ನನಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ನನಗೆ ಟಿಕೆಟ್‌ ಸಿಗದೇ ಇರುವುದಕ್ಕೆ ಅವರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಹಾರುವ ಅವಕಾಶವಾದಿ ರಾಜಕಾರಣಿಗೆ ಟಿಕೆಟ್‌ ನೀಡಿದರೆ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗುತ್ತದೆ. ಆದ್ದರಿಂದ ಪಕ್ಷದ ಹೈಕಮಾಂಡ್ ಮತ್ತೊಮ್ಮೆ ಪರಿಶೀಲನೆ ಮಾಡಿ ನನಗೆ ಅವಕಾಶ ನೀಡಬೇಕು. ಇಲ್ಲವಾದರೆ ಮೇ 15ರಂದು ಮೈಸೂರಿನಲ್ಲಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಬಾರಗಿ, ವಿನೋದ್ ಚಂದ್ ಪೀಠರ್, ಸದಾಶಿವ, ಈಶ್ವರ್, ರುದ್ರೇಶ್ ಮತ್ತಿತರರಿದ್ದರು.ದಿನೇಶ್ ರಿಗೆ ಪೂರ್ಣ ಬೆಂಬಲ

ಎಸ್.ಪಿ.ದಿನೇಶ್ ಅವರು ನಮ್ಮ ಸಂಘದ ಕಾನೂನು ಸಲಹೆಗಾರರಾಗಿದ್ದು, ಅಲ್ಲದೆ ಸಂಘದ ಹೋರಾಟದಲ್ಲಿ ನಿರಂತರವಾಗಿ ಮಾರ್ಗದರ್ಶನ ನೀಡುತ್ತ ಅತಿಥಿ ಉಪನ್ಯಾಸಕರಿಗೆ ಸಿಗುತ್ತಿದ್ದ 18 ಸಾವಿರ ರು. ವೇತನವನ್ನು ಸರ್ಕಾರದೊಂದಿಗೆ ಮಾತುಕತೆ ನಡೆಸಿ ಈಗ ಸುಮಾರು 40 ಸಾವಿರ ರು. ವೇತನ ಸಿಗುವಂತೆ ಮಾಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಎಸ್.ಪಿ.ದಿನೇಶ್ ರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ.

ಡಾ.ಹನುಮಂತಪ್ಪಆರ್.ಕಲ್ಮನಿ,

ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ