ಸ.ಪ. ಗಾಂವಕರ್ ಕಾರ್ಯ ಮಾದರಿ: ಹೊರಟ್ಟಿ

| Published : Jun 17 2024, 01:47 AM IST

ಸಾರಾಂಶ

ಕೆಲವರು ತಮ್ಮ ಸಾಧನೆಯ ಮೂಲಕ ಸಾವಿನ ನಂತರವೂ ಸದಾ ಜೀವಂತವಾಗಿ ಇರುತ್ತಾರೆ, ಸ್ಮರಣೀಯರಾಗುತ್ತಾರೆ. ಇಂಥವರ ಸಾಲಿಗೆ ಸ.ಪ ಗಾಂವಕರ್ ಅವರು ನಿಲ್ಲುತ್ತಾರೆ.

ಅಂಕೋಲಾ: ಕನ್ನಡ ಭಾಷೆ ಸಂವರ್ಧನೆ ಮತ್ತು ಶಿಕ್ಷಣ ಪ್ರಸರಣಕ್ಕಾಗಿ ಅವಿರತ ಶ್ರಮಿಸಿದ್ದ ಸ.ಪ. ಗಾಂವಕರ್ ಅವರ ಕಾರ್ಯ ಯುವ ಪೀಳಿಗೆಗೆ ಸದಾ ಪ್ರೇರಣೆಯಾಗಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.ಭಾನುವಾರ ಸಂಜೆ ನಾಡವರ ಸಭಾಭವನದಲ್ಲಿ ಅಂಕೋಲೆಯ ಕರ್ನಾಟಕ ಸಂಘ ಮತ್ತು ದೀನಬಂಧು ಸ.ಪ. ಗಾಂವಕರ ದತ್ತಿ ನಿಧಿ ಸಮಿತಿ ಏರ್ಪಡಿಸಿದ್ದ ಸಮಾರಂಭದಲ್ಲಿ ದತ್ತಿನಿಧಿ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕೆಲವರು ತಮ್ಮ ಸಾಧನೆಯ ಮೂಲಕ ಸಾವಿನ ನಂತರವೂ ಸದಾ ಜೀವಂತವಾಗಿ ಇರುತ್ತಾರೆ, ಸ್ಮರಣೀಯರಾಗುತ್ತಾರೆ. ಇಂಥವರ ಸಾಲಿಗೆ ಸ.ಪ ಗಾಂವಕರ್ ಅವರು ನಿಲ್ಲುತ್ತಾರೆ. ಅಂದಿನ ಕಾಲದಲ್ಲಿ ಬಡಮಕ್ಕಳಿಗೆ ವಿದ್ಯೆ ಸಿಗಬೇಕೆಂಬ ಹಂಬಲ ತೊಟ್ಟು ನೆರವು ನೀಡಿದ ಇವರ ಕಾರ್ಯ ನಿಜಕ್ಕೂ ಮಾದರಿ. ಇಂಥವರ ಹೆಸರಲ್ಲಿ ದತ್ತಿ ನಿಧಿ ಸ್ಥಾಪಿಸಿ ಪ್ರಶಸ್ತಿ, ಬಡ ಮಕ್ಕಳಿಗೆ ಸಹಾಯ ಸಲ್ಲಿಸುತ್ತಿರುವುದು ಆದರ್ಶ ಕಾರ್ಯ. ಇದು ನಿರಂತರ ಮುಂದುವರಿಯಲಿ ಎಂದರು. ಇದೇ ಅವರು ತಮ್ಮ ಅವ್ವ ಟ್ರಸ್ಟ್ ಮೂಲಕ ದತ್ತಿನಿಧಿಗೆ ₹1೦ ಸಾವಿರ ದೇಣಿಗೆ ನೀಡಿದರು.

ಸ.ಪ. ಗಾಂವಕರ್ ಅವರ ಮೊಮ್ಮಗ, ನ್ಯಾಯವಾದಿ ಪ್ರದೀಪ ಕೃಷ್ಣದೇವ ಗಾಂವಕರ್ ಮಾತನಾಡಿ, ಸಮಾಜಕ್ಕೆ ಅಜ್ಜ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರಲ್ಲದೇ ಇಂದು ತಾವು ಈ ಸ್ಥಾನದಲ್ಲಿರಲು ಅವರ ಬದುಕೇ ಪ್ರೇರಣೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದೀನಬಂಧು ಸ.ಪ. ಗಾಂವಕರ ದತ್ತಿ ನಿಧಿ ಸಮಿತಿ ಗೌರವಾಧ್ಯಕ್ಷ, ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚ್ಕಡ ಮಾತನಾಡಿ, ಸ.ಪ. ಗಾಂವಕರ್ ಅವರು ಸಮಾಜಕ್ಕೆ ನೀಡಿದ ಅನನ್ಯ ಕೊಡುಗೆ ನಿತ್ಯ ನಿರಂತರವಾಗಿ ನೆನಪಿನಲ್ಲಿ ಇಡಲು ದತ್ತಿ ನಿಧಿ ಸ್ಥಾಪಿಸುವ ಕನಸು ಸಾಕಾರವಾಯಿತು ಎಂದರು.

ಪ್ರಥಮ ವರ್ಷದ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎನ್. ಆರ್. ನಾಯಕ ಅವರು, ಸ.ಪ. ಗಾಂವಕರ್ ಅವರು ಈ ದೇಶದ ದೀಪಸ್ತಂಭವಾಗಿದ್ದ ಅವರ ಹೆಸರಿನ ಪ್ರಶಸ್ತಿಯನ್ನು ನೀಡಿ ತನ್ನ ಘನತೆ ಹೆಚ್ಚಿಸಿದ್ದೀರಿ ಎಂದರು.

ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ದತ್ತಿ ನಿಧಿ ಸಮಿತಿ ಅಧ್ಯಕ್ಷ ಕೆ.ವಿ. ನಾಯಕ, ದತ್ತಿ ನಿಧಿ ಸ್ಥಾಪನೆಯ ಹಿಂದಿನ ಉದ್ದೇಶ ವಿವರಿಸಿದರು. ಸುಖದ ನಾಯಕ ಪ್ರಾರ್ಥಿಸಿದರು. ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಬಂಟ್, ಅಧ್ಯಕ್ಷ ವಿಠ್ಠಲದಾಸ ಕಾಮತ್ ಪರಿಚಯಿಸಿದರು. ಶಾಂತಾರಾಮ ನಾಯಕ ಬರೆದ ಸ.ಪ. ಗಾಂವಕರ್ ಕುರಿತಾದ ಹಾಡನ್ನು ಜಿ.ಆರ್. ನಾಯಕ ಹಾಡಿದರು. ಪ್ರಶಸ್ತಿ ಪತ್ರವನ್ನು ಖಜಾಂಚಿ ಎಸ್.ಆರ್. ನಾಯಕ, ಪ್ರತಿಭಾ ಪುರಸ್ಕೃತರ ಯಾದಿಯನ್ನು ಸದಸ್ಯ ಪ್ರವೀರ ನಾಯಕ ಓದಿದರು. ಉಪಾಧ್ಯಕ್ಷೆ ಹೊನ್ನಮ್ಮ ನಾಯಕ, ಸದಸ್ಯರಾದ ರವೀಂದ್ರ ಕೇಣಿ, ವಿನಾಯಕ ಹೆಗಡೆ ನೆನಪಿನ ಕಾಣಿಕೆ ಸಲ್ಲಿಸಿದರು. ಕಾರ್ಯದರ್ಶಿ ಮಹೇಶ ನಾಯಕ ವಂದಿಸಿದರು. ಸಹಕಾರ್ಯದರ್ಶಿ ರಾಜೇಶ ನಾಯಕ ಕಾರ್ಯಕ್ರಮ ನಿರ್ವಹಿಸಿದರು.

ದತ್ತಿನಿಧಿ ಪ್ರಶಸ್ತಿ ಪ್ರದಾನಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ಸ.ಪ. ಗಾಂವಕರ್ ದತ್ತಿನಿಧಿ ಪ್ರಶಸ್ತಿಯನ್ನು ಜನಪದ ಸಾಹಿತಿ ಡಾ. ಎನ್.ಆರ್. ನಾಯಕ ಅವರಿಗೆ ಪ್ರದಾನ ಮಾಡಲಾಯಿತು. ಪತ್ನಿ ಶಾಂತಿ ನಾಯಕ ಉಪಸ್ಥಿತರಿದ್ದರು.2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಅನುಪಮಾ ಈಶ್ವರ ಗೌಡ, ದ್ವಿತೀಯ ಸ್ಥಾನ ಗಳಿಸಿದ ಕವನ ಶಂಕರ ಗೌಡ ಮತ್ತು ಸರಿತಾ ಎಸ್. ಗೌಡ, ವಾಣಿಜ್ಯ ವಿಭಾಗದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಸಂಭ್ರತಾ ರಾಯ್ಕರ್ ಮತ್ತು ಅಕ್ಷತಾ ಶೇಟರಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ, ದ್ವಿತೀಯ ಬಂದಿರುವ ಮಾನ್ಯ ಮಂಜುನಾಥ ನಾಯ್ಕ ಮತ್ತು ಶ್ರೇಯಾ ನಾಯ್ಕರಿಗೆ ಪುರಸ್ಕಾರ ನೀಡಲಾಯಿತು.