ಎಸ್.ಆರ್. ಪಾಟೀಲರ ಸಮಾಜಮುಖಿ ಕಾರ್ಯ ಶ್ಲಾಘನೀಯ: ಸಚಿವ ಕೆ. ಎಚ್. ಮುನಿಯಪ್ಪ

| Published : Jul 27 2025, 01:59 AM IST

ಎಸ್.ಆರ್. ಪಾಟೀಲರ ಸಮಾಜಮುಖಿ ಕಾರ್ಯ ಶ್ಲಾಘನೀಯ: ಸಚಿವ ಕೆ. ಎಚ್. ಮುನಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಆಡು ಮುಟ್ಟದ ತಪ್ಪಲು ಇಲ್ಲ, ಎಸ್. ಆರ್. ಪಾಟೀಲರು ಮಾಡದ ಸಮಾಜಮುಖಿ, ಜನಮುಖಿ ಕಾರ್ಯಗಳಿಲ್ಲವೆಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಆಡು ಮುಟ್ಟದ ತಪ್ಪಲು ಇಲ್ಲ, ಎಸ್. ಆರ್. ಪಾಟೀಲರು ಮಾಡದ ಸಮಾಜಮುಖಿ, ಜನಮುಖಿ ಕಾರ್ಯಗಳಿಲ್ಲವೆಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ. ಎಚ್. ಮುನಿಯಪ್ಪ ಬಣ್ಣಿಸಿದರು.

ತಾಲೂಕಿನ ಬಾಡಗಂಡಿಯ ಎಸ್. ಆರ್. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಾಡಗಂಡಿ ಗ್ರಾಮದ ಎಸ್. ಆರ್. ಪಾಟೀಲ ಸಮೂಹ ಸಂಸ್ಥೆಗಳ ಅಡಿಯಲ್ಲಿ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿಯಮಿತದ ರಜತ ಮಹೋತ್ಸವದ ಅಂಗವಾಗಿ ಶನಿವಾರ ಬ್ಯಾಂಕಿನ ನವೀಕೃತ ಕಟ್ಟಡ, ಶಾಖಾ ನೂತನ ಕಟ್ಟಡ ಮತ್ತು ಎಸ್. ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಆರ್ಥಿಕ, ಶೈಕ್ಷಣಿಕ, ಉದ್ಯಮ, ಆರೋಗ್ಯ ಹೀಗೆ ವಿವಿಧ ರಂಗಗಳಲ್ಲಿ ಸಂಘ ಸಂಸ್ಥೆಗಳ ಕಟ್ಟಿ ಬೆಳೆಸುತ್ತಿದ್ದಾರೆ. ತಮಗೆ ಜನ್ಮನೀಡಿದ ತವರು ನೆಲದಲ್ಲಿ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆಗಳು, ಸಕ್ಕರೆ ಕಾರ್ಖಾನೆ ಕಟ್ಟಿ ಜನ್ಮವನ್ನು ಸಾರ್ಥಪಡಿಸಿಕೊಂಡಿದ್ದಾರೆ ಎಂದು ಹೇಳಿದರು.

ರೈತರು ಸಹಕರಿಸಿದ ಯುಕೆಪಿ ಪೂರ್ಣ:

ಸಚಿವ ಸಂಪುಟದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಒಗ್ಗಟ್ಟಿನಿಂದ ಸಚಿವರು ಒತ್ತಾಯಿಸಿದಾಗ, ಸಿಎಂ, ಡಿಸಿಎಂ ಅವರು ಯುಕೆಪಿ ಯೋಜನೆಯನ್ನು ಗಂಭೀರವಾಗಿ ತೆಗೆದುಕೊಂಡು ಕನ್ಸಲ್ಟ್ ಅವಾರ್ಡ ಮಾಡಲು ರೈತರನ್ನು ಒಪ್ಪಿಸುವಂತೆ ಸಚಿವರಿಗೆ ಸೂಚಿಸಿದ್ದು, ಕನ್ಸಲ್ಟ್ ಆವಾರ್ಡ ಮಾಡಲು ರೈತರು ಸಹಕಾರ ನೀಡಿದರೆ ಯೋಜನೆ ಬೇಗ ಪೂರ್ಣಗೊಳ್ಳುತ್ತದೆ. ಇದರಿಂದ ಬಯಲು ಸೀಮೆಗೆ ನೀರು ಕೊಡಲು ಅನುಕೂಲವಾಗುತ್ತದೆ ಎಂದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಕೃಷಿ ಮಾರುಕಟ್ಟೆ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ ಮಾತನಾಡಿ, ಸರ್ಕಾರ ಮಾಡದೇ ಇರುವ ಕೆಲಸವನ್ನು ಎಸ್. ಆರ್. ಪಾಟೀಲರು ಮಾಡಿದ್ದಾರೆ. ಹುಟ್ಟೂರಿನ ಋಣ ತೀರಿಸುವುದಷ್ಟೇ ಅಲ್ಲ, ದೇಶದಾದ್ಯಂತ ಆಗಮಿಸಿ ಎಂಬಿಬಿಎಸ್ ಓದುವಂತೆ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಿರುವರು ಎಂದು ಶ್ಲಾಘಿಸಿದರು.

ಮಾಜಿ ಸಚಿವ ಎಸ್. ಆರ್. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ನಡೆದಾಡುವ ದೇವರೆಂದೇ ಖ್ಯಾತಿ ಹೊಂದಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತ ಹಸ್ತದಿಂದ 1997ರಲ್ಲಿ ಶುರುವಾದ ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಸ್ತುತ ರಜತ ಮಹೋತ್ಸವ ಆಚರಿಸುವ ಮಟ್ಟಕ್ಕೆ ಬೆಳೆದಿರುವುದು ಪೂಜ್ಯರ ಶುಭಾರ್ಶೀವಾದ ಕಾರಣವಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ ಗದಗ ತೋಂಟದಾರ್ಯ ಸಂಸ್ಥಾನ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ ಜಾಜಿ ಮಲ್ಲಿಗೆ ಕವಿ ಸತ್ಯಾನಂದ ಪಾತ್ರೋಟ ಸಂಪಾದಿಸಿದ ಪರಿಶ್ರಮ ನೆನಪಿನ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಎಸ್. ಆರ್. ಪಾಟೀಲರ ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳ ವಿಸ್ತಾರ ನಳಂದಾ ವಿಶ್ವವಿದ್ಯಾಲಯವನ್ನು ನೆನಪಿಗೆ ತರುತ್ತದೆ. ಈ ಭಾಗದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಕಾರ್ಯವಿದಾಗಿದೆ ಎಂದರು.

ಸಂಸದ ಪಿ. ಸಿ. ಗದ್ದಿಗೌಡರ, ಶಾಸಕ ಬಿ. ಬಿ. ಚಿಮ್ಮನಕಟ್ಟಿ ಮಾತನಾಡಿದರು.ಸಚಿವ ಕೆ.ಎಚ್. ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಎಸ್. ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ನಿಕಟಪೂರ್ವ ಕಾರ್ಯದರ್ಶಿ ಎಸ್. ಎಸ್. ಹಳ್ಳೂರ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಎಲ್. ಬಿ. ಕುರ್ತಕೋಟಿ, ಎಸ್. ಆರ್. ಪಾಟೀಲ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಎಂ. ಎನ್. ಪಾಟೀಲ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಎಸ್. ಆರ್. ಮೇಲ್ನಾಡ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಿ. ಎಸ್. ಬನ್ನಟ್ಟಿ, ಮುಖಂಡ ಎಸ್. ಟಿ. ಪಾಟೀಲ, ಸಾಹಿತಿ ಸತ್ಯಾನಂದ ಪಾತ್ರೋಟ, ನಿರ್ದೇಶಕ ಮಂಡಳಿ ಸದಸ್ಯರು ಮತ್ತಿತರಿದ್ದರು. ರೇಖಾ ನಾಯ್ಕರ, ಗೌರಮ್ಮ ಕೆಂಗಲಗುತ್ತಿ ನಿರೂಪಿಸಿದರು. ಎಂ. ಎನ್. ಪಾಟೀಲ ಸ್ವಾಗತಿಸಿದರು. ಜಿ. ಎಸ್. ಬನ್ನಟ್ಟಿ ವಂದಿಸಿದರು.