ಸಾರಾಂಶ
ಮಂಗಳೂರು: ಕೇರಳದ ಶಬರಿಮಲೆ ದೇವಸ್ಥಾನದ ದ್ವಾರಪಾಲಕರ ವಿಗ್ರಹ ಕವಚದ ಚಿನ್ನ ಕಳ್ಳತನದ ವಿರುದ್ಧ ದ.ಕ. ಜಿಲ್ಲಾ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಮಂಗಳೂರಿನಲ್ಲಿ ಮಿನಿ ವಿಧಾನ ಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿತು. ಕೇರಳ ಮತ್ತು ಇತರ ರಾಜ್ಯಗಳ ದೇವಾಲಯವನ್ನು ರಕ್ಷಿಸಲು ಕೇಂದ್ರ ದೇವಸ್ವಂ ಮಂಡಳಿಯನ್ನು ರಚಿಸಲು ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಮಸೂದೆಯನ್ನು ತರುವಂತೆ ಸಾಸ್ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು. ಕಮ್ಯುನಿಸ್ಟ್ ಸರ್ಕಾರ ಮತ್ತು ಅದರ ದೇವಸ್ವಂ ಮಂಡಳಿಯಿಂದ ಶಬರಿಮಲೆ ಮತ್ತು ಇತರ ದೇವಾಲಯಗಳಲ್ಲಿ ನಡೆದ ಚಿನ್ನದ ಕಳ್ಳತನವನ್ನು ಸಿಬಿಐ ತನಿಖೆ ಮಾಡುವಂತೆ ಸಾಸ್ ವತಿಯಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು. ರಾಷ್ಟ್ರಪತಿಗಳು ಅಕ್ಟೋಬರ್ 22 ರಂದು ಶಬರಿಮಲೆಗೆ ಬರುತ್ತಿದ್ದಾರೆ, ಅವರು ಈ ವಿಷಯವನ್ನು ಪರಿಶೀಲಿಸುತ್ತಾರೆ, ಇದನ್ನು ಕೇಂದ್ರ ಸರ್ಕಾರದ ಮುಂದೆ ತರುತ್ತಾರೆ ಎಂದು ಆಶಿಸುತ್ತೇವೆ ಎಂದರು. ಜಿಲ್ಲಾ ಸಾಸ್ ಅಧ್ಯಕ್ಷ ಗಣೇಶ್ ಪೊದುವಾಲ್, ಸಾಸ್ ಜಿಲ್ಲಾ ಉಪಾಧ್ಯಕ್ಷೆ ಕಾತ್ಯಾಯನಿ ರಾವ್, ಕಾರ್ಯದರ್ಶಿ ಶರತ್ ಕೆಂಬಾರ್, ಖಜಾಂಚಿ ಆನಂದ್ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಸಂಚಾಲಕ ಶಿವಾನಂದ ಮೆಂಡನ್ ಮಾತನಾಡಿದರು. ಗುರುಸ್ವಾಮಿಗಳಾದ ಮೋಹನ್ ಪಡೀಲ್, ಮೋಹನ್ ಬರ್ಕೆ, ಮಾಧವ್ ಪುತ್ತೂರು, ಸಾಸ್ ಪ್ರಮುಖರಾದ ಅಶೋಕ್ ಉಚ್ಚಿಲ್, ಪುರುಷೋತ್ತಮ ಕಲ್ಲಾಪು, ಹಲವು ಅಯ್ಯಪ್ಪ ಭಕ್ತರು ಭಾಗವಹಿಸಿದ್ದರು.