ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿನ ಬಹು ಕೋಟಿ ರು.ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಕರ್ನಾಟಕ ಸೇರಿ ಮೂರು ರಾಜ್ಯಗಳ 21 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಬೆಂಗಳೂರು/ನವದೆಹಲಿ

ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿನ ಬಹು ಕೋಟಿ ರು.ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಕರ್ನಾಟಕ ಸೇರಿ ಮೂರು ರಾಜ್ಯಗಳ 21 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲೂ ಇ.ಡಿ.ಗಳ ದಾಳಿ ನಡೆದಿದೆ. ಕರ್ನಾಟಕದಲ್ಲಿ ಪ್ರಕರಣದ ಪ್ರಮುಖ ಆರೋಪಿ ಪೊಟ್ಟಿ ಉನ್ನಿಕೃಷ್ಣನ್‌ ಅವರ ಬೆಂಗಳೂರಿನಲ್ಲಿರುವ ಶ್ರೀರಾಂಪುರದಲ್ಲಿರುವ ಮನೆ, ಆಭರಣಕಾರ ಗೋವರ್ಧನ್ ಎಂಬುವವರ ಬಳ್ಳಾರಿ ಮನೆ, ಚಿನ್ನಾಭರಣ ಮಳಿಗೆಯಾದ ರೊದ್ದಂ ಜ್ಯುವೆಲರ್ಸ್‌ ಮೇಲೂ ದಾಳಿ ನಡೆದಿದೆ. ಸುಮಾರು 10 ಮಂದಿ ಅಧಿಕಾರಿಗಳ ತಂಡ ದಾಖಲೆಗಳು ಮತ್ತು ಹಣಕಾಸು ವ್ಯವಹಾರಗಳ ಶೋಧ ಕಾರ್ಯ ನಡೆಸಿದೆ.

ಇನ್ನು ಕೇರಳದಲ್ಲಿ ತಿರುವನಂತಪುರದ ಪುಳಿಮುಟ್ಟುನಲ್ಲಿರುವ ಉನ್ನಿಕೃಷ್ಣನ್‌ ಪೊಟ್ಟಿ ಮನೆ, ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ) ಮುಖ್ಯ ಕಚೇರಿ, ಟಿಡಿಬಿ ಮಾಜಿ ಅಧ್ಯಕ್ಷ ಎ.ಪದ್ಮಕುಮಾರ್‌ ಅವರ ಮನೆ, ಪೆಟ್ಟಾದಲ್ಲಿರುವ ಮಾಜಿ ಟಿಡಿಬಿ ಆಯುಕ್ತ, ಅಧ್ಯಕ್ಷ ಎನ್.ವಾಸು ಅವರ ಮನೆ ಸೇರಿ ಹಲವು ಅಧಿಕಾರಿಗಳು, ತಮಿಳುನಾಡಿನ ಚೆನ್ನೈನಲ್ಲಿರುವ ಸ್ಮಾರ್ಟ್‌ ಕ್ರಿಯೇಷನ್ಸ್‌ನ ಪಂಕಜ್‌ ಭಂಡಾರಿ ಅವರ ಮನೆಗಳ ಮೇಲೂ ದಾಳಿ ನಡೆಸಿ, ಮಾಹಿತಿ ಕಲೆಹಾಕಲಾಗಿದೆ. ಒಟ್ಟು 100ಕ್ಕೂ ಹೆಚ್ಚು ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.

2019ರಲ್ಲಿ ನಡೆದಿದ್ದ ಈ ಕಳವು ಪ್ರಕರಣಕ್ಕೆ ಸಂಬಂಧಿಸಿ ಇ.ಡಿ.ಯು ಜ.9ರಂದು ಅಕ್ರಮ ಹಣ ವರ್ಗಾವಣೆ ಕೇಸು ದಾಖಲಿಸಿತ್ತು. ಈ ಪ್ರಕರಣವನ್ನು ಕೇರಳ ಹೈಕೋರ್ಟ್‌ ಮೇಲುಸ್ತುವಾರಿಯಲ್ಲಿ ಎಸ್‌ಐಟಿ ತನಿಖೆ ನಡೆಸುತ್ತಿದೆ.

2019ರಿಂದ 2025ರ ಅವಧಿಯಲ್ಲಿ ದುರಸ್ತಿ ಹೆಸರಿನಲ್ಲಿ ದ್ವಾರಪಾಲಕ ಮೂರ್ತಿಗಳು ಹಾಗೂ ಗರ್ಭಗುಡಿ ಬಾಗಿಲಿನ ಚೌಕಟ್ಟಿಗೆ ಹಾಕಿದ್ದ ಹೊದಿಕೆಯ ಚಿನ್ನವನ್ನು ಕಳವು ಮಾಡಲಾಗಿತ್ತು. ಆರೋಪಿಗಳು ಚೆನ್ನೈ ಮತ್ತು ಕರ್ನಾಟಕದಲ್ಲಿ ರಾಸಾಯನಿಕ ಬಳಸಿ ಚಿನ್ನ ಕರಗಿಸಿದ್ದಾರೆ. ಬಳ್ಳಾರಿಯ ಜುವೆಲ್ಲರ್‌ ಗೋವರ್ಧನ್‌ಗೆ ಕದ್ದ ಚಿನ್ನದಲ್ಲಿ 475 ಗ್ರಾಂ ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪೊಟ್ಟಿ ಉನ್ನಿಕೃಷ್ಣನ್ 2019ರ ತನಕ ಶಬರಿಮಲೆಯಲ್ಲಿ ವಿಐಪಿ ಭಕ್ತರಿಗೆ ದೇವರ ದರ್ಶನ ವ್ಯವಸ್ಥೆ ಮಾಡುವ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ.