ಲೋಕಾಪುರದಲ್ಲಿ ತ್ಯಾಗ, ಬಲಿದಾನ ಹಬ್ಬ ಬಕ್ರೀದ್‌ ಆಚರಣೆ

| Published : Jun 18 2024, 12:48 AM IST

ಸಾರಾಂಶ

ಲೋಕಾಪುರ ಪಟ್ಟಣದಲ್ಲಿ ಸೋಮವಾರ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಸಮಾಜದವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸೋಮವಾರ ಪಟ್ಟಣದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಸಮಾಜದವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಇದಕ್ಕೂ ಮುನ್ನ ಬೆಳಗ್ಗೆ ೮ಕ್ಕೆ ಪಟ್ಟಣದ ಮಧ್ಯ ಭಾಗದಲ್ಲಿರುವ ಜಾಮಿಯಾ ಮಸ್ಜೀದ್‌ನಿಂದ ಮೇನ್‌ ಬಜಾರ್‌ ಬಸವೇಶ್ವರ ವೃತ್ತ, ಬಾಗಲಕೋಟೆ ರಸ್ತೆ ಮಾರ್ಗವಾಗಿ ಅಲ್ಲಾಹು ಅಕ್ಬರ್‌ ಘೋಷಣೆಯೊಂದಿಗೆ ಮುಸ್ಲಿಂ ಸಮಾಜದವರು ಬೃಹತ್ ಮೆರವಣಿಗೆ ಮೂಲಕ ಹೊರ ವಲಯದ ಈದ್ಗಾ ಮೈದಾನಕ್ಕೆ ತಲುಪಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೌಲಾನಾ ಅಬೀಲ್ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

ನಂತರ ಅಂಜುಮನ್-ಏ-ಇಸ್ಲಾಂ ಕಮಿಟಿ ಅಧ್ಯಕ್ಷ ಅಲ್ಲಾಸಾಬ ಯಾದವಾಡ ಮಾತನಾಡಿ, ಬಕ್ರೀದ್‌ ಹಬ್ಬ ಇಸ್ಲಾಂನ ರೋಚಕ ಇತಿಹಾಸ ಸ್ಮರಿಸುವ ಹಬ್ಬವಾಗಿದೆ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆ ಹುಟ್ಟಿದ ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನಗಳ ನೆನಪಿನಲ್ಲಿ ಬಕ್ರೀದ್ ಹಬ್ಬ ಆಚರಿಸಲಾಗುತ್ತಿದೆ, ಅಲ್ಲಾಹನು ಜಗತ್ತಿನಲ್ಲಿರುವ ಮಾನವ ಕುಲಕ್ಕೆ ಸುಖ, ಶಾಂತಿ, ನೆಮ್ಮದಿ ದಯಪಾಲಿಸಲಿ, ಪ್ರತಿಯೊಬ್ಬ ಮುಸ್ಲಿಮರು ನಮ್ಮ ಧರ್ಮ ಆಚರಣೆ ಜೊತೆಗೆ ಬೇರೆ ಧರ್ಮ ಪ್ರೀತಿಯಿಂದ ಗೌರವಿಸಬೇಕು. ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆ, ಸಹೋದರತ್ವದಿಂದ ಸಮಾಜದಲ್ಲಿ ಜೀವನ ನಡೆಸಬೇಕೆಂದು ಕರೆ ನೀಡಿದರು.

ಮಳೆಗಾಗಿ ವಿಶೇಷ ಪ್ರಾರ್ಥನೆ: ಅಲ್ಲಾಹನ ಪ್ರಾರ್ಥನೆ ಸಲ್ಲಿಸಿ ಎಲ್ಲಡೆ ಮಳೆ ಬೆಳೆ ಸರಿಯಾಗಿ ಬರಲಿ, ಜನರಲ್ಲಿ ಭಾತೃತ್ವ ಭಾವನೆ ಬೆಳೆಯಲಿ ಎಂದು ಅಲ್ಲಾಹನ ಹತ್ತಿರ ಮೊರೆ ಇಟ್ಟು ಪ್ರಾರ್ಥಿಸಿದರು.

ಪ್ರಾರ್ಥನೆ ಮುಗಿದ ಬಳಿಕ ಮುಸ್ಲಿಂ ಸಮಾಜದವರು ಪರಸ್ಪರ ಹಸ್ತ ಲಾಘವ ಮಾಡಿ ಸಂಭ್ರಮದಿಂದ ಬಕ್ರೀದ್ ಆಚರಿಸಿದರು. ಮಕ್ಕಳು ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು. ಪಟ್ಟಣದ ಎಲ್ಲ ಸಮಾಜದ ಮುಖಂಡರು ಮುಸ್ಲಿಂ ದರ್ಮೀಯರಿಗೆ ಬಕ್ರೀದ್ ಹಬ್ಬದ ಶುಭಾಶಯ ತಿಳಿಸಿದರು.

ಮಾಜಿ ತಾಪಂ ಸದಸ್ಯ ರಫೀಕ್‌ ಭೈರಕದಾರ, ಗುಲಾಬಸಾಬ ಅತ್ತಾರ, ಸೈಯದ್ ಜೀರಗಾಳ, ಮೈದ್ಬ್‌ ರಾಮದುರ್ಗ, ರಮ್ಜಾನ್‌ ನಧಾಪ್‌, ಜಾಕೀರ್‌ ಅತ್ತಾರ, ಕುತುಬುದ್ದೀನ್‌ ಭಾಗವಾನ, ಮೈಬೂಬ ರಾಮದುರ್ಗ, ಸಲೀಂ ಕೊಪ್ಪದ, ಹಸನಡೋಂಗ್ರಿ ಮಹಾಲಿಂಗಪೂರ, ಸೈಯದ್ ಚಿತ್ರಬಾನುಕೊಟಿ, ಹಸನ ಅಳ್ಳಿಗಿಡದ, ಅಬ್ದ್ಲ್‌ ರಜಾಕ ತೊರಗಲ್, ಲಾಲ್‌ಸಾಬ ತೊರಗಲ್ ಲೋಕಾಪುರ ಪಟ್ಟಣ ಹಾಗೂ ಚೌಡಾಪುರ, ಚಿತ್ರಭಾನುಕೋಟಿ, ಭಂಟನೂರ, ವರ್ಚಗಲ್, ಚಿಕ್ಕೂರ, ಸುತ್ತಮುತ್ತಲಿನ ಗ್ರಾಮದ ಮುಸ್ಲಿಂ ಧರ್ಮದವರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.