ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಪ್ರತೀಕ: ಶಾಸಕ ಲಕ್ಷ್ಮಣ ಸವದಿ

| Published : Aug 16 2024, 12:59 AM IST

ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಪ್ರತೀಕ: ಶಾಸಕ ಲಕ್ಷ್ಮಣ ಸವದಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಸ್ವತಂತ್ರವಾಗಲು ಅನೇಕರು ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಮತ್ತು ಬಲಿದಾನ ಪ್ರತೀಕವೇ ಸ್ವಾತಂತ್ರ್ಯ ದಿನಾಚರಣೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ಭಾರತ ಸ್ವತಂತ್ರವಾಗಲು ಅನೇಕರು ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಮತ್ತು ಬಲಿದಾನ ಪ್ರತೀಕವೇ ಸ್ವಾತಂತ್ರ್ಯ ದಿನಾಚರಣೆ. ಈ ಚಳವಳಿಯಲ್ಲಿ ಅಥಣಿ ತಾಲೂಕಿನ ಅನೇಕ ಗ್ರಾಮಗಳ ಕೊಡುಗೆ ಇದೆ ಎಂದು ಮಾಜಿ ಡಿಸಿಎಂ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಭೋಜರಾಜ ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರರಿಗೆ ರಕ್ಷಣೆ ನೀಡುವುದರ ಜೊತೆಗೆ ಅವರ ಅಗತ್ಯವಿರುವ ನಾಡ ಪಿಸ್ತೂಲು ಮತ್ತು ಬಂದೂಕು ತಯಾರಿಸುವ ಘಟಕ ಕೊಟ್ಟಲಗಿ ಗ್ರಾಮದಲ್ಲಿತ್ತು. ಗುಂಡೇವಾಡಿ ಮತ್ತು ತೆಲಸಂಗ ಗ್ರಾಮದಲ್ಲಿನ ಹೋರಾಟಗಾರರನ್ನು ಸ್ಮರಿಸಿ , ಹೋರಾಟಗಾರರಿಗೆ ರಕ್ಷಣೆ ಮತ್ತು ತರಬೇತಿ ನೀಡುವಲ್ಲಿ ಇಂಚಗೇರಿ ಮಠದ ಕಾರ್ಯವನ್ನು ಮರೆಯುವಂತಿಲ್ಲ ಎಂದು ಹೇಳಿದರು.

ಕ್ಷೇತ್ರದ ಜನತೆಗೆ ಶುದ್ಧ ಕುಡಿಯುವ ನೀರು:ಅಥಣಿ ಪಟ್ಟಣಕ್ಕೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಕಾಮಗಾರಿ ಪ್ರಗತಿ ಹಂತದಲ್ಲಿದ್ದು, ಮುಂಬರುವ ದಿನಗಳಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೂ ಕೂಡ ಶುದ್ಧ ಕುಡಿಯುವ ನೀರನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ತಹಸೀಲ್ದಾರ್‌ ದಿನೇಶಕುಮಾರ ಮೀನಾ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು. ಪಟ್ಟಣದ ವಿವಿಧ ಶಾಲೆಗಳ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಜರುಗಿತು. ಆಯ್ದ 10 ತಂಡಗಳ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಪಥಸಂಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಶಾಲಾ ಮಕ್ಕಳಿಗೆ ಡಾಲ್ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ತಾಲೂಕು ಆಡಳಿತದಿಂದ ಗೌರವಿಸಿ ಸನ್ಮಾನಿಸಲಾಯಿತು. ತಾಪಂ ಆಡಳಿತ ಅಧಿಕಾರಿ ಬಸವರಾಜ ಹೆಗ್ಗನಾಯಕ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲ್ದೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಗ್ರೇಡ್ 2 ತಹಸಿಲ್ದಾರ್ ಶ್ರೀಶೈಲ್ ಗುಡಮೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೋರಟಗಿ, ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ, ಅಭಿಯಂತರ ಪ್ರವೀಣ್ ಹುಣಸಿಕಟ್ಟಿ, ಎಸ್.ಎಂ ಮರನೂರ, ಎಂ.ಎಂ. ಮಿರ್ಜಿ, ಎಂ.ಎಂ. ಮಲ್ಲುಖಾನ್‌ ಸೇರಿದಂತೆ ಚುನಾಯಿತ ಪುರಸಭೆ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮೋರಟಗಿ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಹಚಡದ ನಿರೂಪಿಸಿದರು. ಕೃಷಿ ಅಧಿಕಾರಿ ನಿಂಗನಗೌಡ ಬಿರಾದಾರ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಶಾಲಾ ಮಕ್ಕಳಿಗೆ ಶಾಸಕ ಲಕ್ಷ್ಮಣ ಸವದಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಿ ಪ್ರೋತ್ಸಾಹಿಸಿದರು.