ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆ ದೇವಾಲಯದಲ್ಲಿ ಪುನರ್ವಸು ಉತ್ಸವ ಬುಧವಾರ ಸಡಗರ ಸಂಭ್ರಮದಿಂದ ನೆರವೇರಿತು.ಕ್ರಿ.ಶ.1017ರ ಬಹುದಾನ್ಯ ಸಂವತ್ಸರದ ಮಕರ ಶುಕ್ಲಪುನರ್ವಸು ನಕ್ಷತ್ರದಂದು ಸಾವಿರ ಶಿಷ್ಯರೊಂದಿಗೆ ಯದುಗಿರಿಗೆ ಆಗಮಿಸಿದ ಭಗವದ್ ರಾಮಾನುಜರು ಕಾಡಿನ ನಡುವೆ ಇದ್ದ ಹುತ್ತಕಂಡು ಹಿಡಿದು ಕಲ್ಯಾಣಿ ತೀರ್ಥ ಮತ್ತು ಹಾಲಿನಿಂದ ಹುತ್ತಕರಗಿಸಿ ಮೊದಲ ಅಭಿಷೇಕ ಮಾಡಿ ಶ್ರೀಚೆಲುವನಾರಾಯಣನ ದರ್ಶನ ಪಡೆದ ಕಾರಣ ಪುನರ್ವಸು ಉತ್ಸವ ನೆರವೇರುತ್ತಾ ಬಂದಿದೆ.
ವಿದ್ವಾನ್ ಬಿ.ವಿ.ಆನಂದಾಳ್ವಾರ್ ನೇತೃತ್ವದಲ್ಲಿ ಪುನರ್ವಸು ಉತ್ಸವದ ನಿಮಿತ್ತ ಬುಧವಾರ ದೇವಾಲಯದ ಆವರಣವನ್ನು ರಂಗವಲ್ಲಿ, ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ರಾಮಾನುಜಾಚಾರ್ಯರಿಗೆ ವೇದಪಾರಾಯಣ ಮತ್ತು ವಿಶೇಷ ಆರಾಧನೆಯೊಂದಿಗೆ ಅಭಿಷೇಕ ಮಾಡಲಾಯಿತು.ಕಲ್ಯಾಣಿಯಲ್ಲಿ ಉತ್ಸವದೊಂದಿಗೆ ಶ್ರೀರಾಮಾನುಜರಿಗೆ ನಿತ್ಯಪೂಜಾ ಕೈಂಕರ್ಯ ನೆರವೇರಿತು. ಕಲ್ಯಾಣಿಯಿಂದ ಹೊರಟ ಆಚಾರ್ಯರ ಉತ್ಸವ ದಿವ್ಯಪ್ರಬಂಧ ಪಾರಾಯಣ, ವಿಶೇಷ ಮಂಗಳವಾದ್ಯದೊಂದಿಗೆ ಚೆಲುವನಾರಾಯಣಸ್ವಾಮಿ ದೇವಾಲಯ ತಲುಪಿತು.
ಈ ವೇಳೆ ರಾಮಾನುಜರೇ ಸ್ವತಃ ಹಾಡಿದ ದಿವ್ಯ ಮಂತ್ರವನ್ನು ಒಕ್ಕೊರಲಿನಿಂದ ಭಕ್ತಿಯೊಂದಿಗೆ ಪಾರಾಯಣ ಮಾಡಿದರು. ಸಹಸ್ರಾರು ಭಕ್ತರು ಉತ್ಸವದಲ್ಲಿ ಭಾಗಿಯಾಗಿ ಆಚಾರ್ಯರ ದರ್ಶನ ಪಡೆದು ಪುನೀತರಾದರು.ವಂಗೀಪುರಂ ತಿರುಮಾಳಿಗೆಯಲ್ಲಿ ರಾಮಾನುಜರಿಗೆ ಸಮರ್ಪಿಸಲು ನೂರಾರು ತಟ್ಟೆಗಳಲ್ಲಿ ಸೇಬು, ಸೀಬೆ, ದಾಳಿಂಬೆ, ಪರಂಗಿ, ಚಕೋತ, ದ್ರಾಕ್ಷಿ, ಮಾವು, ಖರ್ಜೂರ, ಕಲ್ಲುಸಕ್ಕರೆ, ತೆಂಗು, ಕೊಬ್ಬರಿ ಹೀಗೆ ವಿವಿಧ ಬಗೆಯ ಹಣ್ಣುಗಳು ಮತ್ತು ಹೂವುಗಳನ್ನು ಜೋಡಿಸಲಾಗಿತ್ತು.
ಉತ್ಸವ ದೇವಾಲಯ ತಲುಪಿದ ನಂತರ ಆಂಧ್ರ, ತಮಿಳುನಾಡು ಮುಂತಾದ ಕಡೆಗಳಿಂದ ಆಗಮಿಸಿದ್ದ ನೂರಾರು ಭಕ್ತರೊಂದಿಗೆ ಇಳೆಯಾಳ್ವಾರ್ ಸ್ವಾಮೀಜಿ ದಂಪತಿಗಳು, ವಿದ್ವಾನ್‌ರಾಮಪ್ರಿಯ ಭಾ.ವಂ ಪಾರ್ಥಸಾರಥಿ, ಭಾ.ವಂ ಯಾಮುನಾಚಾರ್ಯ, ಛತ್ರಿ, ಚಾಮರ, ಮಂಗಳವಾದ್ಯದೊಂದಿಗೆ ದೇವಾಲಯದ ಸುತ್ತ ಭವ್ಯ ಮೆರವಣಿಗೆಯಲ್ಲಿ ತಟ್ಟೆಗಳನ್ನು ಕೊಂಡೊಯ್ದು ಚೆಲುವನಾರಾಯಣ ಸ್ವಾಮಿ ಮತ್ತು ರಾಮಾನುಜಾ ಚಾರ್ಯರಿಗೆ ಸಮರ್ಪಿಸಿದರು.ವಿಶೇಷ ಪೂಜಾ ಕೈಂಕರ್ಯ ಮತ್ತು ನಿವೇದನ ನಡೆದ ನಂತರ ಹಣ್ಣುಗಳಿಂದ ಮಾಡಿದ ಪಂಚಾಮೃತ ಮತ್ತು ಕಂದಂಬ ಸಕ್ಕರೆ ಪೊಂಗಲ್, ದದಿಯೋದನ ಪ್ರಸಾದಗಳನ್ನು ನೆರೆದಿದ್ದ ಸಹಸ್ರಾರು ಭಕ್ತರಿಗೆ ವಿತರಣೆ ಮಾಡಲಾಯಿತು.