ಸಾರಾಂಶ
ಕ್ರಿಸ್‌ಮಸ್ ಪ್ರಯುಕ್ತ ಸಂತ ಅಂತೋಣಿ ದೇವಾಲಯದಲ್ಲಿ ಬಲಿಪೂಜೆ ನೆರವೇರಿತು. ಆಕರ್ಷಕ ಗೋದಲಿ ರಚಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಪ್ರಭುಕ್ರಿಸ್ತರು ದನಕೊಟ್ಟಿಗೆಯಲ್ಲಿ ಜನಿಸುವ ಮೂಲಕ ಮಾನವರಲ್ಲಿ ಪರಸ್ಪರ ಅನ್ಯೋನ್ಯತೆ, ಶಾಂತಿ, ಸಹಬಾಳ್ವೆ, ಪ್ರೀತಿಯ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಒಂದು ದಿನಕ್ಕೆ ಜನ್ಮದಿನದ ಆಚರಣೆ ಸಿಮೀತವಾಗದೆ ಕ್ರಿಸ್ತರು ತೋರಿದ ಪ್ರೀತಿ ಸಹನೆಯನ್ನು ಇತರರಿಗೆ ನಾವು ತೋರುವುದರೊಂದಿಗೆ ಬದುಕು ನಡೆಸಬೇಕು ಎಂದು ಇಲ್ಲಿನ ಸಂತ ಅಂತೋಣಿಯವರ ದೇವಾಲಯದ ಧರ್ಮಗುರು ರೆ.ಫಾ. ವಿಜಯಕುಮಾರ್ ಹೇಳಿದರು.ಕ್ರಿಸ್ಮಸ್ ಪ್ರಯುಕ್ತ ಅವರು ಸಂತ ಅಂತೋಣಿ ದೇವಾಲಯದಲ್ಲಿ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದರು. ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪ ಹಾಗೂ ಕ್ರಿಸ್ತ ಜನಿಸಿದಾಗ ಮೂಡಿಬಂದ ತಾರೆಗಳನ್ನು ಅಳವಡಿಸಿ ಸಿಂಗರಿಸಲಾಗಿತ್ತು. ಆಕರ್ಷಕವಾಗಿ ಗೋದಲಿ ರಚಿಸಿ ಅದರಲ್ಲಿ ಕ್ರಿಸ್ತರನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬಕ್ಕೆ ಮುನ್ನುಡಿ ಇಡಲಾಯಿತು.
ಮಂಗಳವಾರ ರಾತ್ರಿ 11 ಗಂಟೆಗೆ ವಿಶೇಷ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಪ್ರಭುಕ್ರಿಸ್ತರ ಪ್ರತಿಮೆಯನ್ನು ಗೊದಲಿಯಲ್ಲಿ ಪ್ರತಿಷ್ಠಾಪಿಸುವ ಮೂಲಕ ವಿಶೇಷ ಗಾಯನ, ದಿವ್ಯ ಬಲಿಪೂಜೆ ನಡೆಯಿತು. ದಿವ್ಯ ಬಲಿಪೂಜೆಯನ್ನು ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ.ವಿಜಯಕುಮಾರ್ ಸಮರ್ಪಿಸಿದರು. ನಂತರ ಕ್ರೈಸ್ತ ಬಂಧುಗಳು ಶುಭಾಶಯ ವಿನಿಮಯ ಮಾಡಿಕೊಂಡರು.ಬುಧವಾರ ಬೆಳಗ್ಗೆ 8.30ಕ್ಕೆ ದೇವಾಲಯದಲ್ಲಿ ವಿಶೇಷ ಅಡಂಬರ ಗಾಯನ ಬಲಿಪೂಜೆ ಹಾಗೂ ಪ್ರಭೋದನೆಯನ್ನು ಸಂತ ಅಂತೋಣಿ ದೇವಾಲಯದ ಧರ್ಮಗುರು ಫಾ.ವಿಜಯಕುಮಾರ್ ಸಲ್ಲಿಸಿದರು. ಸಂತ ಕ್ಲಾರ ಕಾನ್ವೆಂಟ್‌ನ ಕನ್ಯಾಸ್ತ್ರೀಯರು, ಮಕ್ಕಳು, ಯುವಕ, ಯವತಿರು, ಪುರುಷರು ಹಾಗೂ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಸೇರಿ ಪ್ರಭುಕ್ರಿಸ್ತರ ಆಶೀರ್ವಾದ ಪಡೆದ ಒಬ್ಬರಿಗೊಬ್ಬರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ದಿವ್ಯಬಲಿಪೂಜೆಯ ನಂತರ ಯುವಕ ಯುವತಿಯರು ನೃತ್ಯ ಮಾಡಿ ಹಬ್ಬದ ಸಂಭ್ರಮ ಹೆಚ್ಚಿಸಿದರು.