ಕನ್ನಡಪ್ರಭ ವಾರ್ತೆ ಮೈಸೂರುಡಾ. ಸದಾಶಿವ ಅವರ ವಿವೇಕ ಮತ್ತು ಚಿಂತನೆ ಸಾಮಾನ್ಯವಾದುದಲ್ಲ. ದಲಿತ ಚಳವಳಿ ಕುರಿತ ಅವರ ಲೇಖನಗಳು ಹಾಗೂ ಸಂಶೋಧನಾ ಕೃತಿಗಳನ್ನು ರಚಿಸಿರುವ ಅವರು, ಟಿಪ್ಪು ಸುಲ್ತಾನ್ ಕುರಿತು ಕೂಡ ಆಳವಾದ ಅಧ್ಯಯನ ನಡೆಸಿರುವುದಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ.ಡಿ. ಆನಂದ್‌ ತಿಳಿಸಿದರು.ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಕೆ. ಸದಾಶಿವ ಅಭಿನಂದನಾ ಸಮಾರಂಭ ಹಾಗೂ ‘ಸದಾ ಶೋಧ’ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರಾಧ್ಯಾಪಕರು ಕೇವಲ ತರಗತಿಯಲ್ಲಿ ಪಾಠ ಪ್ರವಚನಕಷ್ಟೇ ಬೋಧಕರಾಗದೆ ಸಮಾಜಕ್ಕೆ ಧಿಕ್ಕು ತೋರಿಸುವ ಚಿಂತಕರಾಗಬೇಕು. ಆ ನಿಟ್ಟಿನಲ್ಲಿ ಡಾ.ಕೆ. ಸದಾಶಿವ ಅವರು ತಮ್ಮ ಶೈಕ್ಷಣಿಕ ಜೀವನದುದ್ದಕ್ಕೂ ಸಂಶೋಧನೆ, ಬರವಣಿಗೆ ಮೂಲಕ ವಿಶಿಷ್ಟ ಛಾಪು ಮೂಡಿಸಿದ್ದಾರೆ ಎಂದರು.ಇಂತಹ ಸಾಧನೆ ಒಂದು ದಿನದಲ್ಲಿ ಸಾಧ್ಯವಾಗಿಲ್ಲ. ಅದರ ಹಿಂದೆ ವರ್ಷಗಳ ಕಾಲದ ಶ್ರಮ, ಬದ್ಧತೆ ಮತ್ತು ಅಧ್ಯಯನ ಇದೆ. ಡಾ. ಸದಾಶಿವ ಅವರು ಮಿತಭಾಷಿ, ಸಂಭಾವಿತರು ಮತ್ತು ಅತ್ಯಂತ ಸೌಜನ್ಯಯುತ ವ್ಯಕ್ತಿ. ನಿರಂತರವಾಗಿ ಹಲವಾರು ಪುಸ್ತಕಗಳನ್ನು ರಚಿಸಿರುವುದು ಅವರ ಅಧ್ಯಯನಶೀಲತೆ ಮತ್ತು ವಿವೇಕಕ್ಕೆ ಸಾಕ್ಷಿಯಾಗಿದೆ. ಒಬ್ಬ ಉತ್ತಮ ಪ್ರಾಧ್ಯಾಪಕರಿಗೆ ಇರಬೇಕಾದ ಎಲ್ಲಾ ಗುಣಗಳು ಅವರಲ್ಲಿದೆ ಎಂದು ಅವರು ತಿಳಿಸಿದರು.ಡಾ. ಸದಾಶಿವ ಅವರ ಜೀವನದಲ್ಲಿ ಮೊದಲ ಇನ್ನಿಂಗ್ಸ್‌ ನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ನಿವೃತ್ತಿಯ ನಂತರ ಈಗ ಎರಡನೇ ಇನ್ನಿಂಗ್ಸ್‌ ಆರಂಭವಾಗುತ್ತಿದ್ದು, ಇದರಲ್ಲಿ ಹೆಚ್ಚು ಸಮಯ ಅವರಿಗೆ ಸಿಗಲಿದೆ. ಈ ಸಮಯವನ್ನು ಶೋಷಿತ ಸಮುದಾಯಗಳ, ಅನಕ್ಷರಸ್ಥರ ಮತ್ತು ಶ್ರಮಿಕ ವರ್ಗಗಳ ಇತಿಹಾಸವನ್ನು ದಾಖಲಿಸುವ ಮಹತ್ವದ ಕೆಲಸ ಮುಂದುವರಿಸಬೇಕು ಎಂದು ಅವರು ಆಶಿಸಿದರು.ಶ್ರಮಿಕ ವರ್ಗವನ್ನು ಒಗ್ಗೂಡಿಸುವ, ಸವಾಜಕ್ಕೆ ಪ್ರೇರಣೆ ಆಗುವ ಸಂಶೋಧನೆಗಳು ಮತ್ತು ಕೃತಿಗಳು ನಿವೃತ್ತಿ ಬಳಿಕವೂ ಅವರಿಂದ ಹೊರಬರಲಿ. ಅವರ ಅನುಭವ ಮತ್ತು ಜ್ಞಾನ ಸಮಾಜಕ್ಕೆ ಇನ್ನಷ್ಟು ಉಪಯೋಗವಾಗಲಿ ಎಂದು ಆಶಿಸಿರು.ಮೈಸೂರು ವಿವಿ ಇತಿಹಾಸ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎಂ.ವಿ. ಶ್ರೀನಿವಾಸ ಮಾತನಾಡಿ, ಸದಾಶಿವ ಅವರು ತಮ್ಮ ಶೈಕ್ಷಣಿಕ ಜೀವನವನ್ನು ಇತಿಹಾಸ ಅಧ್ಯಯನಕ್ಕೆ ಸಮರ್ಪಿಸಿಕೊಂಡಿದ್ದಾರೆ. ಪ್ರತಿ ಕ್ಷಣವೂ ಇತಿಹಾಸದೊಂದಿಗೆ ಸಂಪರ್ಕ ಬೆಳೆಸಿ ಜ್ಞಾನದ ಪ್ರಸಾರ ಮಾಡಿರುವುದಾಗಿ ಹೇಳಿದರು.ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಷಡಕ್ಷರಯ್ಯ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಪ್ರೊ. ಕಾವಲಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರೊ.ಕೆ. ಸದಾಶಿವ ಮತ್ತು ಅವರ ಪತ್ನಿ ಡಾ. ಅನಿತಾ ಸದಾಶಿವ ಅವರನ್ನು ಸನ್ಮಾನಿಸಲಾಯಿತು. ಧಾರವಾಡ ಕರ್ನಾಟಕ ವಿವಿಯ ಡಾ. ಬಾಬು ಜಗಜೀವನರಾಂ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಸಿ.ಟಿ. ಶಿವಶರಣ, ಮೈಸೂರು ವಿವಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪೀಠದ ಸಂದರ್ಶಕ ಪ್ರಾಧ್ಯಾಪಕಿ ಪ್ರೊ. ಉಷಾದೇವಿ, ಕುವೆಂಪು ವಿವಿ ಕುಲಸಚಿವ ಪ್ರೊ.ಆರ್. ತಿಮ್ಮರಾಮಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ. ಅಶ್ವತ್ಥ ನಾರಾಯಣ ಹಾಗೂ ಅಸ್ಸಾಂ ಕೇಂದ್ರೀಯ ವಿವಿಯ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎನ್. ಹರ್ಷ ಮೊದಲಾದವರು ಇದ್ದರು.