ಗವಿಸಿದ್ದೇಶ್ವರ ಸೇವಾ ಸಮಿತಿಯಿಂದ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಸದ್ಭಾವನೆ ಮೂಡಿಸುವ ಉದ್ದೇಶದಿಂದ ಕೊಪ್ಪಳ ಗವಿಮಠದಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಪಟ್ಟಣದಲ್ಲಿ 2ನೇ ದಿನದ ಸದ್ಭಾವನಾ ಪಾದಯಾತ್ರೆ ಭಕ್ತಿ-ಭಾವ ಹಾಗೂ ಸಂಭ್ರಮದೊಂದಿಗೆ ಜರುಗಿತು.
ಕನ್ನಡಪ್ರಭ ವಾರ್ತೆ ರೋಣಗವಿಸಿದ್ದೇಶ್ವರ ಸೇವಾ ಸಮಿತಿಯಿಂದ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಸದ್ಭಾವನೆ ಮೂಡಿಸುವ ಉದ್ದೇಶದಿಂದ ಕೊಪ್ಪಳ ಗವಿಮಠದಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ಪಟ್ಟಣದಲ್ಲಿ 2ನೇ ದಿನದ ಸದ್ಭಾವನಾ ಪಾದಯಾತ್ರೆ ಭಕ್ತಿ-ಭಾವ ಹಾಗೂ ಸಂಭ್ರಮದೊಂದಿಗೆ ಜರುಗಿತು.ಕಣ್ಮನ ಸೆಳೆದ ರಂಗೋಲಿ ಚಿತ್ತಾರ ಹಾಗೂ ಆರತಿ:ಶ್ರೀಗಳು ಸಂಚರಿಸುವ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಮಹಿಳೆಯರು ಸೆಗಣಿಯಿಂದ ನೆಲವನ್ನು ಸಾರಿಸಿ, ಬಣ್ಣಬಣ್ಣದ ರಂಗೋಲಿಗಳನ್ನು ಬಿಡಿಸುವ ಮೂಲಕ ಸ್ವಾಗತ ಕೋರಿದರು. ಪಾದಯಾತ್ರೆಯುದ್ದಕ್ಕೂ ಮಹಿಳೆಯರು ಪೂರ್ಣಕುಂಭ ಮತ್ತು ಆರತಿ ಹಿಡಿದು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು.ಪಾದಯಾತ್ರೆಯುದ್ದಕ್ಕೂ ಭಜನೆ ಮತ್ತು ಭಕ್ತಿಗೀತೆಗಳು ಮೊಳಗಿದವು. ಬಳಗಾನೂರ ಶಿವಶಾಂತವೀರ ಶರಣರು ತಮ್ಮ ಸುಶ್ರಾವ್ಯ ಕಂಠದಲ್ಲಿ ಭಜನಾ ಪದಗಳು ಹಾಗೂ ವಚನಗಳನ್ನು ಹಾಡುವ ಮೂಲಕ ಭಕ್ತರನ್ನು ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡಿದರು. ಯುವಕರು, ಹಿರಿಯರು ಹಾಗೂ ಮಹಿಳೆಯರು ಹೆಜ್ಜೆ ಹಾಕುತ್ತಾ ಸಾಗಿದರು.ಪಾದಯಾತ್ರೆ ಸಾಗಿದ ಮಾರ್ಗ:
ಪಟ್ಟಣದ ಬೂದೀಶ್ವರ ಮಠದಿಂದ ಬೆಳಗ್ಗೆ 6.30ಕ್ಕೆ ಆರಂಭವಾದ ಪಾದಯಾತ್ರೆಯು ಕುರಬಗಲ್ಲಿ ಓಣಿ, ಮರದಮ್ಮದೇವಿ ದೇವಸ್ಥಾನ, ಸೂಡಿ ವೃತ್ತ, ಸಿದ್ದಾರೂಢ ಮಠ, ಶಿವಪೇಟಿ 1ನೇ ಬಡಾವಣೆ, ಮುಗಳಿ ರಸ್ತೆ, ಶಿವಪೇಟಿ 8ನೇ ಬಡಾವಣೆ ಹಾಗೂ ಶಿವಾನಂದ ನಗರದ ನೀರಿನ ಟ್ಯಾಂಕ್ ಮಾರ್ಗವಾಗಿ ಸಂಚರಿಸಿ 8.30ಕ್ಕೆ ಶಿವಾನಂದ ನಗರದಲ್ಲಿರುವ ಶ್ರೀ ಶಾರದಾ ಬಾಲಕಿಯರ ಪ್ರೌಢಶಾಲೆಯವರೆಗೆ ಯಶಸ್ವಿಯಾಗಿ ತಲುಪಿತು.ನ. 30ರ ಪಾದಯಾತ್ರೆ:ಸದ್ಭಾವನಾ ಪಾದಯಾತ್ರೆಯ ನ. 30ರಂದು ಬೆಳಗ್ಗೆ 6.30ಕ್ಕೆ ಪಟ್ಟಣದ ಗುರುದೇವರ ಚಾಳನ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಶ್ರೀನಗರ, ಕಲ್ಯಾಣ ನಗರ ವಿವುದ ಬಡಾವಣೆಯಲ್ಲಿ ಸಂಚರಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಈ ಸದ್ಭಾವನಾ ಪಾದಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊತಬಾಳ ಅಂಕಲಗಿ ಅಡವಿಸಿದ್ದೇಶ್ವರ ಸ್ವಾಮೀಜಿ, ಬೂದೀಶ್ವರ ಮಠದ ಡಾ. ವಿಶ್ವನಾಥ ದೇವರು, ಜಿಗೇರಿಯ ಗುರುಸಿದ್ದ ಸ್ವಾಮೀಜಿ, ಜಗದೀಶ ಸ್ವಾಮಿ ಹಿರೇಮಠ, ಹೂವಿನ ಹಡಗಲಿ ಶಾಖಾ ಗವಿಮಠದ ಹಿರೇ ಶಾಂತವೀರ ಶರಣರು ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು, ಸ್ಥಳೀಯ ಮುಖಂಡರು ಹಾಗೂ ರೋಣ ಮತ್ತು ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಸತ್ಯ-ಶುದ್ಧ ಕಾಯಕವೇ ಭಗವಂತನ ದರ್ಶನ; ಮರಿ ಶಾಂತವೀರ ಶರಣರು
ಸದ್ಭಾವನಾ ಪಾದಯಾತ್ರೆ ಮುಕ್ತಾಯಗೊಂಡ ಬಳಿಕ ಶಾರದಾ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕಡಲಬಾಳು ಶಾಖಾ ಗವಿಮಠದ ಮರಿ ಶಾಂತವೀರ ಶರಣರು ಆಶೀರ್ವಚನ ನೀಡಿ, ಭಗವಂತನನ್ನು ಹುಡುಕಿಕೊಂಡು ಎಲ್ಲೆಲ್ಲೋ ಅಲೆಯುವ ಅಗತ್ಯವಿಲ್ಲ. ನಾವು ನಿತ್ಯ ಮಾಡುವ ಸತ್ಯ-ಶುದ್ಧ ಕಾಯಕದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡಾಗಲೇ ಭಗವಂತನ ದಿವ್ಯ ದರ್ಶನವಾಗುತ್ತದೆ. ಸಂಪತ್ತು ಹಾಗೂ ನಿಂದೆಗಳ ಹಿಂದೆ ಬೀಳದೆ, ಮಾನವೀಯ ಮೌಲ್ಯಗಳ ಹಿಂದೆ ಸಾಗಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ನಮ್ಮ ನಡೆ-ನುಡಿ ಹಾಗೂ ಬದುಕು ಇತರರಿಗೆ ಆದರ್ಶಪ್ರಾಯವಾಗಿದ್ದಾಗ ಮಾತ್ರ ಬದುಕಿಗೆ ನಿಜವಾದ ಅರ್ಥ ದೊರೆಯುತ್ತದೆ ಎಂದು ತಿಳಿಸಿದರು.