ಸಾರಾಂಶ
ಜಮೀನು, ಹಣಕಾಸು, ಕೌಟುಂಬಿಕ ವ್ಯವಹಾರ, ದಾಯಾದಿಗಳ ಕಲಹ ಮುಂತಾದುವುಗಳನ್ನು ದಶಕಗಳ ಕಾಲ ಬಗೆಹರಿಸುತ್ತ ಮಠದ ಭಕ್ತರಿಗೆ ನೆರವಾಗಿರುವ ತರಳಬಾಳು ಜಗದ್ಗುರು ಬೃಹನ್ಮಠದ ಸದ್ಧರ್ಮ ನ್ಯಾಯಪೀಠ ಇಂದು ಸಾಹಿತ್ಯ ವೇದಿಕೆಯಾಗಿ ಕ್ಷಣ ಹೊತ್ತು ಸೇರಿದ್ದವರ ಗಮನ ಸೆಳೆಯಿತು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಜಮೀನು, ಹಣಕಾಸು, ಕೌಟುಂಬಿಕ ವ್ಯವಹಾರ, ದಾಯಾದಿಗಳ ಕಲಹ ಮುಂತಾದುವುಗಳನ್ನು ದಶಕಗಳ ಕಾಲ ಬಗೆಹರಿಸುತ್ತ ಮಠದ ಭಕ್ತರಿಗೆ ನೆರವಾಗಿರುವ ತರಳಬಾಳು ಜಗದ್ಗುರು ಬೃಹನ್ಮಠದ ಸದ್ಧರ್ಮ ನ್ಯಾಯಪೀಠ ಇಂದು ಸಾಹಿತ್ಯ ವೇದಿಕೆಯಾಗಿ ಕ್ಷಣ ಹೊತ್ತು ಸೇರಿದ್ದವರ ಗಮನ ಸೆಳೆಯಿತು.ಸರ್ಕಾರಿ ಅಧಿಕಾರಿಯಾಗಿ ನಿಷ್ಕಳಂಕ ಬದುಕು ಸಾಗಿಸಿದ ಡಿ. ತೀರ್ಥಲಿಂಗಪ್ಪನವರ ಕೃತಿ ʻನಾನು, ನನ್ನ ಬದುಕುʼ ಬಿಡುಗಡೆಗೊಳಿಸಲು ಪ್ರತ್ಯೇಕ ವೇದಿಕೆಯೊಂದು ಸಿದ್ದಗೊಂಡಿದ್ದರೂ, ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಾನ್ನಿಧ್ಯ ವಹಿಸಿದ್ದ ನ್ಯಾಯಪೀಠದ ಅಂಗಳಕ್ಕೆ ಕೃತಿಗಳನ್ನು ತರಿಸಿ ಲೋಕಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ತೀರ್ಥಲಿಂಗಪ್ಪನವರು ಪ್ರಾಮಾಣಿಕ ಅಧಿಕಾರಿಯಾಗಿ ಸರ್ಕಾರದ ಸೇವೆ ಸಲ್ಲಿಸಿದ್ದಾರೆ. ಅವರ ಬದುಕನ್ನು ಅಕ್ಷರ ರೂಪದಲ್ಲಿ ಇರಿಸಲು ನಾವು ಒತ್ತಾಯ ಮಾಡುತ್ತಲೇ ಬಂದಿದ್ದೆವು. ನಮ್ಮ ಮಧ್ಯೆ ಇರುವ ಇಂತಹ ಹಿರಿಯರ ಲೋಕಾನುಭವಗಳು ಕೃತಿಯಲ್ಲಿ ಒಡಮೂಡಬೇಕು ಎಂಬುದು ನಮ್ಮ ಆಶಯ ಎಂದರು.ನಮ್ಮ ಅಪೇಕ್ಷೆಯನ್ನು ತೀರ್ಥಲಿಂಗಪ್ಪ ಈಡೇರಿಸಿದ್ದಾರೆ. ಈವರೆಗೂ ಸವೆಸಿರುವ ಬದುಕನ್ನು ಅವರು ದಾಖಲಿಸಿದ್ದಾರೆ. ಇದು ಅವರ ಕುಟುಂಬ, ಅಭಿಮಾನಿಗಳು, ಓದುಗರು ಮತ್ತು ಸಾರ್ವಜನಿಕರಿಗೆ ಮಾದರಿಯಾಗಬೇಕು. ದಾಖಲಿಸಿರುವ ಅನುಭವಗಳು ನಮ್ಮ ಬದುಕನ್ನು ಕಟ್ಟಿಕೊಡಲು ಸಹಕಾರಿಯಾಗಬೇಕು ಎಂದು ತಿಳಿಸಿದರು.ಸಾಧು ವೀರಶೈವ ಸಂಘ ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೇ ಕಾಲೇಜು ಪ್ರಾಂಶುಪಾಲ ಬಿ.ಬಿ. ಧನಂಜಯ ಮಾತನಾಡಿದರು. ಡಿ. ತೀರ್ಥಲಿಂಗಪ್ಪ, ಎಸ್.ಆರ್. ಬಸವರಾಜಪ್ಪ, ಶಿವಪ್ಪ ಕೋಡಿಕೊಪ್ಪ, ಗದಿಗೇಶ್ ಮುಂತಾದವರು ಉಪಸ್ಥಿತರಿದ್ದರು.