ನಿಜ ಸ್ವರೂಪ ತಿಳಿದುಕೊಂಡವನೇ ಸದ್ಗುರು: ಶಿವಕುಮಾರ ಶ್ರೀ

| Published : Feb 19 2024, 01:32 AM IST

ಸಾರಾಂಶ

ಯಾರ ಹೃದಯ ಕಠೋರವಿದೆ ಅಂತಹವರ ಮೇಲೆ ಗುರುಕೃಪಿಯಾಗುವುದಿಲ್ಲ. ನಾನು ಯಾರು? ನನ್ನ ಸ್ವರೂಪವೇನು? ಎಂಬುದು ತಿಳಿಸಿಕೊಡುವವನೇ ಸದ್ಗುರು. ನರನನ್ನು ಹರನನ್ನಾಗಿ ಮಾಡುವವನೆ ಗುರು. ಗುರುವಿನಲ್ಲಿ ದಯಾಗುಣ ಇರಬೇಕು.

ಬೀದರ್: ಆರೋಗ್ಯ, ಐಶ್ವರ್ಯ, ಆನಂದ ಸಿಗಬೇಕಾದರೆ ಪರಮಾತ್ಮನ ಕೃಪೆ ಬೇಕು ಪ್ರತಿಯೊಬ್ಬ ಮನುಷ್ಯ ಆರೋಗ್ಯ, ಐಶ್ವರ್ಯ, ಆನಂದ ಈ ಮೂರನ್ನು ಅಪೇಕ್ಷಿಸುತ್ತಾನೆ. ಇವು ಸಿಗಬೇಕಾದರೆ ಪರಮಾತ್ಮನ ಕೃಪೆಬೇಕು ಎಂದು ಸಿದ್ಧಾರೂಢ ಮಠದ ಪೂಜ್ಯ ಡಾ.ಶಿವಕುಮಾರ ಸ್ವಾಮಿಗಳು ತಿಳಿಸಿದರು.

ಇಲ್ಲಿನ ಸಿದ್ಧಾರೂಢ ಮಠದ ಡಾ.ಶಿವಕುಮಾರ ಸ್ವಾಮಿಗಳ 80ನೇ ಜಯಂತಿ ಮಹೋತ್ಸವ ಭಾನುವಾರ ಸಂಭ್ರಮ ಸಡಗರದ ಮಧ್ಯ ತೆರೆಕಂಡಿತು.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಗೋವಾ, ಮಧ್ಯಪ್ರದೇಶ ಸೇರಿದಂತೆ ವಿವಿಧ ಭಾಗದ ಸದ್ಭಕ್ತರು ಆಗಮಿಸಿ ಗೌರವ ಸಮರ್ಪಿಸಿದರು.

ಸಮಾರೋಪದ ಸಾನಿಧ್ಯವಹಿಸಿ ಮಾತನಾಡಿದ ಅವರು, ಮನುಷ್ಯನಾಗಿ ಹುಟ್ಟಿ ಪರಮಾತ್ಮನ ಪ್ರಾಪ್ತಿ ಮಾಡಿಕೊಳ್ಳದಿದ್ದರೆ ಅವನ ಜೀವನದಲ್ಲಿ ದೊಡ್ಡ ದುರ್ಘಟನೆ ಸಂಭವಿಸಿದಂತೆ. ಪರಮಾತ್ಮ ಭಕ್ತರಲ್ಲಿ ನಿಷ್ಕಲ್ಮಷ ಮನಸ್ಸನ್ನು ಕೇಳುತ್ತಾನೆ. ದೇವರಿಗೆ ನಾವು ನೆನೆದರೆ ಕೃಪೆಯಾಗಲ್ಲ ಅವನ ಪ್ರೀತಿ ಪಾತ್ರರಾದಾಗ ಮಾತ್ರ ಕೃಪೆಯಾಗುವದು.

ಯಾರ ಹೃದಯ ಕಠೋರವಿದೆ ಅಂತಹವರ ಮೇಲೆ ಗುರುಕೃಪಿಯಾಗುವುದಿಲ್ಲ. ನಾನು ಯಾರು? ನನ್ನ ಸ್ವರೂಪವೇನು? ಎಂಬುದು ತಿಳಿಸಿಕೊಡುವವನೇ ಸದ್ಗುರು. ನರನನ್ನು ಹರನನ್ನಾಗಿ ಮಾಡುವವನೆ ಗುರು. ಗುರುವಿನಲ್ಲಿ ದಯಾಗುಣ ಇರಬೇಕು. ದುಃಖಿಗಳನ್ನು ಕಂಡರೆ ಕರುಣೆ ಹುಟ್ಟಬೇಕು. ಸಿದ್ಧಾರೂಢರು ವಿಷ ಕೊಟ್ಟವರಿಗೂ ಕ್ಷಮೆ ಮಾಡಿದರು ಅಂತೆಯೆ ವಿಶ್ವವಿಖ್ಯಾತಿ ಪಡೆದರು ಎಂದರು.

ಡಾ.ಶಿವಾನಂದ ಭಾರತಿ ಸ್ವಾಮಿಗಳು ಇಂಚಲ ಮಾತನಾಡಿ, ಸಿದ್ಧಾರೂಢ ಪರಂಪರೆಯ ಆಚಾರ-ವಿಚಾರಗಳನ್ನು ಪುನರುತ್ಥಾನಗೊಳಿಸಲು ಡಾ. ಶಿವಕುಮಾರ ಸ್ವಾಮಿಗಳು ಮಾನವ ರೂಪ ತೊಟ್ಟು ಧರೆಗೆ ಅವತರಿಸಿ ಬಂದಿದ್ದಾರೆ ಎಂದರು.

ಕೂಡಲ ಸಂಗಮದ ಡಾ.ಗಂಗಾಮಾತಾ ಮಾತನಾಡಿ, ಡಾ.ಶಿವಕುಮರ ಶ್ರೀಗಳು ಬೀದರ್‌ ನೆಲದಲ್ಲಿ ತನ್ನ ಪಾಡಿಗೆ ತಾವು ಕೆಲಸ ಮಾಡುತ್ತಾ ಈ ನಾಡನ್ನು ಧರ್ಮಕ್ಷೇತ್ರ, ಶಿಕ್ಷಣಕ್ಷೇತ್ರ, ಪುಣ್ಯಕ್ಷೇತ್ರವನ್ನಾಗಿ ಮಾಡಿದ್ದಾರೆ. ಅವರ ಪಾದಸ್ಪರ್ಷದಿಂದ ಬೀದರ್‌ ಪಾವನವಾಯಿತು. ಶ್ರದ್ಧೆ, ನಿಷ್ಠೆ, ಗುರುಭಕ್ತಿ, ಶರಣಾಗತಿ ಭಾವ ಇದ್ದವರು ಸಾಧನೆಯ ಮಾರ್ಗದಲ್ಲಿ ಅತಿ ಬೇಗ ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯ. ಅದಕ್ಕೆ ಶಿವಕುಮಾರ ಶ್ರೀಗಳು ನಿರ್ದಶನ. ತಮ್ಮ ವಿದ್ವತ್ತಿನಿಂದ ಇಲ್ಲಿ ಜ್ಞಾನ ಸಾಮ್ರಾಜ್ಯವನ್ನೆ ಕಟ್ಟಿದ್ದಾರೆ ಎಂದರು.

ಬಸವಗಿರಿಯ ಅಕ್ಕ ಅನ್ನಪೂರ್ಣ ಮಾತನಾಡಿ, ಮಠದ ಶಿವಕುಮಾರೇಶ್ವರ ಗುರುಕುಲ ಶಾಲೆಯ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದೇನೆ. ಅವರ ಒಡನಾಟದಲ್ಲಿ ಅತಿ ಸಮೀಪ ಇದ್ದು ಬೆಳೆದದ್ದು ನನ್ನ ಪುಣ್ಯ. ಶ್ರೀಗಳು ಸೇವಾಕ್ಷೇತ್ರದಲ್ಲಿ ನಾಡಿನಾದ್ಯಂತ ಅನೇಕ ಭಕ್ತರನ್ನು ಬೆಳೆಸಿದ್ದಾರೆ. 12 ವರ್ಷ ಶೂನ್ಯ ಸಂಪಾದನೆ ಕುರಿತು ಪ್ರವಚನ ಹೇಳಿದ್ದಾರೆ. ಅದರಲ್ಲಿ 4 ವರ್ಷ ಕೇಳಿದಿದ್ದೇನೆ. ಇವತ್ತು ಈ ಮಟ್ಟಕ್ಕೆ ಬೆಳೆಯಲು ಪೂಜ್ಯ ಶ್ರೀಗಳೇ ಪ್ರೇರಣೆ. ಶ್ರೀಗಳು ಬೀದರ್‌ ನಾಡಿಗೆ ಬಂದದ್ದು ಉತ್ಸವ ಅವರು ಸ್ಥಿತಪ್ರಜ್ಞಾರಾಗಿ ಇರುವುದೇ ಒಂದು ಉತ್ಸವ. ಶ್ರೀಗಳು ನಮ್ಮ ನಿಮ್ಮಂತೆ ಜನಿಸಿ ಬಂದವರಲ್ಲ. ಈ ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು ಅವತರಿಸಿ ಬಂದ ಮಹಾನ್ ಸಂತರು ಎಂದರು.

ಶಂಕರಾನಂದ ಸ್ವಾಮಿ ಮಾತನಾಡಿ, ನಾಡಿನ ಸಕಲ ಸದ್ಭಕ್ತರ ಸದಿಚ್ಛೆಯಂತೆ ಕಾರ್ಯಕ್ರಮ ಸಂಪನ್ನಗೊಂಡಿತ್ತು. ಶ್ರೀಗಳ ಸಂಕಲ್ಪ ಮಾಡಿದಂತೆ ಅದರ ಸಿದ್ಧತಿಗಾಗಿಯೂ ಹಗಲಿರುಳೆನ್ನದೆ ಊರುರೂ ಸಂಚಾರ ಮಾಡಿದರು. ಅದಕ್ಕೆ ಭಕ್ತರು ಸಹಕಾರವೂ ನೀಡಿದರು. ಅಂತೆಯೇ ಕಾರ್ಯಕ್ರಮ ಯಶಸ್ಸು ಕಂಡಿದೆ ಎಂದರು.

ಮಹಾಲಿಂಗಪುರದ ಸಹಜಾನಂದ ಸ್ವಾಮಿಗಳು ಮಾತನಾಡಿ, ಬೀದರ್‌ನ ಡಾ.ಶಿವಕುಮಾರ ಶ್ರೀಗಳು ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮಿಗಳು ವೇದಾಂತ ತತ್ವದ ತಂದೆ-ತಾಯಿಗಳು. ಅವರ ಅವಿರತ ಪರಿಶ್ರಮದಿಂದ ಅದರ ವ್ಯಾಪ್ತಿ ದಶದಿಕ್ಕುಗಳಿಗೆ ಹರಡಿದೆ ಎಂದರು.

ನಿಜಗುಣದೇವರು, ಪ್ರಣವಾನಂದ ಸ್ವಾಮಿ, ಓಡಿಸಿದ್ದ ಸ್ವಾಮೀ,, ಮಾತಾ ಲಕ್ಷ್ಮಿದೇವಿ, ಸಹಜಾನಂದ ಸ್ವಾಮೀ, ಶಂಕರಾನಂದ ಸ್ವಾಮೀ, ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಬಿ.ಜಿ. ಶಟಕಾರ, ಬಸವರಾಜ ಜಾಬಶೆಟ್ಟಿ, ಮಡಿವಾಳಪ್ಪ ಗಂಗ್‌ಶೆಟ್ಟಿ, ಶಿವಶರಣಪ್ಪ ಸಾವಳಗಿ, ಸುಭಾಷ ಉಪ್ಪೆ, ಭಾರತಿಬಾಯಿ ಕಣಜಿ, ಉದಯಭಾನು ಹಲವಾಯಿ, ಈಶ್ವರಗೌಡ ಕಮಡಳ್ಳಿ, ಆಡಳಿತಾಧಿಕಾರಿ ಡಾ.ಹಾವಗಿರಾವ ಮೈಲಾರೆ, ಸಹಜಾನಂದ ಕಂದಗೂಳ್, ಪ್ರಭು ಬೆಣ್ಣೆ, ವಿರೂಪಾಕ್ಷ ಗಾದಗಿ, ಲಕ್ಷ್ಮಣ ಪೂಜಾರಿ, ಶಿವಶರಣಪ್ಪ ಹೊಸಮನಿ, ಬಸವರಾಜ ಮ್ಯಾಗೆರಿ, ನಾಗಪ್ಪ ಜಾನಕನೊರ್, ಶ್ರೀನಾಥ ಮಸ್ಕಲೆ, ಅನೇಕರು ಉಪಸ್ಥಿತರಿದ್ದರು.