ಮಹಿಳೆಯರು ಶಸ್ತ್ರಧಾರಿಗಳಾಗಿ ಲವ್ ಜಿಹಾದ್ ಸದೆಬಡಿಯಿರಿ: ಸಾದ್ವಿ ಕರೆ
KannadaprabhaNewsNetwork | Published : Oct 09 2023, 12:47 AM IST
ಮಹಿಳೆಯರು ಶಸ್ತ್ರಧಾರಿಗಳಾಗಿ ಲವ್ ಜಿಹಾದ್ ಸದೆಬಡಿಯಿರಿ: ಸಾದ್ವಿ ಕರೆ
ಸಾರಾಂಶ
ಮಹಿಳೆಯರು ಲವ್ವ್ ಜಿಹಾದ್ದ್ ವಿರುದ್ಧ ಶಸ್ತ್ರಧಾರಿಗಳಾಗಿ- ಸಾಧ್ವಿ ಕರೆ
ಕನ್ನಡಪ್ರಭ ವಾರ್ತೆ ಬಂಟ್ವಾಳ ತಾಯಿ ರಾಜರಾಜೇಶ್ವರಿ ಚಂಡ ಮುಂಡರನ್ನು ವಧಿಸಿದ ರೀತಿಯಲ್ಲಿ ಮಹಿಳೆಯರು ಶಸ್ತ್ರಧಾರಿಗಳಾಗಿ ಲವ್ ಜಿಹಾದ್ ನಂತಹ ಹೀನ ಕೃತ್ಯಗಳನ್ನು ಸದೆಬಡಿಯಬೇಕು ಎಂದು ಸಾದ್ವಿ ದೇವಿ ಸರಸ್ವತಿ ಜಿ ಹೇಳಿದ್ದಾರೆ. ವಿಶ್ವ ಹಿಂದು ಪರಿಷದ್ ೬೦ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ, ಕಲ್ಲಡ್ಕ, ವಿಟ್ಲ ಈ ಮೂರು ಪ್ರಖಂಡಗಳ ಆಶ್ರಯದಲ್ಲಿ ಭಾನುವಾರ ಬಿ.ಸಿ.ರೋಡಿನ ಬಸ್ತಿಪಡ್ಪುವಿನ ಶೌರ್ಯ ಮೈದಾನದಲ್ಲಿ ನಡೆದ ಜಾಗೃತ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ತಾನು ಮುಸ್ಲಿಂ ವಿರೋಧಿಯಲ್ಲ, ಗುಲಾಂ ಸಖೀ ಅವರ ಭಜನೆ ಪಠಣ ಮಾಡುತ್ತೇನೆ, ರಹಿಂ ರಸ್ಕಾನ್, ಎಪಿಜೆ ಅಬ್ದುಲ್ ಕಲಾಂನಂತವರಿಗೆ ಗೌರವ ಕೊಡುತ್ತೇನೆ. ಆದರೆ ಈ ನೆಲದಲ್ಲಿ ವಿಧರ್ಮೀಯರು, ಲೂಟಿಕೋರರನ್ನು ಬೆಂಬಲಿಸುವುದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಕಿಡಿಕಾರಿದರು. ಹಿಂದೂಗಳು ಎಂದಿಗೂ ಒಂದಾಗಿರಬೇಕು ಎಂದು ಸೆರಗೊಡ್ಡಿ ನಿವೇದಿಸಿಕೊಂಡ ಸಾಧ್ವಿ, ನಾವು ಸಂಘಟಿತರಾಗಿದ್ದಾಗ ಯಾರಿಗೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲಎಂದರು. ತುಳುವಿನಲ್ಲಿ ಭಾಷಣ ಆರಂಭ ತುಳುನಾಡ್‌ದ ಸಿಂಹ ಸ್ವರೂಪಿ ಕಾರ್ಯಕರ್ತರೆಗ್ ಅಬ್ಬಕ್ಕನಂಚಿನ ಅಕ್ಕನಕ್ಲೆಗ್ ಎನ್ನ ಸೊಲ್ಮೆಲು ಎಂದು ತುಳುವಿನಲ್ಲಿ ಭಾಷಣ ಆರಂಭಿಸಿದ ಸಾಧ್ವಿ, ನಾನು ತುಳುನಾಡಿಗೆ ಪದೇಪದೆ ಬರುತ್ತಿರುತ್ತೇನೆ. ತುಳುವನ್ನು ಪೂರ್ಣ ಕಲಿಯುತ್ತೇನೆ ಎಂದು ತಿಳಿಸಿದರು. ಆರ್‌ಎಸ್‌ಎಸ್‌ನ ಜೈಷ್ಠ ಪ್ರಚಾರಕ ಸು.ರಾಮಣ್ಣ ಪ್ರಧಾನ ಭಾಷಣ ಮಾಡಿ, ಹನುಮಂತನ ಶೀಲಯುಕ್ತ ಶೌರ್ಯ ನಮಗೆಲ್ಲರಿಗೂ ಮಾದರಿಯಾಗಿದ್ದು, ರಾಷ್ಟ್ರೀಯತೆಯ ಹಳಿಗಳ ಮೇಲೆ ರಾಜಕೀಯ ನಡೆಯಬೇಕು ಎಂದರು. ದುರ್ಯೋಧನ, ಕಂಸನಿಗಾದ ಅಂತ್ಯವೇ ಸನಾತನ ಧರ್ಮದ ನಿಂದಕರಿಗೆ ಆಗುತ್ತದೆ ಎಂದು ತಿಳಿಸಿದ ಅವರು, ಬಜರಂಗದಳದ ಮೂಲಕ ಬಿಜೆಪಿ ಪ್ರವೇಶಿಸುತ್ತೇನೆ ಎನ್ನುವ ಭ್ರಮೆ ಬಿಟ್ಟುಬಿಡಬೇಕು. ಬಜರಂಗದಳ ಅಯೋಧ್ಯೆಯನ್ನು ಪ್ರವೇಶಿಸುವ ಮಹಾದ್ವಾರ ಎಂದು ವಿಶ್ಲೇಷಿಸಿದರು. ಶೌರ್ಯ ಜಾಗರಣ ರಥಯಾತ್ರೆ ಸಮಿತಿಯ ಅಧ್ಯಕ್ಷ, ಕಾವೇಶ್ವರ ದೇವಸ್ಥಾನದ ಕಾರ್ಯಧ್ಯಕ್ಷ ರಘು ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ, ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕಾ ಚೈತನ್ಯಾನಂದ ಸ್ವಾಮೀಜಿ, ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ ಕಾರ್ಯಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಪುತ್ತೂರು ಜಿಲ್ಲೆ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಇದ್ದರು. ಶೌರ್ಯ ಜಾಗರಣ ರಥಯಾತ್ರೆ ಸಮಿತಿಯ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿನ್ ಮೆಲ್ಕಾರ್ ವಂದಿಸಿದರು. ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ ಮತ್ತು ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಭವ್ಯ ಮೆರವಣಿಗೆ: ಶೌರ್ಯ ಜಾಗರಣ ರಥಯಾತ್ರೆ ರಥಕ್ಕೆ ಮಾಣಿಯಲ್ಲಿ ಸ್ವಾಗತ ನೀಡಲಾಯಿತು. ಪೆರಾಜೆ ಶ್ರೀರಾಮ ಚಂದ್ರಾಪುರ ಮಠ ದ್ವಾರದಿಂದ ಬೃಹತ್ ಶೋಭಾಯಾತ್ರೆ ಮಾಣಿ ವರೆಗೆ ನಡೆಯಿತು. ಕುಣಿತ ಭಜನೆ, ನಾಸಿಕ್ ಬ್ಯಾಂಡ್ ಮೆರವಣಿಗೆಗೆ ಮೆರಗು ನೀಡತು. ಕ್ಯಾಪ್ಟನ್ ಬೃಜೇಶ್ ಚೌಟ, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ರಾಜಾರಾಮ ಕಾಡೂರು, ಕ.ಕೃಷ್ಣಪ್ಪ, ಸಾಂತಪ್ಪ ಪೂಜಾರಿ, ಮೋನಪ್ಪ ದೇವಸ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಬಸ್ತಿಪಡ್ಪುಶೌರ್ಯ ಮೈದಾನದವರೆಗೆ ಶೌರ್ಯ ಜಾಗರಣ ರಥಯಾತ್ರೆಯ ಮೆರವಣಿಗೆ ಸಾಗಿ ಬಂತು. ಅಪಾರ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.