ಅಪಘಾತಗಳ ತಡೆಗೆ ಸುರಕ್ಷತಾ ಕ್ರಮ :ಜಿಲ್ಲಾಧಿಕಾರಿ ಶಿಲ್ಪಾ ನಾಗ್

| Published : Feb 22 2025, 12:45 AM IST

ಸಾರಾಂಶ

ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ನಾಮಫಲಕ, ಸೂಚನಾ ಫಲಕ, ಜೀಬ್ರಾ ಕ್ರಾಸಿಂಗ್ ಇರುವ ಕೆಲವು ಕಡೆ ರಸ್ತೆ ಅಗಲೀಕರಣಗೊಳಿಸಿ ಮಿಡಿಯನ್‌ಗೆ ಬಣ್ಣ ಹಚ್ಚಬೇಕು. ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್ ಇರುವ ಕಡೆ ರಸ್ತೆ ಸುರಕ್ಷತೆ ಬ್ಲಿಂಕರ್ ಗಳನ್ನು ಅಳವಡಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಇನ್ನಿತರ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಸೂಕ್ತವಾಗಿರುವ ಸುರಕ್ಷತಾ ಕ್ರಮಗಳಿಗೆ ಕೂಡಲೇ ಮುಂದಾಗುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಫೆ.20) ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ನಾಮಫಲಕ, ಸೂಚನಾ ಫಲಕ, ಜೀಬ್ರಾ ಕ್ರಾಸಿಂಗ್ ಇರುವ ಕೆಲವು ಕಡೆ ರಸ್ತೆ ಅಗಲೀಕರಣಗೊಳಿಸಿ ಮಿಡಿಯನ್‌ಗೆ ಬಣ್ಣ ಹಚ್ಚಬೇಕು. ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್ ಇರುವ ಕಡೆ ರಸ್ತೆ ಸುರಕ್ಷತೆ ಬ್ಲಿಂಕರ್ ಗಳನ್ನು ಅಳವಡಿಸಬೇಕು ಎಂದರು.

ರಾಷ್ಟ್ರೀಯ ಹೆದ್ದಾರಿಯ ಜಂಕ್ಷನ್‌ಗಳಲ್ಲಿ ಬರುವ ಕೂಡು ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸೂಚನಾ ಫಲಕಗಳನ್ನು ಹಾಕಬೇಕು. ಇಂತಹ ಕೂಡು ರಸ್ತೆಗಳ ಬಳಿ ವಾಹನಗಳ ಸವಾರರಿಗೆ ಯಾವುದೇ ಗೊಂದಲಗಳಾಗಬಾರದು. ವಾಹನಗಳ ಸಂಚಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡುವ ಫಲಕಗಳನ್ನು ಅಗತ್ಯವಿರುವೆಡೆ ಶೀಘ್ರವೇ ಅಳವಡಿಸಬೇಕೆಂದು ತಿಳಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳು ಇತರೆ ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ಪಾಯಿಂಟ್‌ಗಳನ್ನು ಗುರುತಿಸಬೇಕು. ಸಾರ್ವಜನಿಕರಿಗೆ ಸಂಚಾರ ನಿಯಮಗಳ ಜಾಗೃತಿ ಮೂಡಿಸಬೇಕು. ಅತಿವೇಗದ ಸಂಚಾರ, ಹೆಲ್ಮೆಟ್ ಧರಿಸದೇ ಇರುವುದರಿಂದ ಆಗಬಹುದಾದ ಅನಾಹುತ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಹಿಟ್ ಅಂಡ್ ರನ್ ಪ್ರಕರಣಗಳನ್ನು ಇತ್ಯರ್ಥಪಡಿಸಿ ಬಾಧಿತರಿಗೆ ವಿಮೆ ಪಾವತಿಸುವ ಕಾರ್ಯ ಸಕಾಲದಲ್ಲಿ ಆಗಬೇಕು ಎಂದರು.

ಹೆದ್ದಾರಿ ರಸ್ತೆಗಳಲ್ಲಿ ಸೂಕ್ತವಿರುವ ಕಡೆ ಬಸ್‌ಸ್ಟಾಪ್‌ಗಳು ನಿಮಾಣವಾಗಬೇಕು. ಕೆ.ಎಸ್.ಆರ್.ಟಿ.ಸಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜೊತೆಗೂಡಿ ಬಸ್ ಸ್ಟಾಪ್ ಗಳಿಗೆ ಸ್ಥಳ ಗುರುತಿಸಬೇಕು. ವೈಜ್ಞಾನಿಕವಾಗಿ ಈ ಎಲ್ಲ ಕಾರ್ಯಗಳು ಆಗಬೇಕು. ರಸ್ತೆ ಸುರಕ್ಷತಾ ನಿಯಮಗಳು ಕಡ್ಡಾಯವಾಗಿ ಪಾಲನೆಯಾಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಮಾತನಾಡಿ, ಎಲ್ಲೆಲ್ಲಿ ಸುರಕ್ಷತಾ, ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂಬ ಬಗ್ಗೆ ಈಗಾಗಲೇ ತಿಳಿಸಲಾಗಿದೆ. ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳು ಹಾಗೂ ವಾಹನಗಳಿಗೆ ಮಾರ್ಗದರ್ಶನ ಮಾಡುವ ಫಲಕಗಳನ್ನು ಸ್ಪಷ್ಟವಾಗಿ ಕಾಣುವಂತೆ ಹಾಕಬೇಕಿದೆ. ಅಪಘಾತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ರಸ್ತೆ ನಿರ್ಮಾಣ ಮಾಡುವ ಪ್ರಾಧಿಕಾರ ಸಂಸ್ಥೆಗಳು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೆಶಕ ರಾಹುಲ್ ಗುಪ್ತಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಹೇಶ್, ಕೆಶಿಪ್ ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವಿನಾಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಗಾಯತ್ರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವೆಂಕಟಲಕ್ಷ್ಮೀ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸುಧಾ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್‌ ಕುಮಾರ್, ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.