ಸಾರಾಂಶ
ಮೊರಾರ್ಜಿ ಶಾಲೆಯ ಪೋಷಕರ ಸಭೆಯಲ್ಲಿ ದೂರುಗಳ ಸುರಿಮಳೆ । ಸಭೆಯಲ್ಲಿ ವಾಗ್ವಾದ । ಸಮಸ್ಯೆ ತೆರೆದಿಟ್ಟ ಪೋಷಕರು
ಕನ್ನಡಪ್ರಭ ವಾರ್ತೆ,ಕಡೂರುಪೋಷಕರು ವ್ಯಕ್ತಪಡಿಸಿರುವ ಅಭಿಪ್ರಾಯಗಳಂತೆ ಸವಲತ್ತುಗಳನ್ನು ಕಲ್ಪಿಸಿ ಕೊಡುವ ಮೂಲಕ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಿದ್ಯಾರ್ಥಿನಿಯರ ಸುರಕ್ಷತೆಗೆ ಆಧ್ಯತೆ ನೀಡಲಾಗುವುದು ಎಂದು ಅಲ್ಪ ಸಂಖ್ಯಾತರ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಸೋಮಶೇಖರ್ ಭರವಸೆ ನೀಡಿದರು. ಕಡೂರು ತಾಲೂಕಿನ ಕುಪ್ಪಾಳು ಮೊರಾರ್ಜಿ ಸರಕಾರಿ ಶಾಲೆಯಲ್ಲಿ ಶನಿವಾರ ನಡೆದ ಪೋಷಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಪೋಷಕರು ಆತಂಕಕ್ಕೆ ಒಳಗಾಗುವುದು ಬೇಡ. ಶಾಲೆ ಯಲ್ಲಿರುವ ವಿದ್ಯಾರ್ಥಿಗಳ ಸಂಪೂರ್ಣ ರಕ್ಷಣೆ ಜವಾಬ್ದಾರಿ ನಮ್ಮದು. ಈಗಾಗಲೇ ಇಲ್ಲಿದ್ದ ಪ್ರಾಂಶು ಪಾಲರನ್ನು ವರ್ಗಾವಣೆ ಮಾಡಿದ್ದು, ಡಿ ಗ್ರೂಪ್ ನೌಕರರನ್ನೂ ಬಿಡುಗಡೆಗೊಳಿಸಲಾಗಿದೆ. ಎಲ್ಲ ಫೋಷಕರು ವಿದ್ಯಾರ್ಥಿಗಳ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಸೂಚನೆ ನೀಡಲಾಗಿದೆ. ಹಿಂದಿನ ಪ್ರಾಂಶುಪಾಲರ ಮತ್ತು ಘಟನೆ ಕುರಿತ ವರದಿಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರಿಗೆ ವರದಿ ಸಲ್ಲಿಸಲಾಗುತ್ತಿದ್ದು, ಅವರು ಇಲಾಖಾ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು. ನಮ್ಮ ತಕ್ಷಣದ ಆಧ್ಯತೆ ಶಾಲೆ ಶೈಕ್ಷಣಿಕ ಸಾಧನೆ ಹೆಚ್ಚಿಸುವುದು ಹಾಗೂ ಯಾವುದೇ ಕಹಿ ಘಟನೆಗಳು ನಡೆಯದಂತೆ ತಡೆಯುವುದು. ಈ ಶಾಲೆಯಲ್ಲಿರುವ ಯಗಟಿ ಮೊರಾರ್ಜಿ ಶಾಲೆಯ 250 ವಿದ್ಯಾರ್ಥಿ ಗಳನ್ನು ಬೀರೂರಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಬಾರಿ ಇಲಾಖೆಗೆ ಸುಮಾರು 70 ಲಕ್ಷ ರು. ಅನುದಾನ ಬಂದಿದ್ದು ಈ ವಸತಿ ಶಾಲೆಗೆ ನೂತನ ಶೌಚಾಲಯ ಸೇರಿದಂತೆ ಅಗತ್ಯ ಅಭಿವೃದ್ಧಿ ಕಾಯಗಳನ್ನು ಕೈಗೊಳ್ಳಲಾಗುವುದು ಎಂದರು.ಪ್ರಾಂಶುಪಾಲ ಧನರಾಜ್ ಮಾತನಾಡಿ, ಶಾಲೆಯಲ್ಲಿ ಮಾರ್ಗಸೂಚಿ ಪ್ರಕಾರ ಪ್ರತಿಯೊಂದು ವಿಚಾರವನ್ನೂ ಅನುಷ್ಟಾನಗೊಳಿಸಲಾಗುತ್ತದೆ. ಪ್ರತೀ ತಿಂಗಳು ಪೋಷಕರ ಸಭೆ ನಡೆಸಲಾಗುವುದು ಈ ನಿಟ್ಟಿನಲ್ಲಿ . ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಪೋಷಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕ್ರೈಸ್ ಜಿಲ್ಲಾ ಸಮನ್ವಯಾಧಿಕಾರಿ ನಾಗೇಶ್ ಮತ್ತು ಪೋಷಕ ಮಹೇಶ್, ಕೋದಂಡ, ಎಸ್ .ವಿ.ನಾಗರಾಜ್, ಅಶೋಕ್ , ಸಿಬ್ಬಂದಿ, ಪೋಷಕರು ಮತ್ತಿತರರು ಇದ್ದರು.ಪೋಷಕರ ದೂರುಗಳು: ಹಿಂದಿನ ಪ್ರಾಂಶುಪಾಲರನ್ನು ಸಭೆಗೆ ಕರೆಸುವಂತೆ ಪಟ್ಟು ಹಿಡಿದ ಪೋಷಕರು ಸಮಸ್ಯೆಗಳು ಮತ್ತು ದೂರುಗಳ ಮಹಾಪೂರವನ್ನೇ ತೆರೆದಿಟ್ಟರು.
ಪೋಷಕರಾದ ನೇತ್ರಾವತಿ ಮಾತನಾಡಿ, ಶಾಲೆಯಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ. ಸ್ವಚ್ಛತೆಯಿಲ್ಲ. ಶೌಚಾಲಯದ ಸಂಖ್ಯೆ ಹೆಚ್ಚಿಸಬೇಕು. ಶಾಲೆಯ ಭಧ್ರತಾ ಸಿಬ್ಬಂದಿ ಯಾರೆಂದು ತಿಳಿಯದ ಸ್ಥಿತಿ ಇದ್ದು, ಮಕ್ಕಳೊಡನೆ ಪೋಷಕರು ಮಾತನಾಡುವ ಅವಕಾಶ ಇಲ್ಲಿಲ್ಲ. ನಿಮ್ಮಗಳ ಬೇಜವಾಬ್ದಾರಿಯಿಂದ ಇಂತಹ ಕೆಟ್ಟ ಘಟನೆಗಳು ನಡೆದಿವೆ ಎಂದು ದೂರಿದರು.ಪೋಷಕ ಮಹೇಶ್ ಮಾತನಾಡಿ, ಉತ್ತಮ ಫಲಿತಾಂಶ ತರುತ್ತಿದ್ದ ಈ ಸರ್ಕಾರಿ ವಸತಿ ಶಾಲೆಯಲ್ಲಿ ಭದ್ರತೆ ಸಡಿಲವಾಗಿ ಕೆಟ್ಟ ಘಟನೆಗಳು ನಡೆದಿವೆ ಇದಕ್ಕೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿ, ದೂರದ ಪೋಷಕರಿಗೆ ಮಕ್ಕಳೊಡನೆ ದೂರವಾಣಿಯಲ್ಲಿ ಮಾತನಾಡಲೂ ಅವಕಾಶ ನೀಡಿಲ್ಲ. ಇಲ್ಲಿ ಕುಡಿವ ನೀರು ಹಾಗು ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆಯಿಲ್ಲ. ಯಾವುದೇ ಕಾರ್ಯಕ್ರಮವಿದ್ದರೂ ಶಾಲಾ ಸಿಬ್ಬಂದಿ ಪೋಷಕರಿಗೆ ತಿಳಿಸುವುದಿಲ್ಲ. ಇಲ್ಲಿ ಹೊರಗುತ್ತಿಗೆ ನೌಕರರದ್ದೇ ಪಾರುಪತ್ಯವಾಗಿದೆ ಎಂದು ಆರೋಪಿಸಿದರು.
ಮಹೇಂದ್ರಾಚಾರಿ ಮಾತನಾಡಿ, ಪೋಷಕರ ನಂಬಿಕೆಯನ್ನೇ ಬುಡಮೇಲು ಮಾಡುವ ಘಟನೆಗಳು ಇಲ್ಲಿ ನಡೆದಿವೆ. ಶಿಸ್ತು ಮತ್ತು ಭದ್ರತೆ ಇಲ್ಲವಾಗಿದ್ದು, ಯಾರು ಬೇಕಾದರೂ ಸೀದಾ ಶಾಲೆ ಒಳಗೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.ಹಾಸ್ಟೆಲ್ ನಲ್ಲಿ ಮಲಗಿರುವ ಹೆಣ್ಣು ಮಕ್ಕಳನ್ನು ಬೆಳಿಗ್ಗೆ ಎಬ್ಬಿಸಲು ಪುರುಷರು ಹೋಗುತ್ತಾರೆ. ಇದಕ್ಕೆ ಸ್ಪಷ್ಟನೆ ನೀಡಿ ಎಂದು ಪೋಷಕರು ಪಟ್ಟು ಹಿಡಿದಾಗ, ವಾರ್ಡನ್ ಗೀತಾಂಜಲಿ ಮಾತನಾಡಿ, ಆದರೆ ಈಗ ಮೂರೂವರೆ ವರ್ಷದಿಂದ ಮಹಿಳೆಯರೇ ಆ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರ ಸುರಕ್ಷತೆ ಬಗ್ಗೆ ಸದಾ ಗಮನ ಹರಿಸುತ್ತಿದ್ದೇವೆ ಎಂದು ಉತ್ತರಿಸಿದರು.
18ಕೆಕೆಡಿಯು1.ಕಡೂರು ತಾಲೂಕಿನ ಕುಪ್ಪಾಳಿನ ಮುರಾಜಿ ವಸತಿ ಶಾಲೆಯಲ್ಲಿ ಪೋಷಕರ ಸಭೆ ನಡೆಯಿತು.
18ಕೆಕೆಡಿಯು1ಎ,ಸಭೆಯಲ್ಲಿ ಅಧಿಕಾರಿಗಳೊಂದಿಗೆ ಪೋಷಕರ ವಾಗ್ವಾದ.