ಸಾರಾಂಶ
ನಮ್ಮ ಸರ್ಕಾರವು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುತ್ತದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಸಚಿವ ಡಾ। ಜಿ.ಪರಮೇಶ್ವರ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಮ್ಮ ಸರ್ಕಾರವು ಮಹಿಳಾ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ಹಿಂದೆ ಪೊಲೀಸ್ ಸಹಾಯವಾಣಿ ಮೂಲಕ ಬಂದ ದೂರುಗಳನ್ನು ಆಧರಿಸಿ, ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಲು 20 ನಿಮಿಷ ತೆಗೆದುಕೊಳ್ಳುತ್ತಿದ್ದರು. ಪ್ರಸ್ತುತ 7 ನಿಮಿಷದೊಳಗೆ ಸ್ಥಳದಲ್ಲಿ ಹಾಜರಿರುತ್ತಾರೆ. ಬೆಂಗಳೂರು ನಗರದಲ್ಲಿ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರು ನಿರಂತರ ಕಣ್ಗಾವಲು ಇಟ್ಟಿರುತ್ತಾರೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ತಿಳಿಸಿದ್ದಾರೆ.ಬೆಂಗಳೂರು ನಗರ ಪೊಲೀಸ್ ಹಾಗೂ ಪರಿಹಾರ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ‘ಮಹಿಳೆಯರ ಮೇಲಿನ ದೌರ್ಜನ್ಯ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹೊಸದಾಗಿ ಆರು ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದೆ. ಈಗಿರುವ ಪೊಲೀಸ್ ಸಿಬ್ಬಂದಿಗಳಲ್ಲಿ ಶೇ.8ರಷ್ಟು ಮಹಿಳೆಯರಿದ್ದಾರೆ. ಶೇ.25ರಷ್ಟಾಗಬೇಕು ಎಂಬುದು ಗುರಿ ಹೊಂದಲಾಗಿದೆ. ಮಹಿಳಾ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನಮ್ಮ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಿಸಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮಹಿಳೆಯರ ಬಗ್ಗೆ ಅವಹೇಳನ ಮಾಡುವುದು, ಅವಾಚ್ಯ ಮಾತುಗಳನ್ನು ಹಾಗೂ ತಿರುಚಿದ ವೀಡಿಯೋಗಳನ್ನು ಪ್ರಕಟಿಸುವರ ವಿರುದ್ಧ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದು ಎಂದರು.ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ನಿಮ್ಹಾನ್ಸ್ ಸಂಸ್ಥೆಯ ಮನೋವೈದ್ಯಶಾಸ್ತ್ರ ಪ್ರಾಧ್ಯಾಪಕಿ ಡಾ.ಪ್ರಭಾ ಎಸ್.ಚಂದ್ರ, ವಕೀಲೆ ಸುಮಿತ್ರಾ ಆಚಾರ್ಯ ಉಪಸ್ಥಿತರಿದ್ದರು.