ಸಾಗರ ಖಂಡ್ರೆ ಗೆಲುವು ಖಚಿತ: ದೀಪಕನಾಗ ಪುಣ್ಯಶೆಟ್ಟಿ

| Published : Apr 23 2024, 12:46 AM IST

ಸಾರಾಂಶ

ಕಾಂಗ್ರೆಸ್‌ ಸರಕಾರ ಜಾರಿಗೊಳಿಸಿದ ೫ ಗ್ಯಾರಂಟಿ ಯೋಜನೆಗಳಿಂದ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಸರಕಾರದ ಸಾಧನೆಗಳಿಂದ ಜನರ ಒಲವು ಕಾಂಗ್ರೆಸ್‌ನತ್ತ ಹೆಚ್ಚುತ್ತಿರುವುದರಿಂದ ಬಿಜೆಪಿ ನಾಯಕರಿಗೆ ಸೋಲಿನ ಭೀತಿಯುಂಟಾಗಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಕಾಂಗ್ರೆಸ್‌ ಸರಕಾರ ಜಾರಿಗೊಳಿಸಿದ ೫ ಗ್ಯಾರಂಟಿ ಯೋಜನೆಗಳಿಂದ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಸರಕಾರದ ಸಾಧನೆಗಳಿಂದ ಜನರ ಒಲವು ಕಾಂಗ್ರೆಸ್‌ನತ್ತ ಹೆಚ್ಚುತ್ತಿರುವುದರಿಂದ ಬಿಜೆಪಿ ನಾಯಕರಿಗೆ ಸೋಲಿನ ಭೀತಿಯುಂಟಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಶಶಿಧರ ಪುಣ್ಯಶೆಟ್ಟಿ ಲೇವಡಿ ಮಾಡಿದ್ದಾರೆ.

ಪಟ್ಟಣದಲ್ಲಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೨೦೧೯ರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಡಬಲ ಇಂಜಿನ ಸರಕಾರ ಆಡಳಿತ ನಡೆಸಿವೆ.ಆದರೆ ನಮ್ಮ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾಣಲಿಲ್ಲ. ಬೀದರ ಲೋಕಸಭಾ ಬಿಜೆಪಿ ಸಂಸದ ಭಗವಂತ ಖುಬಾ ಚಿಂಚೋಳಿ ಮೀಸಲು ಮತಕ್ಷೇತ್ರಕ್ಕೆ ಸರಕಾರದಿಂದ ಯಾವುದೇ ಯೋಜನೆ ಅಡಿಯಲ್ಲಿ ಅನುದಾನ ನೀಡಿ ಅಭಿವೃದ್ಧಿಪಡಿಸಲಿಲ್ಲ ಹತ್ತುವರ್ಷ ಸಂಸದರಾಗಿ ಅಧಿಕಾರ ನಡೆಸಿದ ಅವರು ಚಿಂಚೋಳಿ ಮತಕ್ಷೇತ್ರಕ್ಕೆ ನೀಡಿರುವುದು ಕೇವಲ ಸಿಮೆಂಟ್‌ ಕುರ್ಚಿಗಳು ಮಾತ್ರವೆಂದು ಟೀಕಿಸಿದರು.

ಬೀದರ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಾಗರ ಖಂಡ್ರೆ ಅವರು ರಾಜ್ಯದ ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿಯಾಗಿದ್ದರೂ ರಾಜಕೀಯವಾಗಿ ತುಂಬಾ ಅನುಭವ ಹೊಂದಿದ್ದಾರೆ. ಮಾಜಿ ಸಚಿವ ಭೀಮಣ್ಣ ಖಂಡ್ರೆ ಮತ್ತು ಸಚಿವ ಈಶ್ವರ ಖಂಡ್ರೆರವರ ರಾಜಕೀಯ ಪ್ರೇರಣೆಯಿಂದಾಗಿ ಜನರ ಸೇವೆ ಮಾಡಲು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಯುವಕರಿಗೆ ಆದ್ಯತೆ ನೀಡಿದೆ. ನಾನು ಐನೋಳಿ ಜಿಪಂ ಕ್ಷೇತ್ರದಿಂದ ಸ್ಪರ್ಧಿ ಗೆಲುವು ಸಾಧಿಸಿದಾಗ ಕೇವಲ ೨೨ ವರ್ಷದವನಾಗಿದ್ದೆ. ನಂತರ ೨೩ನೇ ವಯಸ್ಸಿನಲ್ಲಿಯೇ ಕಲಬುರಗಿ ಜಿಲ್ಲೆ ಜಿಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ಬೀದರ ಲೋಕಸಭೆ ಮತಕ್ಷೇತ್ರದಲ್ಲಿ ಕಾಂಗ್ರೆಸ ಪಕ್ಷದ ಅಭ್ಯರ್ಥಿ ಸಾಗರ ಖಂಡ್ರೆ ಪರವಾಗಿ ಗಾಳಿ ಬೀಸುತ್ತಿದೆ ಬಿಜೆಪಿಯವರಿಗೆ ಸೋಲಿನ ಭೀತಿಯುಂಟಾಗಿ ಸುಳ್ಳು ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇಬ್ರಾಹಿಮ್ ದೇಗಲಮಡಿ, ಅಲ್ಲಾವುದ್ದೀನ್ ಅನಸಾರಿ, ಶರಣು ಪಪ್ಪಾ, ವೀರಶೆಟ್ಟಿ ಪಾಟೀಲ, ಖಾಜಾ ಪಟೇಲ ನಿಣಾ, ನಂದಕುಮಾರ ಆವಂಟಗಿ, ರಾಜು ನಂದಾ ಇದ್ದರು.