ಸಾರಾಂಶ
ಬೀದರ್: ಸದನದಲ್ಲಿ ಸದಾ ಹಾಜರಿದ್ದು, ಎಲ್ಲ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಶ್ರದ್ಧಯಿಂದ ಆಲಿಸಿ, ಹಿರಿಯರಿಂದ ಸಾಕಷ್ಟು ಅರಿತು, ಕಲಿತು ಸೂಕ್ತವಾಗಿ ಸ್ಪಂದಿಸುವವರು ಮಾತ್ರ ಉತ್ತಮ ಸಂಸದೀಯ ಪಟುವಾಗಿ ಬೆಳೆಯಲು ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ಅವರು, ಬೀದರ್ ಲೋಕಸಭಾ ಕ್ಷೇತ್ರದ ಸಂಸದರಾಗಿ ನೂತನವಾಗಿ ಆಯ್ಕೆಯಾಗಿರುವ ಸಾಗರ ಈಶ್ವರ ಖಂಡ್ರೆಗೆ ಕಿವಿಮಾತು ಹೇಳಿದ್ದಾರೆ.
ಅವರು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ತಮ್ಮನ್ನು ಭೇಟಿಯಾಗಿದ್ದ ಸಾಗರ ಖಂಡ್ರೆಗೆ ಆಶೀರ್ವದಿಸಿ, ಕೇಂದ್ರ ಸಚಿವ ಖೂಬಾ ವಿರುದ್ಧ ಪ್ರಚಂಡ ಬಹುಮತದಿಂದ ಜಯ ಸಾಧಿಸಿರುವುದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಸದನದಲ್ಲಿ ಸಂಸದರಾಗಿ ಹೇಗೆ ರಾಜ್ಯದ ಹಿತ ಕಾಯಬೇಕು ಎಂಬ ಬಗ್ಗೆ ತಿಳಿಸಿದ ಸಿಎಂ, ಗ್ರಂಥಾಲಯದ ಪ್ರಯೋಜನೆ ಪಡೆದು ಸದನದಲ್ಲಿ ಮುತ್ಸದ್ದಿ ರಾಜಕಾರಣಿಗಳು ಮಾಡಿರುವ ಭಾಷಣ ಓದುವಂತೆಯೂ ಸಲಹೆ ಮಾಡಿದರು.
ಈ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್‌ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ, ಮಾಜಿ ಶಾಸಕ ಅಶೋಕ ಖೇಣಿ, ಚಿಂಚೋಳಿ ಸುಭಾಷ ವಿ ರಾಠೋಡ, ಕಲಬುರಗಿ ಮಾಜಿ ಮೇಯರ್ ಶರಣು ಮೋದಿ ಇತರರಿದ್ದರು.ಕಲ್ಯಾಣ ಕರ್ನಾಟಕ ನಾಯಕರಿಗೆ ಸಿಎಂ ಅಭಿನಂದನೆ:
ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದೂ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಯ ತಂದುಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.