ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನಿರಂತರ ಫೌಂಡೇಶನ್ ಆಯೋಜಿಸಿದ ಸಹಜ ರಂಗ 2024 ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಜರುಗಿತು.ನಿರಂತರ ಸಂಸ್ಥೆಯು ರಂಗಭೂಮಿ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಪರಿಸರ ಹಾಗೂ ಯುವ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲವು ಚಟುವಟಿಕೆ ರೂಪಿಸುತ್ತಿದೆ. 1 ತಿಂಗಳ ಕಾಲ ನಡೆಯುವ ಈ ಶಿಬಿರದಲ್ಲಿ ರಂಗಭೂಮಿ ಇತಿಹಾಸ, ರಂಗ ಸಂಗೀತ, ಪರಿಸರ, ನಟನೆ, ಸಮರಕಲೆ ಸೇರಿದಂತೆ ಸಾಹಿತ್ಯ, ಪ್ರಚಲಿತ ವಿದ್ಯಮಾನಗಳ ಬಗ್ಗೆ ತರಗತಿಗಳು ರೂಪುಗೊಂಡಿರುತ್ತವೆ.
ನಾಡಿನ ಸಾಹಿತಿಗಳು, ವಿಷಯ ಪರಿಣಿತರು, ರಂಗ ನಿರ್ದೇಶಕರು, ಸಂಗೀತ ನಿರ್ದೇಶಕರು ತರಗತಿಗಳನ್ನು ತೆಗೆದುಕೊಂಡು ಶಿಬಿರಾರ್ಥಿಗಳೊಂದಿಗೆ ಚರ್ಚೆ ಸಂವಾದಗಳಲ್ಲಿ ಪಾಲ್ಗೊಂಡಿದ್ದರು. ಹಾಗೆಯೇ ಪ್ರಸ್ತುತ ವಿದ್ಯಮಾನ, ಆಗು ಹೋಗುಗಳ ಬಗ್ಗೆ ವಿಸ್ತೃತ ಚರ್ಚೆ ಕೈಗೊಂಡು, ಇದಕ್ಕೆ ಪೂರಕವಾದ ನಾಟಕವನ್ನು ಶಿಬಿರಾರ್ಥಿಗಳಿಂದಲೇ ಮಾಡಿಸಲಾಯಿತು.ಬಿಜಿಎಸ್ ವಿದ್ಯಾಸಂಸ್ಥೆಯ ಶ್ರೀ ಸೋಮನಾಥ ಸ್ವಾಮೀಜಿ ಮಾತನಾಡಿ, ರಂಗಭೂಮಿ ಸದಾ ಪ್ರಯೋಗಶೀಲತೆ ಒಳಗೊಂಡಿರುತ್ತದೆ. ಕಳೆದ ಮೂರು ದಶಕದಿಂದ ನಿರಂತರ ರಂಗಭೂಮಿಯನ್ನು ಒಂದು ಭಾಷೆಯಂತೆ ಬಳಸುತ್ತಾ ಸಮಾಜದೊಟ್ಟಿಗೆ ಸಂಧಿಸುತ್ತಿದೆ. ರಂಗಭೂಮಿಯ ವಿಸ್ತರಣೆಯಾಗಿ ನೂರಾರು ಸೃಜನಶೀಲ ಕಾರ್ಯಕ್ರಮವನ್ನು ಈವರೆಗೂ ಹಮ್ಮಿಕೊಂಡು, ರಾಜ್ಯದಾದ್ಯಂತ ಸಂಚರಿಸಿದೆ. ಇದರ ಭಾಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಸಹಜರಂಗ ಎಂಬ ರಂಗತರಬೇತಿ ಶಿಬಿರವನ್ನು ಪ್ರತಿ ವರ್ಷವೂ ನಡೆಸಿಕೊಂಡು ಬರುತ್ತಿದೆ. ಪ್ರತಿ ವರ್ಷವೂ ಒಂದೊಂದು ಆಶಯವನ್ನಾಗಿಸಿಕೊಂಡು ಶಿಬಿರ ರೂಪಿಸುತ್ತಾ ಶಿಬಿರಾರ್ಥಿಯನ್ನು ಸಂವೇದನೀಯನನ್ನಾಗಿಸುವುದೇ ಮುಖ್ಯ ಗುರಿ ಎಂದರು.
ನಿರಂತರದ ಅಧ್ಯಕ್ಷ ಸುಗುಣ ಮಾತಾನಾಡಿ, ನಮ್ಮೊಳಗೆ ಒಂದು ಪ್ರಕೃತಿಯಿದೆ ಅಂತೆಯೇ ನಮ್ಮ ಹೊರಗೂ ಒಂದು ಪ್ರಕೃತಿಯಿದೆ. ಎರಡರಲ್ಲೂ ಅಗಾಧ ವೈವಿಧ್ಯತೆಯಿದೆ. ಆದರೂ ಪರಸ್ಪರ ಸಮಗ್ರತೆಯನ್ನು ಕಾಯ್ದುಕೊಂಡಿವೆ. ಹಾಗಾಗಿಯೇ ಏಕತೆಯ ಬೇರು ಅನನ್ಯತೆಯಲ್ಲಡಗಿದೆ. ಜಗತ್ತಿನಲ್ಲಿ ಪ್ರತಿಯೊಂದು ಕಣಕ್ಕೂ ತನ್ನದೇ ಆದ ಅಸ್ತಿತ್ವ ಇರುವಂತೆ ಪ್ರತಿಯೊಬ್ಬ ಮನುಷ್ಯನಿಗೂ ಇದೆ. ಒಂದು ಚಿತ್ರ ಅಥವಾ ದೃಶ್ಯದಲ್ಲಿರುವ ಪ್ರತಿಯೊಂದು ಬಣ್ಣಕ್ಕೂ ತನ್ನದೇ ಮಹತ್ವವಿರುವಂತೆ. ಹಲವು ಬಣ್ಣಗಳು ಸೇರಿ ಒಂದು ಉತ್ತಮ ಚಿತ್ರವಾಗುತ್ತದೆ ಎಂದು ಅವರು ಹೇಳಿದರು.ಬಣ್ಣಗಳು ಒಂದು ಚಿತ್ರದಲ್ಲಿ ವಹಿಸುವ ಪಾತ್ರವನ್ನು ನಮ್ಮ ಬದುಕಿನಲ್ಲೂ ವಹಿಸುತ್ತವೆ. ಅದನ್ನು ಚಂದವಾಗಿಸುತ್ತದೆ. ಬಣ್ಣಗಳು ರೂಪಕವೂ ಹೌದು ಹಾಗೆಯೇ ಅನನ್ಯತೆಯ ಸಂಕೇತವೂ ಹೌದು. ನಮ್ಮ ಸುತ್ತಲೂ ಇರುವ ಈ ಬಣ್ಣಗಳು ಬದುಕನ್ನು ಒಂದು ಸುಂದರ ಚಿತ್ರವನ್ನಾಗಿಸುವಂತೆ ಮಾಡುವುದೇ ನಿರಂತರದ ಉದ್ದೇಶ ಎಂದು ಅವರು ತಿಳಿಸಿದರು.