ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
84ನೇ ವರ್ಷದ ಮಹೋತ್ಸವದ ಅಂಗವಾಗಿ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ಲೋಕಕಲ್ಯಾಣಾರ್ಥವಾಗಿ ಸಹಸ್ರ ಮೋದಕ ಗಣಪತಿ ಹೋಮ ಭಕ್ತಿಪೂರ್ಣವಾಗಿ ನೆರವೇರಿತು.ವೇದಬ್ರಹ್ಮ ಶ್ರೀ ಆದಿತ್ಯ ಕಣಕಟ್ಟೆ ಮತ್ತು ಚಂದ್ರಶೇಖರ್ ಅವರ ನೇತೃತ್ವದಲ್ಲಿ ರೈತರ ಹಾಗೂ ಮಹಾಜನರ ಕಲ್ಯಾಣಕ್ಕಾಗಿ ನವಗ್ರಹ, ಮೃತ್ಯುಂಜಯ ಮತ್ತು ಸಹಸ್ರ ಮೋದಕ ಹೋಮ ಸೇರಿದಂತೆ ಹಲವು ಧಾರ್ಮಿಕ ಪೂಜಾ ಕೈಂಕರ್ಯ ನೆರವೇರಿಸಲ್ಪಟ್ಟವು. ಹೋಮದ ಪೂರ್ಣಾಹುತಿ ವೇಳೆ ಶಾಸಕ ಹಾಗೂ ರಾಜ್ಯ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಭಾಗಿಯಾಗಿ ಮಂಗಳದ್ರವ್ಯಗಳನ್ನು ಅಗ್ನಿಗೆ ಅರ್ಪಿಸಿ ಮಾತನಾಡಿದರು. ಸನಾತನ ಧರ್ಮದಲ್ಲಿ ಹೋಮಗಳಿಗೆ ವಿಶಿಷ್ಟ ಮಹತ್ವವಿದ್ದು, ಲೋಕಕಲ್ಯಾಣಕ್ಕಾಗಿ ಈ ಹೋಮಗಳು ಪ್ರಾರ್ಥನೆಯ ಶಕ್ತಿಯ ಪ್ರತೀಕವಾಗಿವೆ. ಕಳೆದ 84 ವರ್ಷಗಳಿಂದ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯಗಳು ಇಂದು ಭಕ್ತರ ನಂಬಿಕೆಯ ಆಧಾರವಾಗಿವೆ. ರೈತರ ಕಷ್ಟಗಳು ನಿವಾರಣೆಯಾಗಲಿ, ಉತ್ತಮ ಮಳೆ ಹಾಗೂ ಬೆಳೆಯಿಂದ ಶಾಂತಿ ಮತ್ತು ನೆಮ್ಮದಿ ನೆಲೆಸಲಿ ಎಂದು ಆಶೀರ್ವದಿಸಿದರು.
ಭಕ್ತ ಮಂಡಳಿ ಅಧ್ಯಕ್ಷ ಸತ್ಯಕಾಂತ ರವೀಂದ್ರನಾಥ್ ಮಾತನಾಡಿ, ಪ್ರಸನ್ನ ಗಣಪತಿಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರ ಆಗಮನವಾಗುತ್ತಿದ್ದು, ಈ ಅವಧಿಯಲ್ಲಿ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದರು. ಲೋಕಕಲ್ಯಾಣಾರ್ಥ ಹೋಮಗಳಲ್ಲಿ ಭಾಗವಹಿಸುವ ಭಕ್ತರು ಪುನೀತರಾಗಿ ಶ್ರೀಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ಪ್ರಸನ್ನ ಗಣಪತಿಯ ಮೇಲಿನ ಭಕ್ತಿ ಹಾಗೂ ನಂಬಿಕೆಯೇ ನಮ್ಮ ಶಕ್ತಿ ಮತ್ತು ಪ್ರೇರಣೆ ಎಂದು ಹೇಳಿದರು.ಪ್ರತಿದಿನ ಸಂಜೆ ಆಸ್ಥಾನ ಮಂಟಪದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳಲ್ಲಿ ಸ್ಥಳೀಯ ಹಾಗೂ ಹೊರಗಿನಿಂದ ಬಂದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಉತ್ಸವ ಸಮಿತಿ ಸಂಚಾಲಕರಾದ ಟಿ.ಆರ್. ನಾಗರಾಜು ಮಾತನಾಡಿ, 84 ವರ್ಷ ಪೂರೈಸಿರುವ ಶ್ರೀಯವರ ವಿಸರ್ಜನಾ ಮಹೋತ್ಸವ ಅಕ್ಟೋಬರ್ 31ರಿಂದ ಪ್ರಾರಂಭವಾಗಿ ನವೆಂಬರ್ 1ರಂದು ರಾತ್ರಿ 8 ಗಂಟೆಗೆ ಕಂತೇನಹಳ್ಳಿ ಕೆರೆಯಲ್ಲಿ ಭವ್ಯವಾಗಿ ನೆರವೇರಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಶೇಷ ಕಲಾ ತಂಡಗಳ ಪ್ರದರ್ಶನ ಹಾಗೂ ಮದ್ದು ಗುಂಡುಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪದಾಧಿಕಾರಿಗಳಾದ ನಾಗಭೂಷಣ, ವೆಂಕಟೇಶ್ ಬಾಬು, ಸ್ವಾಮಿ, ಬಾಲಾಜಿ, ಬಸವರಾಜು, ಮಲ್ಲೇಶ್, ಜೇನುಕಲ್ಲು ಜಯಣ್ಣ, ಕುಮಾರಸ್ವಾಮಿ, ಪ್ರಭುದೇವ, ವಿಪ್ರಮಂಜು, ವಿಭವ್ ಇಟಗಿ, ಪುರೋಹಿತರಾದ ವೆಂಕಟೇಶ್, ಗಣೇಶ್, ಪ್ರಕಾಶ್, ಮೋಹನ್ ರಾಜ್, ಶ್ರೀವತ್ಸ ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿ ಶ್ರೀ ಪ್ರಸನ್ನ ಗಣಪತಿಯ ಆಶೀರ್ವಾದ ಪಡೆದರು.