ವಾತ್ಸಲ್ಯ ಬಿ.ಇಡಿ ಕಾಲೇಜಿನಲ್ಲಿ ಸರ್ವೋದಯ ದಿನ

| Published : Feb 01 2024, 02:00 AM IST

ಸಾರಾಂಶ

ವಿಶ್ವದ ನಕಾಶೆಯಲ್ಲಿ ನಮ್ಮ ಭಾರತಕ್ಕೊಂದು ಬಹುದೊಡ್ಡ ಗೌರವ ತಂದು ಕೊಟ್ಟಿರುವ, ಗಾಂಧೀಜಿ ಮಾನವಕುಲ ಕಂಡ ಮಹಾಚೇತನ. ಮನುಷ್ಯತ್ವದ ಪುನರುತ್ಧಾನದ ಪ್ರವರ್ತಕರಾದ ಗಾಂಧೀಜಿ ಅವರ ನಡೆ-ನುಡಿ, ಬದುಕು- ಬರಹ ಎಲ್ಲವೂ ಸರ್ವೋದಯವೇ. ಸರ್ವರ ಉದ್ಧಾರವೇ ಗಾಂಧೀಜಿಯ ಗುರಿ ಆಗಿತ್ತು

ಕನ್ನಡಪ್ರಭ ವಾರ್ತೆ ಮೈಸೂರು

ಅಹಿಂಸಾವಾದಿಯಾಗಿ ಜಗತ್ತಿಗೇ ಶಾಂತಿ ಪಾಠ ಹೇಳಿದ ಸರ್ವೋದಯದ ಕನಸುಗಾರ ಮಹಾತ್ಮಗಾಂಧಿ ಎಂದು ಸಾಹಿತಿ ಬನ್ನೂರು ಕೆ. ರಾಜು ತಿಳಿಸಿದರು.

ನಗರದ ಅಗ್ರಹಾರದಲ್ಲಿರುವ ಹೊಸ ಮಠದ ಶ್ರೀ ನಟರಾಜ ಪ್ರತಿಷ್ಠಾನದ ವಾತ್ಸಲ್ಯ ಬಿ.ಇಡಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಸರ್ವೋದಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜಗತ್ತಿಗೆ ಅಹಿಂಸಾ ತತ್ವವನ್ನು ಸಾರಿದ ಭಾರತದ ಸುಪುತ್ರ ಮಹಾತ್ಮ ಗಾಂಧೀಜಿಯನ್ನು ಪೂಜಿಸಬೇಕಾದ ಭಾರತೀಯ ವ್ಯಕ್ತಿಯೇ ಹತ್ಯೆ ಗೈದದ್ದು ಬಹು ದೊಡ್ಡ ದುರಂತ ಹಾಗೂ ವಿಪರ್ಯಾಸ ಎಂದರು.

ವಿಶ್ವದ ನಕಾಶೆಯಲ್ಲಿ ನಮ್ಮ ಭಾರತಕ್ಕೊಂದು ಬಹುದೊಡ್ಡ ಗೌರವ ತಂದು ಕೊಟ್ಟಿರುವ, ಗಾಂಧೀಜಿ ಮಾನವಕುಲ ಕಂಡ ಮಹಾಚೇತನ. ಮನುಷ್ಯತ್ವದ ಪುನರುತ್ಧಾನದ ಪ್ರವರ್ತಕರಾದ ಗಾಂಧೀಜಿ ಅವರ ನಡೆ-ನುಡಿ, ಬದುಕು- ಬರಹ ಎಲ್ಲವೂ ಸರ್ವೋದಯವೇ. ಸರ್ವರ ಉದ್ಧಾರವೇ ಗಾಂಧೀಜಿಯ ಗುರಿ ಆಗಿತ್ತು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ದಳಪತಿ ಮಾತನಾಡಿ, ವಿಶ್ವ ಕಂಡ ಮಾನವೀಯ ಗುಣಗಳ ಮೇರು ಮಹಾತ್ಮ ಗಾಂಧಿ. ಅವರು ನಮ್ಮ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾದರಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಬದುಕು, ಬರಹ, ಸಾಧನೆ, ಸಿದ್ಧಿಯನ್ನು ಸವಿವರವಾಗಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ ಅಧ್ಯಯನಕ್ಕೆ ಅನುಕೂಲ ಆಗುವಂತೆ ಸಮಗ್ರವಾಗಿ ತಿಳಿಸಿಕೊಟ್ಟರು.

ಕಾಲೇಜಿನ ಅಧೀಕ್ಷಕ ದಂಡಿಕೆರೆ ನಾಗರಾಜ್, ಸಹಾಯಕ ಪ್ರಾಧ್ಯಾಪಕರಾದ ಶೋಭಾ, ವೀಣಾ ಕುಂಚೂರ ಇದ್ದರು. ಆರ್. ಭಾಗ್ಯ ಪ್ರಾರ್ಥಿಸಿದರು. ಕೆ.ಎಲ್. ಮಮತಾ ಸ್ವಾಗತಿಸಿದರು. ಆರ್. ಪ್ರಮೋದ್ ಕುಮಾರ್ ವಂದಿಸಿದರು. ಎನ್. ಅಪೂರ್ವ ನಿರೂಪಿಸಿದರು.