ಕನ್ನಡ ಸಂವೇದನೆಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯ; ಕರವೇ ರವಿ

| Published : May 06 2024, 12:32 AM IST

ಕನ್ನಡ ಸಂವೇದನೆಗೆ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯ; ಕರವೇ ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆ ಮತ್ತು ಸಾಹಿತ್ಯದ ಅನನ್ಯತೆಯನ್ನು ಉಳಿಸುವ, ಬೆಳೆಸುವ ಮಹಾದಾಸೆಯಿಂದ ಸ್ವಾತಂತ್ರ್ಯ ಪೂರ್ವದಲ್ಲೇ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ. ಇದು ಕನ್ನಡ ಭಾಷಿಕರು ಆಡಳಿತಾತ್ಮಕವಾಗಿ ಬೇರೆ ಭಾಷೆಯ ಅಧೀನದಲ್ಲಿದ್ದರೂ ಅವರನ್ನು ಭಾಷೆ ಮತ್ತು ಸಾಹಿತ್ಯ ಬಾಂಧವ್ಯದಿಂದ ಒಗ್ಗೂಡಿಸಿ ಕನ್ನಡ ಕಟ್ಟುವ ಕೆಲಸಕ್ಕೆ ಸಹಕಾರಿಯಾಯಿತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನಸನ್ನು ನನಸು ಮಾಡುವ ಕೆಲಸವನ್ನು ಪರಿಷತ್ತು ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕು ಕಸಾಪ ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡದ ವಿಚಾರಗಳ ಬಗ್ಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹತ್ವದ ಪಾತ್ರವನ್ನು ವಹಿಸಬೇಕಾಗಿದೆ ಎಂದರು.

ಬೆಂ.ಗ್ರಾ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ರವಿಕಿರಣ್ ಕೆ.ಆರ್. ಮಾತನಾಡಿ, ಕನ್ನಡ ಭಾಷೆ ಮತ್ತು ಸಾಹಿತ್ಯದ ಅನನ್ಯತೆಯನ್ನು ಉಳಿಸುವ, ಬೆಳೆಸುವ ಮಹಾದಾಸೆಯಿಂದ ಸ್ವಾತಂತ್ರ್ಯ ಪೂರ್ವದಲ್ಲೇ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ. ಇದು ಕನ್ನಡ ಭಾಷಿಕರು ಆಡಳಿತಾತ್ಮಕವಾಗಿ ಬೇರೆ ಭಾಷೆಯ ಅಧೀನದಲ್ಲಿದ್ದರೂ ಅವರನ್ನು ಭಾಷೆ ಮತ್ತು ಸಾಹಿತ್ಯ ಬಾಂಧವ್ಯದಿಂದ ಒಗ್ಗೂಡಿಸಿ ಕನ್ನಡ ಕಟ್ಟುವ ಕೆಲಸಕ್ಕೆ ಸಹಕಾರಿಯಾಯಿತು. ಇಂತಹ ಕನ್ನಡ ಕಟ್ಟುವ ಕಾರ್ಯಕ್ಕೆ ನೆರವಾಗಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ 1915ರಂದು ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಮಹತ್ವದ ಕವಿಗಳ ಕೃತಿಗಳ ಹಕ್ಕು ಸ್ವಾಮ್ಯ ಹೊಂದಿದೆ. ಕನ್ನಡ ನಿಘಂಟು ರಚನೆ ಮತ್ತು ಪರಿಷ್ಕರಣೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಉತ್ತಮ ಗ್ರಂಥಾಲಯ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆಯ ಬೆಳವಣಿಗೆಗೆ, ಅಧ್ಯಯನ ಮತ್ತು‌ ಸಂಶೋಧನೆಗೆ ಸಹಕಾರಿಯಾಗಿದೆ ಎಂದರು.

ಕವಯಿತ್ರಿ ಆಶಾ ಗುಡ್ಡದಹಳ್ಳಿ ಮಾತನಾಡಿ, ಕನ್ನಡ ಸಾಹಿತ್ಯ ‌ಪರಿಷತ್ತು ನಮ್ಮ ನಾಡು,ನುಡಿ,ನೆಲ ಮತ್ತು ಜಲದ ವಿಚಾರಗಳನ್ನು ಒಳಗೊಂಡಂತೆ ಕನ್ನಡಪರ ಚಟುವಟಿಕೆಗಳ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ. ಕನ್ನಡ ನಾಡು ಮತ್ತು ನುಡಿಗೆ ಸಾಹಿತಿಗಳಷ್ಟೇ ಕೊಡುಗೆಯನ್ನು ಕನ್ನಡಪರ ಹೋರಾಟಗಾರರೂ ನೀಡಿದ್ದಾರೆ ಎಂಬುದನ್ನು ಮರೆಯಬಾರದು. ಕನ್ನಡ ಸಾಹಿತ್ಯ ಪರಿಷತ್ತು ಸದಾ ಜನಸಾಮಾನ್ಯರ ಪರಿಷತ್ತಾಗಿ ಕಾರ್ಯ‌ ನಿರ್ವಹಿಸಬೇಕು ಎಂದರು.‌

ತಾ.ಕಸಾಪ ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಹಾಗೂ ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿ ಷಫೀರ್, ನವೋದಯ ವಿದ್ಯಾಲಯ ನಿವೃತ್ತ ಅಧ್ಯಾಪಕ ವಿ.ಎಸ್.ಹೆಗಡೆ, ನಾಗದಳ ಸಂಚಾಲಕ ಸಿ.ನಟರಾಜ್, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷ ನಾಗರಾಜ್, ಬಾಶೆಟ್ಟಿಹಳ್ಳಿ ಪ್ರೇರಣಾ ಸಂಸ್ಥೆಯ ಅಧ್ಯಕ್ಷೆ ನೇತ್ರಾವತಿ, ಪ್ರತಿನಿಧಿ ಮುನಿರತ್ನಮ್ಮ, ಡಾ.ರಾಜ್ ಕುಮಾರ್ ಅಭಿಮಾನಿ‌‌ ಸಂಘದ ಪರಮೇಶ್ ಮುಂತಾದವರು ಭಾಗವಹಿಸಿದ್ದರು.