ಸಾರಾಂಶ
ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ದಫ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
‘ಬ್ಯಾರಿ ಎಲ್ತ್‌ಗಾರ್ತಿಮಾರೊ ಕೂಟ’ದ ವತಿಯಿಂದ ‘ಸಾಹಿತ್ಯತ್ತೊ ಒಸರ್ 2024’ ಕಾರ್ಯಕ್ರಮ ನಗರದ ಸಹೋದಯ ಹಾಲ್‌ನಲ್ಲಿ ಭಾನುವಾರ ನಡೆಯಿತು.14 ಬ್ಯಾರಿ ಲೇಖಕಿಯರು ಬ್ಯಾರಿ, ತುಳು, ಕನ್ನಡದಲ್ಲಿ ಕವನಗಳನ್ನು ವಾಚಿಸಿದರು. ‘ಪಲಕತ್ತೊ ಒಸರ್’ ಶೀರ್ಷಿಕೆಯಡಿ ನಾಲ್ವರು ಲೇಖಕಿಯರು ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿಚಾರ ಮಂಡಿಸಿದರು.ಬ್ಯಾರಿ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ದಫ್ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 1980ರ ಬಳಿಕ ಬ್ಯಾರಿ ಸಮಾಜದಲ್ಲಿ ಶೈಕ್ಷಣಿಕ ಕ್ರಾಂತಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾರಿ ವಿದ್ಯಾರ್ಥಿನಿಯರು ಶಿಕ್ಷಣದಲ್ಲಿ ನಿರೀಕ್ಷೆಗೂ ಮೀರಿ ಸಾಧನೆ ಮಾಡುತ್ತಿದ್ದಾರೆ. ಅದರ ಪರಿಣಾಮವೇ ಇಂದು ಅಧಿಕ ಸಂಖ್ಯೆಯಲ್ಲಿ ಬ್ಯಾರಿ ಲೇಖಕಿಯರು ಬರೆಯುವಂತಾಗಿದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ವೇದಿಕೆಯಲ್ಲಿ ಹಿರಿಯ ಲೇಖಕಿ ಝುಲೇಖಾ ಮುಮ್ತಾಝ್ ಇದ್ದರು. ಕಾರ್ಯಕ್ರಮದ ಸಂಚಾಲಕಿ ಫಾತಿಮಾ ರಲಿಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುನೀರಾ ತೊಕ್ಕೊಟ್ಟು ಸ್ವಾಗತಿಸಿದರು. ಶಹೀಮಾ ಇಸ್ಮತ್ ಪಜೀರ್ ಕಿರಾಅತ್ ಪಠಿಸಿದರು. ಅಸ್ಮತ್ ವಗ್ಗ ನಿರೂಪಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮಿಸ್ರಿಯಾ ಐ. ಪಜೀರ್, ಯಾವುದೇ ಬರಹ ಓದುಗರ ಮನವನ್ನು ಸದಾ ಕಾಡಬೇಕು. ತಲ್ಲಣನ್ನೂ ಸೃಷ್ಟಿಸಬೇಕು, ಜಾಗೃತಿ ಮೂಡಿಸಬೇಕು. ಆಗ ಅದು ಸಶಕ್ತವಾಗಿರುತ್ತದೆ. ಕೇವಲ ಬರೆದರೆ ಸಾಲದು, ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬ್ಯಾರಿ ಲೇಖಕಿಯರು ಮುಂದೆ ಬರಬೇಕು ಎಂದರು. ಉಮೈರತ್ ಕುಮೇರ್ ನಿರೂಪಿಸಿದರು.